ಸೌಪರ್ಣಿಕಾ ನದಿಗೆ ಕಾಲು ಜಾರಿ ಬಿದ್ದು ತಾಯಿ, ಮಗು ಸಾವು

ಕುಂದಾಪುರ: ನದಿದಂಡೆಯಲ್ಲಿ ವಾಯು ವಿಹಾರ ನಡೆಸುತ್ತಿದ್ದಾಗ ಆಕಸ್ಮಿಕವಾಗಿ ಮಗ ಕಾಲು ಜಾರಿ ನದಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲೆಂದು ನದಿಗೆ ಹಾರಿದ ತಾಯಿ ಹಾಗೂ ಮಗ ಇಬ್ಬರೂ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ಶನಿವಾರ ನಾಡ ಗ್ರಾಮದ ಚುಂಗಿಗುಡ್ಡೆಯಲ್ಲಿ ಸಂಭವಿಸಿದೆ.

ನಾಡ ಗ್ರಾಮದ ಪತ್ರಕರ್ತ ನೋಯೆಲ್ ಚುಂಗಿಗುಡ್ಡೆ ಅವರ ಪತ್ನಿ ರೋಸಿರಿಯಾ (34) ಹಾಗೂ ಪುತ್ರ ಶಾನ್ ರಿಚ್ಚಿ (11) ಸಾವನ್ನಪ್ಪಿದವರು.

ರೋಸಿರಿಯಾ ಅವರು ಹಿಂದೆ ಕುವೈಟ್‌ನಲ್ಲಿ ಜೆಟ್ ಏರ್‌ವೇಸ್ ಉದ್ಯೋಗಿಯಾಗಿದ್ದು, ಪ್ರಸ್ತುತ ವಿದೇಶದಲ್ಲಿಯೇ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 6 ತಿಂಗಳ ಹಿಂದೆ ಊರಿಗೆ ಬಂದಿದ್ದು, ಈಗ ವರ್ಕ್ ಫ್ರಂ ಹೋಮ್ ಕೆಲಸದಲ್ಲಿದ್ದರು. ಕೆಲವೇ ದಿನಗಳಲ್ಲಿ ಮತ್ತೆ ವಿದೇಶಕ್ಕೆ ತೆರಳುವವರಿದ್ದರು ಎಂದು ತಿಳಿದು ಬಂದಿದೆ.

ಘಟನೆ ವಿವರ
ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ರೋಸಿರಿಯಾ ಅವರು ಮಗ ಶಾನ್‌ನನ್ನು ಮನೆ ಸಮೀಪದ ಸೌಪರ್ಣಿಕಾ ನದಿ ತೀರಕ್ಕೆ ವಾಯು ವಿಹಾರಕ್ಕೆಂದು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನದಿದಂಡೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಗ ಶಾನ್ ಆಕಸ್ಮಿಕವಾಗಿ ಕಾಲು ಜಾರಿ ನದಿಗೆ ಬಿದ್ದಿದ್ದಾನೆ. ಇದನ್ನು ಕಂಡ ತಾಯಿ ರೋಸಿರಿಯಾ ಅವರು ಮಗನನ್ನು ರಕ್ಷಿಸಲೆಂದು ಒಮ್ಮೆಲೆ ನದಿಗೆ ಹಾರಿದ್ದಾರೆ. ನಿರಂತರವಾಗಿ ಮಳೆ ಬರುತ್ತಿದ್ದುದರಿಂದ ನದಿಯಲ್ಲಿ ನೀರಿನ ಸೆಳೆತ ಸಹ ಜಾಸ್ತಿ ಇತ್ತು. ಇಬ್ಬರು ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಪತ್ನಿ ಹಾಗೂ ಮಗ ಮಧ್ಯಾಹ್ನವಾದರೂ ಮನೆಗೆ ಬರದಿದ್ದುದನ್ನು ತಿಳಿದು ಕರೆದುಕೊಂಡು ಬರಲು ನೋಯೆಲ್ ಅವರು ನದಿ ಕಡೆಗೆ ಬಂದಿದ್ದಾರೆ. ಅಷ್ಟರಲ್ಲಿ ಪುತ್ರನ ಚಪ್ಪಲಿ ನದಿ ದಂಡೆ ಪಕ್ಕ ಕಾಣ ಸಿಕ್ಕಿದ್ದು, ಕೂಡಲೇ ಸಮೀಪದ ಮನೆಯವರನ್ನು ಕರೆದು, ಹುಡುಕಾಟ ನಡೆಸಿದ್ದಾರೆ. ಸ್ವಲ್ಪ ದೂರದಲ್ಲಿ ನದಿಯಲ್ಲಿ ಮಗನ ಮೃತದೇಹ ಕಂಡು ಬಂದಿದ್ದು, ಸ್ಥಳೀಯರ ಸಹಾಯದಿಂದ ಮೇಲೆತ್ತಲಾಯಿತು. ತಾಯಿಯ ಮೃತದೇಹ ಕೊಚ್ಚಿಕೊಂಡು ಹೋಗಿದ್ದು, ಮರವಂತೆಯ ಮಾರಸ್ವಾಮಿ ದೇವಸ್ಥಾನದ ಎದುರಿನ ಸೇತುವೆ ಸಮೀಪ ಸಿಕ್ಕಿದ್ದು, ಸ್ಥಳೀಯರು ಹಾಗೂ ಕುಂದಾಪುರದ ಅಗ್ನಿ ಶಾಮಕ ದಳದ ಸಿಬಂದಿ ಸಹಕಾರದಿಂದ ಮೇಲೆತ್ತಲಾಯಿತು.

ಪ್ರತಿ ದಿನ ಸಂಜೆ ಮಗನನ್ನು ವಾಯು ವಿಹಾರಕ್ಕೆಂದು ತಂದೆ ಅಥವಾ ತಾಯಿ ನದಿದಂಡೆಗೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಶುಕ್ರವಾರ ಮಳೆ ಕಡಿಮೆಯಿದ್ದ ಕಾರಣ ಬೆಳಗ್ಗಿನ ವೇಳೆಯೇ ವಿಹಾರಕ್ಕೆ ತೆರಳಿದ್ದರು. ಶನಿವಾರವೂ ಅದೇ ಸಮಯಕ್ಕೆ ಮಗ ಹಠ ಮಾಡಿದ್ದು, ತಂದೆ-ತಾಯಿಯರಿಬ್ಬರೂ ಬೇಡವೆಂದರೂ ಕೇಳಲಿಲ್ಲ. ಮಗನ ಹಠಕ್ಕಾಗಿ ತಾಯಿ ವಾಯು ವಿಹಾರಕ್ಕೆ ನದಿದಂಡೆಗೆ ಕಡೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ವಿಧಿಯಾಟ ಮಾತ್ರ ಬೇರೆಯದ್ದೇ ಆಗಿತ್ತು.

ಘಟನಾ ಸ್ಥಳಕ್ಕೆ ಬಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ, ಗಂಗೊಳ್ಳಿ ಠಾಣಾಧಿಕಾರಿ ನಂಜಾ ನಾಯ್ಕ್, ಕುಂದಾಪುರ ಅಗ್ನಿ ಶಾಮಕ ಸಿಬ್ಬಂದಿ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ, ಮತ್ತಿತರರು ಭೇಟಿ ನೀಡಿದರು.ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Posts

Leave a Reply

Your email address will not be published.