ಹಕ್ಕಿಗಾಗಿ ಮಾತ್ರವಲ್ಲ; ಕರ್ತವ್ಯಕ್ಕಾಗಿಯೂ ಹೋರಾಡೋಣ: ಉದಯ್ ನಾಯಕ್

ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜು, ಮಂಗಳೂರು ಇಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮಾಚರಣೆ ನಡೆಯಿತು. ಜ್ಯೋತಿ ಬೆಳಗಿಸಿ ಅಮೃತ ಮಹೋತ್ಸವವನ್ನು ಉದ್ಘಾಟಿಸಿದ ಮಂಗಳೂರು ಪೊಲೀಸ್ ಇಲಾಖೆಯ ನಿವೃತ್ತ ಹೆಚ್ಚುವರಿ ಉಪಆಯುಕ್ತರಾದ ಶ್ರೀ ಉದಯ್ ನಾಯಕ್ ಅವರು ಮಾತನಾಡಿ, ನಮ್ಮ ಪ್ರಶ್ನೆಗಳು ಹಕ್ಕಿಗಾಗಿ ಮಾತ್ರವಲ್ಲ, ಕರ್ತವ್ಯದ ಕುರಿತಂತೆಯೂ ಸಮಾಲೋಚಿಸಬೇಕಾಗಿದೆ. ಬ್ರಿಟೀಷರಿಂದ ಈಗಾಗಲೇ ಹಾನಿಗೊಂಡ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸುವ ಅನಿವಾರ್ಯತೆಯಿದ್ದು, ವೃತ್ತಿಪರ ಶಿಕ್ಷಣದ ಕುರಿತಂತೆ ಹೆಚ್ಚಿನ ಗಮನಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ `ಸ್ವಾತಂತ್ರ್ಯ ಸಮರದಲ್ಲಿ ನಮ್ಮವರು’ ಎಂಬ ಶೀರ್ಷಿಕೆಯಡಿಯಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಅನಿಂದಿತ್ ಗೌಡ ಕೊಚ್ಚಿ ಬಾರಿಕೆಯವರು, ಸ್ವಾತಂತ್ರ್ಯ ಸಮರವು 1857ರಲ್ಲಿ ಪ್ರಾರಂಭವಾದದ್ದಲ್ಲ. ಕೊಡಗು-ಅಮರಸುಳ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಪ್ಪಯ್ಯ ಗೌಡರ ಗುಂಪು ನಾಯಕತ್ವದಲ್ಲಿ ಬೀಜ ಬಿತ್ತಲಾದ ಸ್ವಂತಿಕೆಗಾಗಿ ನಡೆದ 13 ದಿನಗಳ ಹೋರಾಟವು ಮಂಗಳೂರಿನಲ್ಲಿ ಬ್ರಿಟೀಷರ ಬಾವುಟವನ್ನು ಕಿತ್ತೆಸೆದು ಬಾವುಟಗುಡ್ಡೆ ಗೆ  1837ರಲ್ಲಿಯೇ ಬುನಾದಿ ಹಾಕಿತ್ತು ಎಂಬುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುಭಾಷಿಣಿ ಶ್ರೀವತ್ಸ ಅವರು ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯೊಡನೆ ಸಂವಾದವನ್ನು ಶ್ರೀ ವೆಂಕಟೇಶ್ ನಾಯಕ್ ನಡೆಸಿಕೊಟ್ಟರು. ಶ್ರೀ ಸ್ಟೀವನ್ ಡಿ’ಸೋಜ, ಕಾವ್ಯಾ ಪಿ. ಹೆಗ್ಡೆ, ಶ್ರೀ ರಾಘವೇಂದ್ರ ಇವರು ತಾಂತ್ರಿಕ ನಿರ್ವಹಣೆಯನ್ನು ವಹಿಸಿದ್ದರು. ಅಮೃತ ಮಹೋತ್ಸವ ಸಮಿತಿಯ ಸದಸ್ಯರಾದ ಶ್ರೀ ಮಿಥುನ್, ಶ್ರೀಮತಿ ಲತಾ ಸಂತೋಷ್ ಉಪಸ್ಥಿತರಿದ್ದರು. ಶ್ರೀಮತಿ ಪ್ರಶಾಂತಿ ಶೆಟ್ಟಿ ಸ್ವಾಗತಿಸಿದರು. ಶ್ರೀಮತಿ ಮಧುಶ್ರೀ ಶ್ರೀಯಾನ್ ಅತಿಥಿ ಪರಿಚಯವನ್ನಿತ್ತರು. ಅಮೃತ ಮಹೋತ್ಸವ ಸಮಿತಿಯ ನೋಡಲ್ ಅಧಿಕಾರಿ ಡಾ. ರತಿ ವಂದನಾರ್ಪಣೆಗೈದರು. ಶ್ರೀಮತಿ ವೈಶಾಲಿ ಕಾರ್ಯಕ್ರಮ ನಿರೂಪಿಸಿದರು

Related Posts

Leave a Reply

Your email address will not be published.