ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮದುವೆ: ಎಸಿ ಮದನ್ ಮೋಹನ್ ನೇತೃತ್ವದಲ್ಲಿ ದಾಳಿ

ನಗರದ ಮಂಗಳಾದೇವಿ ದೇವಸ್ಥಾನದ ಸಮೀಪದ ವೇದಿಕೆಯಲ್ಲಿ ಏಕಕಾಲದಲ್ಲಿ ನಾಲ್ಕು ಮದುವೆ ಕಾರ್ಯಕ್ರಮಗಳು ನಡೆಸುತ್ತಿದ್ದ ಸಂದರ್ಭ ಎಸಿ ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ, ಕೇಸು ದಾಖಲಿಸಿದೆ.

ನಿಯಮಬಾಹಿರವಾಗಿ ಮದುವೆ ಸಮಾರಂಭ ಆಯೋಜಿಸಿರುವುದಾಗಿ ಬಂದ ದೂರಿನ ಹಿನ್ನೆಲೆ ಈ ದಾಳಿ ನಡೆದಿದೆ. ಪಕ್ಷದ ನಾಯಕರೊಬ್ಬರ ಪುತ್ರಿಯ ಮದುವೆ ಸೇರಿದಂತೆ ಇನ್ನೂ ಮೂರು ವಿವಾಹಗಳು ನಡೆಯುತ್ತಿದ್ದವೆನ್ನಲಾಗಿದೆ. ಮದುವೆ ನೂರಕ್ಕೂ ಹೆಚ್ಚು ಜನರ ಗುಂಪುಗೂಡಿದ್ದರು ಎಂದು ತಿಳಿದುಬಂದಿದೆ.

‘ಮಂಗಳಾದೇವಿ ದೇವಸ್ಥಾನದ ಸಮೀಪ ಕೋವಿಡ್ ನಿಯಮ ಉಲ್ಲಂಘಿಸಿ ದೇವಸ್ಥಾನ ಮಂಡಳಿಯು ಏಕಕಾಲದಲ್ಲಿ ನಾಲ್ಕು ಮದುವೆಗಳಿಗೆ ಅವಕಾಶ ನೀಡಿದೆ. ಮದುವೆ ನಡೆಯಲು ಅನುಮತಿ ನೀಡಿದವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು. ಈ ಬಗ್ಗೆ ವಿವರವಾದ ವರದಿ ಪಡೆಯಲಾಗುವುದು’ ಎಂದು ಎಸಿ ಮದನ್ ಮೋಹನ್ ತಿಳಿಸಿದ್ದಾರೆ.

ದೇವಸ್ಥಾನದ ಆಡಳಿತ ಮಂಡಳಿಯಿಂದ ಮದುವೆಗೆ ಅನುಮತಿ ನೀಡಿರುವ ಕುರಿತ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿದ ಎಸಿ ಮದನ್ ಮೋಹನ್, ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ರಮಾನಾಥ ಹೆಗಡೆ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.ದಾಳಿ ಸಂದರ್ಭ ಮನಪಾ ಉಪ ಆಯುಕ್ತರಾದ ಬಿನೊಯ್, ಧಾರ್ಮಿಕ ದತ್ತಿ ಇಲಾಖೆಯ ಸಣ್ಣ ರಂಗಯ್ಯ, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

 

Related Posts

Leave a Reply

Your email address will not be published.