94ನೇ ವಸಂತಕ್ಕೆ ಕಾಲಿಟ್ಟ ಎಲ್‌.ಕೆ ಅಡ್ವಾಣಿ: ಮೋದಿ ಸೇರಿದಂತೆ ಗಣ್ಯರ ಶುಭಾಶಯ

ನವದೆಹಲಿ: ಮಾಜಿ ಉಪಪ್ರಧಾನಿ, ಬಿಜೆಪಿಯ ಭೀಷ್ಮ ಎಂದೇ ಪರಿಗಣಿಸಲ್ಪಟ್ಟಿರುವ ಎಲ್ ಕೆ ಅಡ್ವಾಣಿ ಇಂದು 94ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರುಗಳಿಂದ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಅಡ್ವಾಣಿ ಅವರ ನಿವಾಸಕ್ಕೆ ತೆರಳಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದಾರೆ ಮತ್ತು ಅವರಿಂದ ಆಶೀರ್ವಾದ ಪಡೆದು ಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, “ಗೌರವಾನ್ವಿತ ಅಡ್ವಾಣಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರ ದೀರ್ಘ ಮತ್ತು ಆರೋಗ್ಯಪೂರ್ಣ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ. ಜನರ ಸಬಲೀಕರಣ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ವೃದ್ಧಿಸುವಲ್ಲಿ ಅವರ ಅಪಾರ ಕೊಡುಗೆಗೆ ಈ ದೇಶ ಚಿರಋಣಿಯಾಗಿದೆ. ಅವರ ಪಾಂಡಿತ್ಯ ಮತ್ತು ಶ್ರೀಮಂತ ಜ್ಞಾನಕ್ಕಾಗಿ ಅವರು ವ್ಯಾಪಕವಾಗಿ ಗೌರವಿಸಲ್ಪಡುತ್ತಿದ್ದಾರೆ” ಎಂದಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೀಪಿನ ಅವರು ಕೂಡ ಎಲ್ ಕೆ ಅಡ್ವಾಣಿ ಅವರಿಗೆ ಜನ್ಮದಿನದ ಶುಭಾಶಯಗಳನ್ನು ತಿಳಿಸಿದ್ದು, ಪಕ್ಷವನ್ನು ಜನರ ಬಳಿಗೆ ತಲುಪಿಸುವಲ್ಲಿ ಅಡ್ವಾನಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ ಮತ್ತು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕೂಡ ಅಡ್ವಾಣಿ ಅವರು ಸ್ಪೂರ್ತಿದಾಯಕ ಮತ್ತು ಮಾರ್ಗದರ್ಶಿ ವ್ಯಕ್ತಿತ್ವ ಎಂದು ಶ್ಲಾಘಿಸಿದ್ದಾರೆ.

Related Posts

Leave a Reply

Your email address will not be published.