ಅ. 8ರಂದು ಸುಜ್ಞಾನ ದೀಪಿಕೆ’ ಧಾರ್ಮಿಕ ಶಿಕ್ಷಣ ಯೋಜನೆ ಉದ್ಘಾಟನೆ

ಪುತ್ತೂರು: ದೇವಾಲಯವೊಂದರಲ್ಲಿ ವಿನೂತನ ಪ್ರಯೋಗವಾಗಿ ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಶಿಕ್ಷಣವನ್ನು ಮತ್ತು ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿರುವ ‘ಸುಜ್ಞಾನ ದೀಪಿಕೆ’ ಧಾರ್ಮಿಕ ಶಿಕ್ಷಣ ಯೋಜನೆಯು ಅ. 8ರಂದು ಬೆಳಗ್ಗೆ 1೦ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೇಳಿದರು.

ಅವರು ಶ್ರೀ ದೇವಾಲಯದ ಆಡಳಿತ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ದೇವಾಲಯದ ಆಡಳಿತ ಕಚೇರಿಯ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕುಟುಂಬ ಪ್ರಭೋಧನ್‌ನ ಅಖಿಲ ಭಾರತ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ದೀಪೋಜ್ವಲನ ಮಾಡಲಿದ್ದಾರೆ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕ ಅಭ್ಯಾಗತರಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 5ರಿಂದ 15ರ ವಯೋಮಾನದ ಹಿಂದೂ ಸಮಾಜದ ಮಕ್ಕಳು ಈ
ಯೋಜನೆಯಲ್ಲಿ ಸೇರ್ಪಡೆಗೊಳ್ಳಲು ಅರ್ಹರಾಗಿದ್ದು ಈಗಾಗಲೇ 80ಮಂದಿ ತಮ್ಮ ಹೆಸರು ನೀಡಿದ್ದಾರೆ ಎಂದು ವಿವರಿಸಿದರು. ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಶೇಖರ ನಾರಾವಿ, ಬಿ. ಐತ್ತಪ್ಪ ನಾಯ್ಕ್, ವೀಣಾ ಬಿ.ಕೆ., ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.