ತುಳುಕೂಟ ಕತಾರ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ದೋಹ ಕತಾರ್ ನಲ್ಲಿರುವ ತುಳುಕೂಟ ಕತಾರ್ 2021 ನೇ ಸಾಲಿನ ವಿಶ್ವ ಪರಿಸರ ದಿನಾಚರಣೆಯನ್ನು ಅಧ್ಯಕ್ಷೆ ಶ್ರೀಮತಿ ಚೈತಾಲಿ ಉದಯ್ ಶೆಟ್ಟಿಯವರ ನೇತೃತ್ವದಲ್ಲಿ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು ಬಹಳ ವಿಭಿನ್ನ ರೀತಿಯಲ್ಲಿ ಆಚರಿಸಿತು.


 JOY OF GIVING WEEK – ದಾನದಲ್ಲಿರುವ ಧನ್ಯತೆ ಸಪ್ತಾಹ ಎಂಬ ಶೀರ್ಷಿಕೆಯೊಂದಿಗೆ 7 ದಿನಗಳ ಕಾಲ ನಡೆದಂತಹ ಈ ಕಾರ್ಯಕ್ರಮವು  ಪ್ರಕೃತಿಪ್ರಿಯ ಸದಸ್ಯರನ್ನು  ಒಗ್ಗೂಡಿಸುವುದರ ಜೊತೆಗೆ ಪ್ರಸ್ತುತ ಸಮಯದಲ್ಲಿ ನೆರವು, ದಾನ ಹಾಗೂ ಪ್ರಕೃತಿ ಸೇವೆಯಂತಹ ಅತ್ಯುತ್ತಮ ಮೌಲ್ಯಗಳ ಚಿಂತನೆಗೆ ಸಾಕ್ಷಿಯಾಯಿತು.

ವಾರದಾದ್ಯಂತ ನಡೆದ ಈ ಕಾರ್ಯಕ್ರಮದಲ್ಲಿ ಸದಸ್ಯರು ತಮಗಿಷ್ಟವಾದ ಸಸಿಗಳನ್ನು ವಿನಿಮಯ ಮಾಡಿಕೊಳ್ಳುವುದರೊಂದಿಗೆ ಕೂಟವೂ ಸಹ ತನ್ನ ವತಿಯಿಂದ ಭಾಗವಹಿಸಿದ ಪ್ರತಿಯೊಬ್ಬ ಸದಸ್ಯರಿಗೆ ಭಗೀರ ಎಂಬ ನಾಮಾಂಕಿತ ಗಿಡಗಳನ್ನು ಸ್ನೇಹಪೂರ್ವಕವಾಗಿ ನೀಡಿತು. ಸಸಿಗಳ ವಿನಿಮಯದ ಸಂದರ್ಭದಲ್ಲಿ ಪ್ರತಿ ಸದಸ್ಯರಿಗೂ ತಾವು ಬಯಸಿದ್ದ ಗಿಡಗಳನ್ನು ನೀಡುವಲ್ಲಿ ಕೂಟದ ಸಮಿತಿಯು ಮಾಡಿದಂತಹ ಯಶಸ್ವೀ ಪ್ರಯತ್ನವು, ಭಾಗವಹಿಸಿದ ಪ್ರತಿಯೊಬ್ಬ ಸದಸ್ಯನ ಸಂತೋಷವನ್ನು ಹಾಗೂ ಉತ್ಸಾಹವನ್ನು ಇಮ್ಮಡಿಗೊಳಿಸಿತ್ತು.


ಏಳು ದಿನಗಳ ಕಾಲ ನಡೆದಂತಹ ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಕಳೆದ ಜೂನ್ 5ನೇ ತಾರೀಕಿನಂದು Qatar Finland ಇಂಟರ್ನ್ಯಾಷನಲ್ ಸ್ಕೂಲ್ ನ ವಠಾರದಲ್ಲಿ ಐಸಿಬಿಎಫ್ ಹಾಗೂ ಕರ್ನಾಟಕ ಮೂಲದ ವಿವಿಧ ಕೂಟಗಳ ಅಧ್ಯಕ್ಷರು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಸಸಿಗಳ ನೆಡುವಿಕೆಯೊಂದಿಗೆ ನಡೆಯಿತು.

ಬಳಿಕ ಮಂಗಳೂರು ತಾರಸಿ ಗಾರ್ಡನ್ ಖ್ಯಾತಿಯ ತೋಟಗಾರಿಕಾ ತಜ್ಞ ಶ್ರೀ ಬ್ಲಾನಿ ಡಿಸೋಜಾ ರವರ ಜೊತೆ ಜೂಮ್ ಮೂಲಕ ನಡೆದ ನೇರ ಸಂವಾದ ಕಾರ್ಯಕ್ರಮದಲ್ಲಿ ಕತಾರ್ ನ ಉಷ್ಣ ಹವಾಮಾನದಲ್ಲೂ ಕೂಡ ನಡೆಸಬಹುದಾದ ತೋಟಗಾರಿಕೆಯ ಬಗ್ಗೆ ಮಾಹಿತಿಯನ್ನು ನೀಡಲಾಯಿತು.


ಕತಾರ್ ನ ವಿವಿಧ ಒಕ್ಕೂಟಗಳ ಸಾಲಿನಲ್ಲಿ ಮುಂಚೂಣಿಯಲ್ಲಿರುವ ತುಳುಕೂಟ ಕತಾರ್ ಹಲವು ವರ್ಷಗಳಿಂದ ಅನೇಕ ಸಮಾಜಮುಖಿ ಯೋಜನೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದು ಪರಿಸರ ಸಂರಕ್ಷಣೆಗೆ ತನ್ನದೇ ಆದ ಕೊಡುಗೆಯನ್ನು ನಿರಂತರವಾಗಿ ನೀಡುತ್ತಿದೆ.
ತಮಗೆ ನೀಡಿದ ಭಗೀರನನ್ನು ಮುಂಬರುವ ಮೂರು ತಿಂಗಳುಗಳ ಕಾಲ ಚೆನ್ನಾಗಿ ಸಲಹಿ ಬೆಳೆಸಿದ ಪ್ರತೀ ಸದಸ್ಯರಿಗೆ ಕೂಟವು ಪ್ರತಿಯಾಗಿ ಅಭಿನಂದನೆಯ ರೂಪದಲ್ಲಿ ಇನ್ನೊಂದು ಸಸಿಯನ್ನು ನೀಡುವುದಾಗಿ ಕೂಟದ ಅಧ್ಯಕ್ಷೆ ಘೋಷಿಸಿದ್ದು, ಪ್ರಕೃತಿ ಸೇವೆಯು ನಿರಂತರ ಪ್ರಕ್ರಿಯೆಯಾಗಿ ಇರಬೇಕೇ ಹೊರತು ಒಂದೇ ವಾರಕ್ಕೆ ಸೀಮಿತವಾಗಿರಬಾರದು ಎಂಬ ಸಂದೇಶವನ್ನು ಎತ್ತಿ ಹಿಡಿದಿದೆ.

Related Posts

Leave a Reply

Your email address will not be published.