ವಲ್ಡ್ ವಾಲಿಬಾಲ್ ಚಾಂಪಿಯನ್ ಶಿಪ್ ಗೆ ಆಯ್ಕೆ ಪ್ರಕ್ರಿಯೆ- ಇಬ್ರಾಹಿಂ ಗೋಳಿಕಟ್ಟೆ

ಪುತ್ತೂರು: ಫೆಡರೇಶನ್ ಆಫ್ ಇಂಟರ್‌ನ್ಯಾಶನಲ್ ವಾಲಿಬಾಲ್ ಇವರ ಆಶ್ರಯದಲ್ಲಿ ಆ. 24ರಿಂದ ಸೆ. 2ರವರೆಗೆ ಇರಾನಿನ ತೆಹ್ರಾನ್‌ನಲ್ಲಿ 19 ವರ್ಷ ವಯೋಮಿತಿಯ ಹುಡುಗರ ವರ್ಲ್ಡ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಇದರಲ್ಲಿ ಭಾಗವಹಿಸುವ ಭಾರತೀಯ ತಂಡವನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಒಡಿಸ್ಸಾದ ಭುವನೇಶ್ವರದ ಕಿಟ್ಟ್ ಯುನಿವರ್ಸಿಟಿಯಲ್ಲಿ ಜುಲೈ 22 ಮತ್ತು 23ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ಅರ್ಹ ಆಟಗಾರರಿಗೆ ಭಾಗವಹಿಸುವ ಅವಕಾಶವಿದೆ ಎಂದು ಕರ್ನಾಟಕ ವಾಲಿಬಾಲ್ ಎಸೋಸಿಯೇಶನ್ ಅಡ್ಹಾಕ್ ಕಮಿಟಿಯ ಸದಸ್ಯರಾದ ಇಬ್ರಾಹಿಂ ಗೋಳಿಕಟ್ಟೆ ತಿಳಿಸಿದರು.
ಅವರು ಪುತ್ತೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗೆ ಸಂಬಂಧಪಟ್ಟಂತೆ ಕರ್ನಾಟಕ ವಾಲಿಬಾಲ್ ಎಸೋಸಿಯೇಶನ್ ಅಡ್ಹಾಕ್ ಕಮಿಟಿಯ ಉಸ್ತುವಾರಿಯಾಗಿ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ಈ ಮೂರು ಜಿಲ್ಲೆಗಳ ಅರ್ಹ ಆಟಗಾರರನ್ನು ಕ್ರೋಡೀಕರಿಸಿ ಭುವೇಶ್ವರದಲ್ಲಿರುವ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಆಯ್ಕೆಯಾದವರಿಗೆ ಅನುಮತಿ ಪತ್ರ ನೀಡಲಾಗುತ್ತದೆ ಎಂದರು.
2003ರಲ್ಲಿ ಜನಿಸಿದವರಿಗೆ ಮಾತ್ರ ಅವಕಾಶವಿದೆ. ಮಾನ್ಯತೆ ಹೊಂದಿರುವ ಪಾಸ್‌ಪೋರ್ಟ್ ಹೊಂದಿರಬೇಕು. ಉತ್ತಮ ಎತ್ತರ ಜಿಗಿತ ಹೊಂದಿರಬೇಕು. ಕೋವಿಡ್ ನಿಯಮ ಪಾಲಿಸಿಕೊಂಡು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಭ್ಯರ್ಥಿಗಳು ಪ್ರಯಾಣ ವೆಚ್ಚ ಮತ್ತಿತರ ಖರ್ಚು ವೆಚ್ಚಗಳನ್ನು ತಾವೇ ಭರಿಸಬೇಕು. ಭಾರತೀಯ ತಂಡಕ್ಕೆ ಆಯ್ಕೆಯಾದ ನಂತರದ ಖರ್ಚುಗಳನ್ನು ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಭರಿಸುತ್ತದೆ ಎಂದರು. ಆಸಕ್ತರು ತನ್ನನ್ನು ಸಂಪರ್ಕಿಸಬಹುದು ಎಂದವರು ತಿಳಿಸಿದರು.

ಸೆಪ್ಟೆಂಬರ್ 8ರಿಂದ ಜಪಾನಿನಲ್ಲಿ ನಡೆಯುವ 21ನೇ ಏಷ್ಯನ್ ಸೀನಿಯರ್ ವಾಲಿಬಾಲ್ ಪಂದ್ಯಾಟದಲ್ಲಿ ಬೆಂಗಳೂರಿನ ಕಾರ್ತಿಕ್ ಎಂಬವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಇದೇ ಕೂಟದಲ್ಲಿ ಇಂಡಿಯನ್ ರೈಲ್ವೆ ವತಿಯಿಂದ ಬೆಳ್ತಂಗಡಿಯ ಅಶುಲ್ ರೈ ಭಾಗವಹಿಸುತ್ತಿದ್ದಾರೆ. ಇದರಿಂದ ಕರ್ನಾಟಕ ಹೆಮ್ಮೆ ಪಡುವಂತಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು. +91 9901835168

Related Posts

Leave a Reply

Your email address will not be published.