ಹುತಾತ್ಮರಾದ ರೈತರ ಸ್ಮರಣೆ: ಕೇಂದ್ರ ಸಚಿವ ಅಜಯ್ ಮಿಶ‍್ರಾ ವಜಾಗೊಳಿಸುವಂತೆ ಒತ್ತಾಯಿಸಿ ಕೆಪಿಸಿಸಿ ಹಾಗೂ ಕೆಪಿವೈಸಿಸಿಯಿಂದ ಕಾಂಗ್ರೆಸ್ ಭವನದ ಮುಂದೆ ಮೌನ ಪ್ರತಿಭಟನೆ

ಬೆಂಗಳೂರು, ಅ 11; ರೈತ ವಿರೋಧಿ ಕೃಷಿ ಕಾನೂನುಗಳು ಮತ್ತು ಬಿಜೆಪಿ ದುರಾಡಳಿತಕ್ಕೆ ಬಲಿಯಾದ ರೈತರ ಸ್ಮರಣಾರ್ಥ ನಗರದ ರೇಸ್ ಕೋರ್ಸ್ ನ ಕಾಂಗ್ರೆಸ್ ಭವನದ ಮುಂದೆ ರಾಜ್ಯ ಕಾಂಗ್ರೆಸ್ ಮುಖಂಡರು ಸೋಮವಾರ ಮೌನ ಪ್ರತಿಭಟನೆ ನಡೆಸಿದರು. ರೈತರನ್ನು ಹಾಡು ಹಗಲೇ ಕೊಂದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರೈತರ ಜೀವಕ್ಕೆ ಕಂಟಕವಾಗಿರುವ ಬಿಜೆಪಿ ಸರ್ಕಾರದ ಕೃಷಿ ಕಾನೂನುಗಳು ಹಾಗೂ ಅನ್ನದಾತರನ್ನು ಶೋಷಿಸುತ್ತಿರುವ ಧೋರಣೆ ವಿರುದ್ಧ ಭಿತ್ತಿಚಿತ್ರಗಳನ್ನು ಪ್ರದರ್ಶಿಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಕೆಪಿಸಿಸಿ ಮತ್ತು ಜೆಪಿವೈಸಿಸಿ ಯಿಂದ ಆಯೋಜಿಸಲಾದ ಮೌನ ಪ್ರತಿಭಟನೆಯಲ್ಲಿ

ಹುತಾತ್ಮರಾದ ರೈತರ ಬಗ್ಗೆ ಬಿಜೆಪಿ ನಾಯಕರಿಗೆ ಕರುಣೆ, ಕನಿಕರ, ಕಾಳಜಿ ಇಲ್ಲ ಎಂದು ಭಿತ್ತಿಚಿತ್ರಗಳ ಮೂಲಕ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ವಿಶ್ರಾ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕು ಹಾಗೂ ಹತ್ಯಾಕಾಂಡದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಒಕ್ಕೂರಲಿನಿಂದ ಒತ್ತಾಯಿಸಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಮಾತನಾಡಿ, ಉತ್ತರ ಪ್ರದೇಶದ ಲಖಿಂಪುರದಲ್ಲಿ ನಡೆದ ಘಟನೆ ಅಮಾನವೀಯವಾದದ್ದು. ಕೇಂದ್ರದ ಗೃಹ ಮಂತ್ರಿ ಮಗ ರೈತರ ಮೇಲೆ ವಾಹನ ಹರಿಸಿ ಹಾಡುಹಗಲೇ ಹತ್ಯೆ ಮಾಡಿದ್ದಾರೆ. ಆದರೆ ಕೊಲೆಗಡುಕರನ್ನು ಬಿಜೆಪಿ ಸರ್ಕಾರ ಮನೆಯ ಅತಿಥಿಗಳಂತೆ ನೋಡಿಕೊಳ್ಳುತ್ತಿದೆ. ಆರೋಪಿಗಳು ಶರಣಾಗುವವರೆಗೆ ಬಂಧಿಸುವ ಧೈರ್ಯ ತೋರಿಲ್ಲ. ಈ ದೇಶ ಯಾವ ಕಡೆಗೆ ಸಾಗುತ್ತಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು.

ಪ್ರಧಾನಿ ತಮ್ಮ ಹೆಸರನ್ನು ನರೇಂದ್ರ ಮೋದಿ ಬದಲು ಮೌನೇಂದ್ರ ಮೋದಿ ಎಂದು ಬದಲಾಯಿಸಿಕೊಂಡರೆ ಉತ್ತಮ. ಕೋವಿಡ್ ಸಂಧರ್ಭದಲ್ಲಿ ಸಾಕಷ್ಟು ಜನ ಮೃತಪಟ್ಟರು. ಅದರ ಬಗ್ಗೆ ಬಿಜೆಪಿ ಧ್ವನಿ ಎತ್ತಲಿಲ್ಲ. ರೈತರ ಹತ್ಯೆಯಾಗಿದೆ, ಆಗಲೂ ಧ್ವನಿಯೆತ್ತಿಲ್ಲ. ಪ್ರಧಾನಿ ಮೋದಿಯಿಂದ ರೈತರಿಗೂ ನ್ಯಾಯ ಸಿಕ್ಕಿಲ್ಲ. ಸಾಮಾನ್ಯ ಜನರಿಗೂ ನ್ಯಾಯ ದೊರೆತಿಲ್ಲ ಎಂದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ ಬಿ.ವಿ. ಮಾತನಾಡಿ, ಐದು ಮಂದಿ ರೈತರು ಮತ್ತು ಒಬ್ಬ ಪತ್ರಕರ್ತರು ಮೃತಪಟ್ಟಿದ್ದು, ಸರ್ಕಾರ ಏನೂ ಆಗಿಯೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ. ಇ‍ಷ್ಟೆಲ್ಲಾ ಆದರೂ ಸರ್ಕಾರ ನಿದ್ರೆ ಮಾಡುವಂತೆ ನಟಿಸುತ್ತಿದ್ದು, ಇವರನ್ನು ಆನೆ ಮೂಲಕವೂ ಎಬ್ಬಿಸಲು ಸಾಧ್ಯವಿಲ್ಲ. ಕೊಲೆಗಡುಕರಿಗೆ ಸರ್ಕಾರ ರಾಜ ಮರ್ಯಾದೆ ನೀಡುತ್ತಿದೆ ಎಂದು ಆರೋಪಿಸಿದರು.

ಅಮಾನವೀಯವಾಗಿ ರೈತರನ್ನು ಹತ್ಯೆ ಮಾಡಿರುವ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈಬಿಟ್ಟು, ಆತನ ಮಗನ ಜತೆ ಶಾಮೀಲಾಗಿರುವ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿ, ಬಂಧಿಸಬೇಕು. ಈ ಹೋರಾಟ ಇಲ್ಲಿಗೆ ಮುಗಿಯುವುದಿಲ್ಲ. ನಾವು ಜೈಲ್ ಬರೋ ಚಳವಳಿ ನಡೆಸುತ್ತೇವೆ. ಸ್ವಾತಂತ್ರ್ಯಪೂರ್ವದಿಂದಲೂ ನಾವು ಹೋರಾಟ, ಜೈಲು ವಾಸ ಅನುಭವಿಸಿ ಅನುಭವ ಹೊಂದಿದ್ದೇವೆ. ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಇಂತಹ ಕುಟುಂಬದ ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರನ್ನು ಹೆದರಿಸಲು ನಿಮ್ಮಿಂದ ಸಾಧ್ಯವಿಲ್ಲ ಎಂದು ಹೇಳಿದರು.

ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ಮಾತನಾಡಿ, ಕೇಂದ್ರದ ಬಿಜೆಪಿ ಸರ್ಕಾರ ರೈತವಿರೋಧಿಯಾಗಿದ್ದು, ರೈತರ ವಿಚಾರದಲ್ಲಿ ನೀತಿ, ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಒಂದೂವರೆ ವರ್ಷದಿಂದಲೂ ಸಹಸ್ರಾರು ರೈತರು ದೆಹಲಿ ಸುತ್ತಮುತ್ತ ಹೋರಾಟ ಮಾಡುತ್ತಿದ್ದು, ಹಲವಾರು ಮಂದಿ ರೈತರು ಜೀವ ಕಳೆದುಕೊಂಡಿದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ಬೆಲೆ ತೆರಬೇಕು. ಕೇಂದ್ರದ ವಿರುದ್ಧ ಹೋರಾಟ ಮಾಡುತ್ತಿದ್ದವರನ್ನು ಅಮಾನವೀಯವಾಗಿ ಕೊಂದಿದ್ದು, ರೈತಪರವಾದ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.

ಶಾಸಕರಾದ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವ ಎಚ್.ಎಂ. ರೇವಣ್ಣ, ಮಹಿಳಾ ಕಾಂಗ್ರೆಸ್ ಅಧ‍್ಯಕ್ಷೆ ಪುಷ್ಪಾ ಅಮರನಾಥ್, ಏಐಸಿಸಿ ಕಾರ್ಯದರ್ಶಿ ಸಂದೀಪ್ ರಾಜ್ಯ ಎನ್ ಎಸ್ ಯುಐ ಅಧ್ಯಕ್ಷ ಕೀರ್ತಿ ಗಣೇಶ್, ಬೆಂಗಳೂರು ಮೂರು ಜಿಲ್ಲಾಧ್ಯಕ್ಷರಾದ ರಾಜಕುಮಾರ್, ಕೃಷ್ಣಪ್ಪ, ಜಿ.ಶೇಖರ್ ಮತ್ತಿತರ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.