ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಜಾಗ ರಾಜಾರೋಷವಾಗಿ ಅತಿಕ್ರಮಣ

ಹಣ, ಅಧಿಕಾರ ಇದ್ದಲ್ಲಿ ಯಾವ ಕಾನೂನುಬಾಹಿರ ಕೃತ್ಯ ಮಾಡಿದರೂ ತಡೆಯುವವರು ಇಲ್ಲ ಎನ್ನುವ ಮನೋಭಾವ ಕೆಲವರಲ್ಲಿದೆ. ಈ ಮನೋಭಾವಕ್ಕೆ ತಕ್ಕಂತೆ ಇಂಥಹ ಕಾನೂನುಬಾಹಿರ ಕೃತ್ಯಗಳಿಗೆ ಕಡಿವಾಣ ಹಾಕುವ ಅಧಿಕಾರಿ ವರ್ಗವೂ ಸುಮ್ಮನಿದ್ದರೆ, ಇಂಥವರ ದಬ್ಬಾಳಿಕೆಯೂ ಹೆಚ್ಚಾಗುತ್ತದೆ. ಇಂಥಹುದೇ ಒಂದು ಪ್ರಕರಣ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲೂ ನಡೆದಿದ್ದು, ರಸ್ತೆ ಪಕ್ಕದಲ್ಲಿರುವ ಸರಕಾರಿ ಜಾಗಕ್ಕೆ ಕೆಲವು ವ್ಯಕ್ತಿಗಳು ಬೇಲಿ ಹಾಕುವ ಮೂಲಕ ರಾಜಾರೋಷವಾಗಿ ಅತಿಕ್ರಮಣ ಮಾಡಿದ್ದಾರೆ.

ಇದು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕ ಎನ್ನುವಲ್ಲಿ ಕಳೆದ 20 ವರ್ಷಗಳಿಂದ ಗೂಡ್ಸ್ ವಾಹನಗಳು ಪಾರ್ಕ್ ಮಾಡುತ್ತಿದ್ದ ಜಾಗ. ಆದರೆ ಒಂದು ದಿನ ರಾತ್ರಿಯಿಂದ ಬೆಳಿಗ್ಗೆ ಆಗುವ ಸಮಯದೊಳಗೆ ಈ ಜಾಗಕ್ಕೆ ಮಣ್ಣು ಹಾಕಿ , ಬೇಲಿ ಹಾಕಿ ಅತಿಕ್ರಮಿಸಿಕೊಂಡಿರುವ ಪ್ರಕರಣ ನಡೆದಿದೆ. ಪುತ್ತೂರು- ಕಾಸರಗೋಡು ರಾಜ್ಯ ಹೆದ್ದಾರಿಯಲ್ಲಿ ಬರುವ ಕಬಕ ಜಂಕ್ಷನ್ ನ ಬಳಿಯೇ ಈ ಗೂಡ್ಸ್ ವಾಹನಗಳ ಪಾರ್ಕಿಂಗ್ ಜಾಗವಿದ್ದು, ಏಕಾಏಕಿ ಈ ರೀತಿಯ ಅತಿಕ್ರಮಣ ನಡೆದಿರುವುದು ಸಾರ್ವಜನಿಕರ ಆಶ್ಚರ್ಯ ಮತ್ತು ಆಕ್ರೋಶಕ್ಕೂ ಕಾರಣವಾಗಿದೆ. ಜಿಲ್ಲಾ ಪಂಚಾಯತ್ ಮತ್ತು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುವ 12 ಸೆಂಟ್ಸ್ ಜಾಗದಲ್ಲಿ ಪಿಕಪ್ ಹಾಗೂ ಇತರ ಗೂಡ್ಸ್ ವಾಹನಗಳು ಪಾರ್ಕಿಂಗ್ ಮಾಡಿಕೊಂಡಿದ್ದವು. ಈ ಪಾರ್ಕಿಂಗ್ ಗೆ ಸ್ಥಳೀಯ ಕಬಕ ಗ್ರಾಮಪಂಚಾಯತ್ ಕೂಡಾ ಅನುಮತಿಯನ್ನೂ ನೀಡಿತ್ತು. ಆದರೆ ಏಕಾಏಕಿ ಈ ರೀತಿಯಲ್ಲಿ ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಪ್ರಶ್ನಿಸಿ ಸ್ಥಳೀಯ ಪಿಕಪ್ ವಾಹನ ಚಾಲಕರು ಹಾಗೂ ಸ್ಥಳೀಯರು ಈ ವಿಚಾರವನ್ನು ಕಬಕ ಪಂಚಾಯತ್, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಹಾಗೂ ಶಾಸಕರಿಗೂ ಮನವಿಯನ್ನು ನೀಡಿದ್ದಾರೆ. ಪುತ್ತೂರು ಶಾಸಕ ಸಂಜೀವ ಮಠಂದೂರು ಸ್ಥಳಕ್ಕೆ ಆಗಮಿಸಿ ಅತಿಕ್ರಮಣಗೊಂಡ ಸ್ಥಳದ ಸರ್ವೆ ನಡೆಸುವಂತೆ ಸೂಚಿಸಿರುವ ಹಿನ್ನಲೆಯಲ್ಲಿ ಪಂಚಾಯತ್ ಜಾಗದ ಸರ್ವೆಯನ್ನು ನಡೆಸಿದ್ದು, ಇದರಲ್ಲಿ ಅತಿಕ್ರಮಿಸಿದ ಸ್ಥಳ ಸರಕಾರಿ ಜಾಗವೆಂದೂ ತಿಳಿದುಬಂದಿದೆ. ಈ ಹಿನ್ನಲೆಯಲ್ಲಿ ಸ್ಥಳದಲ್ಲಿ ಹಾಕಲಾದ ತಂತಿ ಬೇಲಿ ಹಾಗೂ ಮಣ್ಣನ್ನು ಕೂಡಲೇ ತೆರವುಗೊಳಿಸುವಂತೆ ಶಾಸಕರು ಪಂಚಾಯತ್ ಅಧಿಕಾರಿಗಳಿಗೆ ಸೂಚಿಸಿದ್ದರೂ, ಈ ವರೆಗೂ ಅತಿಕ್ರಮಣವನ್ನು ತೆರವುಗೊಳಿಸುವ ಕಾರ್ಯ ನಡೆದಿಲ್ಲ ಎನ್ನುತ್ತಾರೆ ಪಿಕ್‍ಅಪ್ ವಾಹನ ಚಾಲಕ ಪುರುಷೋತ್ತಮ್.
.
ಜಿಲ್ಲಾ ಪಂಚಾಯತ್ ರಸ್ತೆಯಿಂದ 20 ಮೀಟರ್ ಹಾಗೂ ರಾಜ್ಯ ಹೆದ್ದಾರಿಯಿಂದ 45 ಮೀಟರ್ ವ್ಯಾಪ್ತಿಯನ್ನು ರಸ್ತೆ ಹಾಗೂ ಇತರ ವ್ಯವಸ್ಥೆಗಳಿಗಾಗಿ ಬಿಡಬೇಕೆಂಬ ಕಾನೂನು ಜಾರಿಯಲ್ಲಿದ್ದರೂ, ಕಬಕದಲ್ಲಿ ಮಾತ್ರ ಈ ಕಾನೂನಿಗೆ ಬೆಲೆಯಿಲ್ಲ ಎನ್ನುವ ರೀತಿಯ ವ್ಯವಸ್ಥೆಗಳು ನಡೆಯುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಿದ್ದು, ಜಿಲ್ಲಾಧಿಕಾರಿ ತಹಶೀಲ್ದಾರ್ ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದ್ದರೂ, ಅಧಿಕಾರಿಗಳು ಈ ವರೆಗೂ ಸ್ಥಳಕ್ಕೆ ಭೇಟಿ ನೀಡದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜಾಗವನ್ನು ಅತಿಕ್ರಮಿಸಿದ ವ್ಯಕ್ತಿಗಳ ಜೊತೆ ಈ ಅಧಿಕಾರಿಗಳೂ ಶಾಮೀಲಾಗಿದ್ದಾರೆಯೇ ಎನ್ನುವ ಸಂಶಯಗಳೂ ಮೂಡುತ್ತಿದೆ ಎನ್ನುವುದು ಸಾರ್ವಜನಿಕರ ಆರೋಪವೂ ಆಗಿದೆ. ರಸ್ತೆಯ ಪಕ್ಕದಲ್ಲೇ ತಂತಿ ಬೇಲಿಗಳನ್ನು ಹಾಕಿರುವ ಕಾರಣಕ್ಕಾಗಿ ಈ ರಸ್ತೆಯಲ್ಲಿ ಸಾಗುವ ಶಾಲಾ ಮಕ್ಕಳ ಹಾಗೂ ಸಾರ್ವಜನಿಕರಿಗೆ ತಂತಿ ಬೇಲಿಗಳು ಕಿರಿಕಿರಿಯನ್ನುಂಟು ಮಾಡುತ್ತಿದ್ದು, ಅಧಿಕಾರಿಗಳು 15 ದಿನಗಳ ಒಳಗೆ ಈ ಬೇಲಿಯನ್ನು ತೆರವುಗೊಳಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನೂ ನೀಡಲಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಚಂದ್ರಶೇಖರ್ ಕಬಕ.

ಕಳೆದ 20 ವರ್ಷಗಳಿಂದ ಸರಕಾರಿ ಜಾಗವಾಗಿದ್ದ ಕಬಕದ ವಿವಾದಿತ ಸ್ಥಳ ಇದೀಗ ಖಾಸಗಿಯವರ ಪಾಲಾಗಿದೆ. ಅತಿಕ್ರಮಣವನ್ನು ತಡೆಯಬೇಕಾಗಿದ್ದ ಅಧಿಕಾರಿ ವರ್ಗ ಮಾತ್ರ ಈ ಬಗ್ಗೆ ಚಕಾರವನ್ನೆತ್ತದೆ ಎಲ್ಲವನ್ನೂ ಸಹಿಸಿಕೊಂಡಿದೆ.

Related Posts

Leave a Reply

Your email address will not be published.