ಶಿರ್ವ ನಡಿಬೆಟ್ಟು ಸೂರ್ಯ-ಚಂದ್ರ ಜೋಡುಕರೆ ಕಂಬಳ ಸಂಪನ್ನ

ತುಳುನಾಡಿನ ಐತಿಹಾಸಿಕ ಹಿನ್ನೆಲೆಯಿರುವ 26 ನೇ ವರ್ಷದ ಸುಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಕಂಬಳವು ಭಾನುವಾರ ಶಿರ್ವ ನಡಿಬೆಟ್ಟು ಕಂಬಳ ಗದ್ದೆಯಲ್ಲಿ ನೆರವೇರಿತು.ಶಿರ್ವ ನಡಿಬೆಟ್ಟು ಸೂರ್ಯ – ಚಂದ್ರ ಜೋಡುಕರೆ ಸಾಂಪ್ರದಾಯಿಕ ಕಂಬಳೊತ್ಸವವನ್ನು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಎಲ್ಲೂರು ಗುತ್ತು ಪ್ರಫುಲ್ಲ ಶೆಟ್ಟಿಯವರು ಉದ್ಘಾಟಿಸಿದರು.

ಬೆಳಿಗ್ಗೆ ಸಾಂಪ್ರದಾಯಿಕವಾಗಿ ನಡೆದ ಬಂಟ ಕೋಲದ ಬಳಿಕ ನಡಿಬೆಟ್ಟು ಮನೆಯಿಂದ ಜೊಡು ಕೋಣಗಳನ್ನು ಮೆರವಣಿಗೆಯಲ್ಲಿ ಸೂರ್ಯ – ಚಂದ್ರ ಜೋಡು ಕಂಬಳ ಕರೆಗೆ ತಂದ ಬಳಿಕ ಕಂಬಳಕ್ಕೆ ಹಸಿರು ನಿಶಾನೆ ನೀಡಲಾಯಿತು. ಮನೆತನದ ಕೋಣಗಳನ್ನು ಗದ್ದೆಗಿಳಿಸಿ ಓಡಿಸುವುದರೊಂದಿಗೆ ಸಾಂಪ್ರದಾಯಿಕ ಜೋಡುಕರೆ ಕಂಬಳ ಸಂಪನ್ನಗೊಂಡಿತು.

ಶತಮಾನಗಳಿಂದ ನಡೆದು ಬರುತ್ತಿರುವ ಧಾರ್ಮಿಕ ಹಿನ್ನೆಲೆಯನ್ನು ಹೊಂದಿರುವ ಶಿರ್ವ ನಡಿಬೆಟ್ಟು ಕಂಬಳವು ನಡಿಬೆಟ್ಟು ಚಾವಡಿಯ ದೈವ ಜುಮಾದಿಗೆ ಪೂಜೆ ಪುರಸ್ಕಾರ ನಡೆದ ಬಳಿಕ ಬಂಟ ಕೋಲ ನಡೆದು ಮೆರವಣಿಗೆಯಲ್ಲಿ ಕೊಂಬು, ವಾದ್ಯ ಘೋಷಗಳೊಂದಿಗೆ ಕೋಣಗಳನ್ನು ಗದ್ದೆಗಿಳಿಸಲಾಯಿತು. ಶಿರ್ವದ ದೈವ ದೇವರುಗಳ ಉತ್ಸವಗಳಲ್ಲಿ ಒಂದಕ್ಕೊಂದು ಸಂಬಂಧವಿದ್ದು ಸಂಪ್ರದಾಯ ಬದ್ಧವಾಗಿ ಕಂಬಳ ನಡೆಯುತ್ತದೆ.
ಈ ಸಂದರ್ಭದಲ್ಲಿ ಶಿರ್ವ ನಡಿಬೆಟ್ಟು ದಾಮೋದರ ಚೌಟ, ಅಟ್ಟಿಂಜೆ ಶಂಭು ಶೆಟ್ಟಿ, ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್. ಪಾಟ್ಕರ್, ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರುಗಳಾದ ರೆ|ಫಾ| ಡೆನ್ನಿಸ್ ಡೇಸಾ, ಸಹಾಯಕ ಧರ್ಮಗುರು ಫಾ| ರೋಲ್ವಿನ್ ಅರಾನ್ಹಾ ದಾಮೋದರ ಅಂಚನ್, ತಮ್ಮಣ್ಣ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.ಕಂಬಳದಲ್ಲಿ ಹಿರಿಯ ಕೋಣಗಳ ಜೋಡಿ 15 ಭಾಗವಹಿಸಿದರೆ, ಕಿರಿಯ 30 ಜೋಡಿ ಕೋಣಗಳು ಭಾಗವಹಿಸಿದವು.

Related Posts

Leave a Reply

Your email address will not be published.