ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ : ಉತ್ತಮ ಇಳುವರಿ ಪಡೆಯುತ್ತಿರುವ ಕೃಷಿಕರು

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯವಾಗಿ ಸೆಗಣಿ ಹುಡಿ ಬಳಸಿ ಉತ್ತಮ ಇಳುವರಿ ಪಡೆಯುವ ಮೂಲಕ ಪುತ್ತೂರು ತಾಲೂಕಿನ ಇಂಜಿನಿಯರಿಂಗ್ ಪದವೀಧರ ಕೃಷಿಕರೊಬ್ಬರ ಪ್ರಯೋಗ ಯಶಸ್ವಿಯಾಗಿದೆ.

ಭೂಮಿಯನ್ನು ರಾಸಾಯನಿಕ ಮುಕ್ತವಾಗಿಸುವಲ್ಲಿ ಪರಿಣಾಮಕಾರಿ ಪ್ರಯೋಗಗಳು ಅಲ್ಲಲ್ಲಿ ರೈತರಿಂದಲೇ ನಡೆಯುತ್ತಿದ್ದು, ಪುತ್ತೂರಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿ ಜಯಗುರು ಆಚಾರ್ ಸೆಗಣಿ ಹುಡಿ ಗೊಬ್ಬರದ ಮೂಲಕ ಸಾವಯವ ಕೃಷಿಗೆ ಹೊಸ ರೂಪ ನೀಡಿದ್ದಾರೆ. ರಾಸಾಯನಿಕ ಗೊಬ್ಬರಕ್ಕೆ ಗುಡ್‍ಬೈ ಹೇಳಿ ಮರಳಿ ಸೆಗಣಿ ಗೊಬ್ಬರಕ್ಕೆ ಮೊರೆಹೋಗಿ ಉತ್ತಮ ಫಲ ಪಡೆಯುವ ಜತೆಗೆ ಭೂಮಿಯ ಫಲವತ್ತತೆಯನ್ನೂ ಹೆಚ್ಚಿಸುತ್ತಿದ್ದಾರೆ.

ಕೃಷಿ ತೋಟಗಳಲ್ಲಿ ಸೆಗಣಿ ಬಳಕೆ ಹೊಸ ಪ್ರಯೋಗವಲ್ಲದಿದ್ದರೂ, ಸೆಗಣಿಯನ್ನು ಸಂಸ್ಕರಿಸಿ, ಸೆಗಣಿಯಿಂದಲೂ ವಿವಿಧ ರೀತಿಯ ಕೃಷಿಗೆ ಉಪಕಾರಿ ವಸ್ತುಗಳನ್ನು ಪಡೆಯಬಹುದು ಎನ್ನುವುದನ್ನು ಪುತ್ತೂರಿನ ಈ ಯುವ ಕೃಷಿಕ ತೋರಿಸಿಕೊಟ್ಟಿದ್ದಾರೆ. ಕೃಷಿ ತೋಟಗಳಲ್ಲಿ ರಾಸಾಯನಿಕ ಗೊಬ್ಬರ ಯಾವಾಗ ಬಳಕೆ ಆರಂಭಗೊಂಡಿತೊ ಅಂದಿನಿಂದ ಭೂಮಿಯ ಫಲವತ್ತತೆ ನಾಶಗೊಂಡಿತು. ಈಗ ಮತ್ತೆ ಸಗಣಿ ಬಳಸುವ ಮೂಲಕ ಸಾವಯವ ಕೃಷಿಯ ಮಹತ್ವ ಮುನ್ನೆಲೆಗೆ ತರಬೇಕು ಎನ್ನುವುದು ಜಯಗುರು ಆಚಾರ್ ನ ಮುಖ್ಯ ಉದ್ದೇಶವೂ ಆಗಿದೆ. ಹಟ್ಟಿಯಿಂದ ಸೆಗಣಿಯನ್ನು ಸಂಗ್ರಹಿಸಿ ತೊಟ್ಟಿಗೆ ಹಾಕಿ,ಆ ಸೆಗಣಿಯನ್ನು ಪಂಪ್ ಬಳಸಿ ಸೆಗಣಿಯಿಂದ ನೀರಿನ ಅಂಶವನ್ನು ಬೇರ್ಪಡಿಸುವ ಯಂತ್ರಕ್ಕೆ ಹಾಯಿಸಲಾಗುತ್ತದೆ. ಈ ಯಂತ್ರದಲ್ಲಿ ಒಂದು ಕಡೆ ಸೆಗಣಿಯ ಹುಡಿ ತಯಾರಾದರೆ, ಇನ್ನೊಂದು ಕಡೆ ಸೆಗಣಿಯ ನೀರಿನಂಶ ಪ್ರತ್ಯೇಕ ಟ್ಯಾಂಕ್ ನಲ್ಲಿ ಶೇಖರಣೆಗೊಳ್ಳುತ್ತದೆ. ತಮ್ಮ ತೋಟಕ್ಕೆ ಬಳಸಿ ಉಳಿದ ಸೆಗಣಿ ಹುಡಿ ಗೊಬ್ಬರವನ್ನು ಮಾರಾಟವೂ ಮಾಡುತ್ತಿರುವ ಈ ಯುವ ಕೃಷಿಕ ಪ್ರಸ್ತುತ 40 ಕೆ.ಜಿ.ಯ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ಕೆಲವರು ತಮ್ಮ ವಾಹನಗಳಲ್ಲಿ ಬಂದು ಕೊಂಡೊಯ್ಯುತ್ತಾರೆ. ತಿಂಗಳಿಗೆ ಅಂದಾಜು 750 ರಿಂದ 1000 ಪ್ಯಾಕೆಟ್ ಮಾರಾಟವಾಗುತ್ತಿದೆ. ಜತೆಗೆ ಗೋಮೂತ್ರ, ದನಗಳನ್ನು ತೊಳೆದ ನೀರು, ಸಗಣಿ ನೀರು ಸೇರಿಸಿ ಸ್ಲರಿ ತಯಾರಿಸಲಾಗುತ್ತಿದೆ. ಟ್ಯಾಂಕ್ ಮೂಲಕ ಸ್ಲರಿಯನ್ನು ತೋಟದಲ್ಲಿರುವ ಅಡಿಕೆ, ತೆಂಗು, ತರಕಾರಿ ತೋಟಕ್ಕೆ ಬಳಸುವ ಜೊತೆಗೆ 25 ಕಿ.ಮೀ. ಸುತ್ತಲಿನ ತೋಟಗಳಿಗೆ ಟ್ಯಾಂಕರ್ ಮೂಲಕ ಪೂರೈಕೆ ಮಾಡುತ್ತಿದ್ದಾರೆ. ಉತ್ತಮ ಸೆಗಣಿ ಹುಡಿಯಂತೆ ಸ್ಥರಿಗೂ ಬೇಡಿಕೆ ಇದೆ. ಸಗಣಿ ಗೊಬ್ಬರ ಬಳಸಲು ಆರಂಭಿಸಿದ ಬಳಿಕ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕುತ್ತಿಲ್ಲ. ಇದರಿಂದ ಅಡಿಕೆ ಕೊಳೆರೋಗವೂ ಇಳಿಮುಖಗೊಂಡಿದೆ ಎನ್ನುವುದು ಜಯಗುರು ಅವರ ಅನುಭವದ ಮಾತು.

ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಜಯಗುರು ಮನೆಯಲ್ಲಿ 130 ಗೋವುಗಳಿವೆ. ದಿನಕ್ಕೆ 750 ಲೀ. ಹಾಲು ಡೇರಿಗೆ ನೀಡುತ್ತಿದ್ದಾರೆ. ಸೆಗಣಿಯನ್ನು ಹುಡಿ ಗೊಬ್ಬರ ಮಾಡುವುದರಿಂದ ಸಾಗಾಣಿಕೆಗೂ ಸುಲಭವಾಗುತ್ತದೆ. ವಾಸನೆ ಇರುವುದಿಲ್ಲ, ತೋಟಕ್ಕೆ ಸುಲಭವಾಗಿ ಹಾಕಬಹುದು. ಜತೆಗೆ ಗೋನಂದಾಜಲವನ್ನೂ ಕೂಡಾ ಬಳಸುತ್ತಿದ್ದು, ಇವೆಲ್ಲರ ಬಳಕೆಯಿಂದ ತೋಟದಲ್ಲಿ ಇಳುವರಿ ಹೆಚ್ಚಳಗೊಂಡಿದೆ. ಭೂಮಿಯ ಫಲವತ್ತತೆ ಅಧಿಕವಾಗಿದೆ. ಮುಂದಕ್ಕೆ ಇದೇ ಪ್ರಯೋಗಗಳನ್ನು ದೊಡ್ಡ ಮಟ್ಟದಲ್ಲಿ ಮುಂದುವರೆಸುವ ಉದ್ದೇಶವಿದೆ ಎನ್ನುತ್ತಾರೆ ಯುವ ಕೃಷಿಕ ಜಯಗುರು ಆಚಾರ್.

ಇಂಜಿನಿಯರಿಂಗ್ ಪದವೀಧರ ಜಯಗುರು ಆಚಾರ್ ಕಂಪೆನಿಯೊಂದರಲ್ಲಿ ಉದ್ಯೋಗ ದಲ್ಲಿದ್ದರು. 2019ರಲ್ಲಿ ವೃತ್ತಿಗೆ ವಿದಾಯ ಹೇಳಿ ತನ್ನ ತಂದೆ ನಡೆಸುತ್ತಿದ್ದ ಹೈನುಗಾರಿಕೆಗೆ ಸಾಥ್ ನೀಡಲು ಆರಂಭಿಸಿದರು. ತನ್ನ ಕೃಷಿ ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಬೇಕು ಎಂಬ ಕನಸು ಹೊತ್ತು ಈಗ ಸಾವಯವ ಕೃಷಿಯತ್ತ ಒಲವು ತೋರಿದ್ದಾರೆ. ಅದಕ್ಕಾಗಿ ಸೆಗಣಿ ಗೊಬ್ಬರದ ಹಲವು ಪ್ರಯೋಗಕ್ಕೆ ಮುಂದಾಗಿದ್ದಾರೆ. ಸೆಗಣಿ ಹುಡಿ, ಸ್ಥರಿ ತಯಾರಿಸಿ ಅಗತ್ಯ ಇರುವವರಿಗೆ ಮಾರಾಟ ಮಾಡುತ್ತಿದ್ದಾರೆ. ಮುಂದಕ್ಕೆ ದ್ರವ ರೂಪಿ ಗೊಬ್ಬರ ತಯಾರಿಸುವ ಪ್ರಯೋಗ ಆರಂಭಿಸಿದ್ದಾರೆ. ಆ ಮೂಲಕ ಗೋ ಆಧಾರಿತ ಕೃಷಿ ಕ್ರಾಂತಿಗೆ ಮುಂದಡಿಯಿಟ್ಟಿದ್ದಾರೆ.

 

Related Posts

Leave a Reply

Your email address will not be published.