ವಾಮದಪದವು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕ ಉದ್ಘಾಟನೆ

ಬಂಟ್ವಾಳ : ದಕ್ಷಿಣಕನ್ನಡ ಜಿಲ್ಲೆಯ ಪ್ರಥಮ ಆಕ್ಸಿಜನ್ ಉತ್ಪಾದನಾ ಘಟಕ ವಾಮದಪದವು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಉದ್ಘಾಟನೆ ಗೊಂಡಿತು. ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಘಟಕವನ್ನು ಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕರೋನಾ ನಿಗ್ರಹಕ್ಕೆ ಪೂರಕವಾಗಿ ಆಕ್ಸಿಜನ್ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಸ್ಥಾಪನೆಯಾದ ಪ್ರಥಮ ಆಕ್ಸಿಜನ್ ಘಟಕ ಇದಾಗಿದೆ ಎಂದರು. ಬಂಟ್ವಾಳದಲ್ಲಿ ಕರೋನಾ ವಿರುದ್ಧ ಹೋರಾಟ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಸಂಸದರಾದ ನಳಿನ್ ಕುಮಾರ್ ಕಟೀಲು, ಶಾಸಕ ರಾಜೇಶ್ ನಾಯ್ಕ್ ಹಾಗೂ ಅಧಿಕಾರಿ ವೃಂದದ ಶ್ರಮವನ್ನು ಅವರು ಶ್ಲಾಘಿಸಿದರು.

ಈ ಘಟಕದಲ್ಲಿ ಪ್ರತಿ ನಿಮಿಷಕ್ಕೆ 46ಲೀಟರ್ ಆಕ್ಸಿಜನ್ ಉತ್ಪಾದನಾ ಸಾಮರ್ಥ್ಯ ಹೊಂದಿದ್ದು, ಜಿಲ್ಲೆಯ ವಿವಿದೆಡೆಗಳಲ್ಲಿಯೂ ಹಂತಹಂತವಾಗಿ ಆಕ್ಸಿಜನ್ ಘಟಕ ಸ್ಥಾಪನೆಯಾಗಲಿದೆ ಎಂದವರು ಹೇಳಿದರು.ಈ ಸಂದರ್ಭದಲ್ಲಿ ಎ.ಸಿ.ಮದನ್ ಮೋಹನ್,ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿ.ಪ. ಸದಸ್ಯ ಎಂ.ತುಂಗಪ್ಪ ಬಂಗೇರ, ನೀರು ಸರಬರಾಜು ಮತ್ತು ಒಳಚರಂಡಿ ನಿಗಮದ ಸದಸ್ಯೆ ಸುಲೋಚನ ಜಿ.ಕೆ.ಭಟ್, ತಾ.ಪಂ.ಸದಸ್ಯ ಪ್ರಭಾಕರ ಪ್ರಭು, ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.