ಲಾಕ್‌ಡೌನ್ ಸಂಕಷ್ಟಕ್ಕೀಡಾದ ರೈತ ಸಮುದಾಯ: ನೆರವಿನ ಹಸ್ತ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಮನವಿ

ಕೋವಿಡ್ ಲಾಕ್‌ಡೌನ್‌ನಿಂದಾಗಿ ರೈತ ಸಮುದಾಯ ಸಂಕಷ್ಟಕ್ಕೀಡಾಗಿದ್ದು, ಈ ಸಂಕಷ್ಟದ ಪರಿಹಾರಕ್ಕೆ ಒತ್ತಾಯಿಸಿ ರಾಜ್ಯ ರೈತ ಸಂಘದ ಕರೆಯ ಮೇರೆಗೆ ರಾಜ್ಯಾದ್ಯಂತ ಎಲ್ಲಾ, ಜಿಲ್ಲಾ, ತಾಲೂಕು ಕೇಂದ್ರಗಳಲ್ಲಿ ರೈತರಿಂದ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದು ಮಂಗಳೂರಿನಲ್ಲೂ ರೈತ ಮುಖಂಡರು ಅಪರ ಜಿಲ್ಲಾಧಿಕಾರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ ಪುಣಚ ಅವರು, ಕೊರೊನಾ ಮೊದಲ ಅಲೆಯು ಉಂಟು ಮಾಡಿದ್ದ ಸಂಕಷ್ಠಗಳಿಂದಲೇ ರೈತ ಸಮುದಾಯ ಇನ್ನೂ ಹೊರಬಂದಿಲ್ಲ. ಎರಡನೇ ಅಲೆಯು ಮತ್ತಷ್ಟು ಸಂಕಷ್ಟಗಳನ್ನು ರೈತ ಸಮುದಾಯದ ಮೇಲೆ ಉಂಟು ಮಾಡಿದ್ದು, ರೈತರು ಒಂದು ಕಡೆ ಬೆಳೆದ ಹಣ್ಣು ತರಕಾರಿ ಹೂವು ವೀಳ್ಯದೆಲೆಗಳು ಮಾರುಕಟ್ಟೆ ಇಲ್ಲದೆ ರಸ್ತೆಗೆ ಸುರಿಯುತ್ತಿದ್ದಾರೆ.ಕೇವಲ ಎರಡೇ ತಿಂಗಳಲ್ಲಿ ಲಕ್ಷ ಲಕ್ಷ ನಷ್ಟ ಉಂಟಾಗಿದೆ ಎಂದರು.

ಇನ್ನು ಕೊರೊನಾ ಲಾಕ್‌ಡೌನ್ ನಿಂದಾಗಿ ರೈತರು ಅನುಭವಿಸಿರುವ ನಷ್ಟದ ಬಗ್ಗೆ ಅಂದಾಜು ಮಾಡಲು ಒಂದು ಸಮಿತಿಯನ್ನು ನೇಮಿಸಬೇಕು. ರಾಜ್ಯಾದ್ಯಂತ ಮಡಿದ ಸೋಂಕಿತರ ಕುಟುಂಬಕ್ಕೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಹಾಗೂ ಇವರ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಸರಕಾರವೇ ಹೊರಬೇಕು. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ವಿದ್ಯುತ್ ದರವನ್ನು ಇಳಿಸಬೇಕು ಹೀಗೆ ಪ್ರಮುಖ ಹಕ್ಕೋತ್ತಾಯವನ್ನು ಸಲ್ಲಿಸಿದ್ದಾರೆ.

ಈ ಸಂದರ್ಭ ರಾಜ್ಯ ರೈತ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಪ್ರೇಮಾನಾಥ್ ಶೆಟ್ಟಿ ಬಾಳ್ತಿಲ, ಅಲ್ವಿನ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.