ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ, ಬೇಹುಗಾರಿಕೆ ವಿರುದ್ಧ ಯುವ ಕಾಂಗ್ರೆಸ್ ನಿಂದ ಸಂಸತ್ ಘೆರಾವ್, ಪ್ರತಿಭಟನೆ

ನವದೆಹಲಿ; ನಿರಂತರ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗದಿಂದ ಯುವ ಜನತೆ ತತ್ತರಿಸುತ್ತಿದ್ದು, ರೈತ ವಿರೋಧಿ ನೀತಿಗಳು ಹಾಗೂ ಕೇಂದ್ರದ ಪೆಗಾಸಸ್ ಬೇಹುಗಾರಿಕೆ ವಿರೋಧಿಸಿ ರಾಷ್ಟ್ರೀಯ ಯುವ ಕಾಂಗ್ರೆಸ್ ನಿಂದ ರಾಜಧಾನಿಯಲ್ಲಿಂದು ಸಂಸತ್ ಘೆರಾವ್ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ‍್ರೀನಿವಾಸ್ ಬಿ.ಬಿ. ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡು

ಕೇಂದ್ರದ ಜನ ವಿರೋಧಿ ನೀತಿಗಳ ವಿರುದ್ಧ ನಿರ್ಣಾಯಕ ಮತ್ತು ಉಗ್ರ ಹೋರಾಟಕ್ಕೆ ಕರೆ ನೀಡಿದರು. ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಏಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಏಐಸಿಸಿ ಜಂಟಿ ಕಾರ್ಯದರ್ಶಿ ನಸೀರ್ ಹುಸೇನ್, ಏಐಸಿಸಿ ಜಂಟಿ ಕಾರ್ಯದರ್ಶಿ ಮತ್ತು ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಳ್ವಾರು ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.

ಸಂಸತ್ ಘೇರಾವ್ ನಲ್ಲಿ ರಾಜ್ಯ ಯುವ ಕಾಂಗ್ರೆಸ್ ನಿಂದ 500ಕ್ಕೂ ಹೆಚ್ಚು ಮಂದಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ರೈತ ವಿರೋಧಿ ಧೋರಣೆಯನ್ನು ಖಂಡಿಸಿದರು.

“ ಅನ್ಯಾಯ ನಮ್ಮ ಕಾನೂನಾದಾಗ ಪ್ರತಿಭಟನೆ ನಮ್ಮ ಕರ್ತವ್ಯವಾಗುತ್ತದೆ” “ ಒಗ್ಗಟ್ಟಿನಿಂದ ಒಗ್ಗೂಡೋಣ ಮತ್ತು ಕಾಂಗ್ರೆಸ್ ವರಿಷ್ಠ ನಾಯಕ ರಾಹುಲ್ ಗಾಂಧಿ ಅವರ ನಾಯಕತ್ವದಡಿ ಸಾಮಾನ್ಯ ಜನರಿಗೆ ಧ್ವನಿಯಾಗೋಣ, ಹೆಚ್ಚುತ್ತಿರುವ ನಿರುದ್ಯೋಗ ಮತ್ತಿತರ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತೋಣ” ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಜ್ಞೆ ಮಾಡಿದರು.

ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುತ್ತಿರುವ ಮತ್ತು ಪೆಗಾಸಸ್ ಬೇಹುಗಾರಿಕೆ ಮೂಲಕ ಪ್ರಜಾತಂತ್ರ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿರುವ ಮೋದಿ ಸರ್ಕಾರದ ನಿರಂಕುಶ ಆಡಳಿತ ವಿರುದ್ಧ ದೇಶಾದ್ಯಂತ ಯುವ ಕಾಂಗ್ರೆಸ್ ನಿಂದ ಡಿಜಿಟಲ್ ಅಭಿಯಾನ ಸಹ ಆರಂಭಿಸಲಾಗಿದೆ.

Related Posts

Leave a Reply

Your email address will not be published.