ಗಡಿ ಗ್ರಾಮದಲ್ಲಿ ಕೇರಳದ ಗ್ರಾಮಸ್ಥರು ಕೋವಿಡ್ ಲಸಿಕೆ ಪಡೆದುಕೊಳ್ಳುವಂತಿಲ್ಲ: ಸಚಿವ ಎಸ್. ಅಂಗಾರ

ಪುತ್ತೂರು: ದಕ್ಷಿಣಕನ್ನಡ ಜಿಲ್ಲೆಯ ಗಡಿ ಗ್ರಾಮಗಳಲ್ಲಿ ಪಕ್ಕದ ಕೇರಳದ ಗ್ರಾಮಸ್ಥರು ಬಂದು ಕೋವಿಡ್ ಲಸಿಕೆ ಪಡೆದುಕೊಳ್ಳಲು ಅವಕಾಶವಿಲ್ಲ. ನಮ್ಮ ಜಿಲ್ಲೆಯ ನಿವಾಸಿಗಳಿಗೆ ಮಾತ್ರ ಲಸಿಕೆ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸ್ಪಷ್ಟ ನಿರ್ದೇಶನ ನೀಡಿದರು.

ಪುತ್ತೂರು ತಾಲೂಕಿನ ಗಡಿ ಗ್ರಾಮವಾದ ನೆಟ್ಟಣಿಗೆ ಮುಡ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ನಿಯಂತ್ರಣ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಗ್ರಾಮಸ್ಥರಿಂದ ಕೇಳಿ ಬಂದ ದೂರನ್ನು ಆಲಿಸಿ ತಾಲೂಕು ಆರೋಗ್ಯಾಧಿಕಾರಿಯವರಿಗೆ ಸೂಚನೆ ನೀಡಿದರು.ನೆಟ್ಟಣಿಗೆ ಮುಡ್ನೂರು ಗಡಿ ಗ್ರಾಮವಾಗಿದ್ದು ಪಕ್ಕದ ಕೇರಳದ ಗ್ರಾಮದಿಂದಲೂ ಈಶ್ವರಮಂಗಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಮ್ಮ ಗ್ರಾಮದವರಿಗೆ ಅಭಾವ ಉಂಟಾಗುತ್ತದೆ ಎಂದು ಗ್ರಾಮಸ್ಥರು ಆಪಾದಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಉತ್ತರಿಸಿ, ಲಸಿಕೆ ಮಾರ್ಗಸೂಚಿ ಪ್ರಕಾರ ನಡೆದುಕೊಳ್ಳಲಾಗುತ್ತದೆ. ಮೊದಲ ಆದ್ಯತೆ ಈ ಗ್ರಾಮದವರಿಗೆ ನೀಡಲಾಗುತ್ತಿದೆ. ಪಕ್ಕದ ರಾಜ್ಯದವರಿಗೆ ನೀಡಲು ಅವಕಾಶವಿಲ್ಲ ಎಂದರು.

ಸಚಿವರು ಮಾತನಾಡಿ, ರಾಷ್ಟ್ರಮಟ್ಟದ ನೋಟದಲ್ಲಿ ಕರ್ನಾಟಕ, ಕೇರಳ ಎಲ್ಲವೂ ಒಂದೇ. ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿ ಆಯಾ ರಾಜ್ಯಗಳ ನೀತಿ ನಿರೂಪಣೆ ಪರಿಗಣನೆಗೆ ಬರುತ್ತವೆ. ನಮ್ಮ ರಾಜ್ಯದ ರೋಗ ನಿಯಂತ್ರಣ ನಮ್ಮ ಹೊಣೆಯಾದ ಕಾರಣ ನಾವು ಗಡಿಯಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಹೀಗಿರುವಾಗ ಪಕ್ಕದ ರಾಜ್ಯದವರಿಗೆ ಇಲ್ಲಿ ಲಸಿಕೆ ನೀಡಬೇಕಾಗಿಲ್ಲ ಎಂದರು.ಕೋವಿಡ್ ಪರೀಕ್ಷೆ ಪ್ರಮಾಣ ಕಡಿಮೆ ಮಾಡಿದರೆ ಪಾಸಿಟಿವಿಟಿ ಹೆಚ್ಚಾಗುತ್ತದೆ. ಒಂದು ಗ್ರಾಮದ ಪಾಸಿಟಿವಿಟಿ ಹೆಚ್ಚಾದರೆ, ತಾಲೂಕಿನ ಪಾಸಿಟಿವಿಟಿ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಜಿಲ್ಲೆಯ ಪಾಸಿಟಿವಿಟಿಯೂ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡಿ. ಲಸಿಕೆಯಲ್ಲಿ ಗಡಿ ಗ್ರಾಮಗಳಿಗೆ ಆದ್ಯತೆ ನೀಡಲಾಗಿದೆ. ಯಾವುದೇ ಸಲಕರಣೆಗಳಿಗೆ ಕೊರತೆ ಉಂಟಾಗಬಾರದು. ಈಗ ತಾಲೂಕು ಮಟ್ಟಕ್ಕೆ ಅನುದಾನ ನೀಡಲಾಗುತ್ತಿದೆ. ಟಿಎಚ್‌ಒ ಖಾತೆಗೂ 2 ಲಕ್ಷ ರೂ. ನೀಡಲಾಗಿದೆ. ದೂರು ಹೇಳಿಕೊಂಡು ಕೂರುವ ಬದಲು ಕೆಲಸ ಮಾಡಿ ತೋರಿಸಿ ಎಂದು ಸೂಚಿಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಮದಲ್ಲಿ 14 ಕೋವಿಡ್ ಪ್ರಕರಣವಿದ್ದು, 1 ಕಂಟೈನ್ಮೆಂಟ್ ವಲಯ ರಚಿಸಲಾಗಿದೆ. ಮನೆ ಮನೆ ಭೇಟಿ ಮಾಡಿ ತಪಾಸಣೆ ಮಾಡಲಾಗುತ್ತಿದೆ. ಗಡಿಯಲ್ಲಿ ಚೆಕ್‌ಪೋಸ್ಟ್ ಇರುವ ಕಾರಣ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ಒಳಬಿಡಲಾಗುತ್ತಿದೆ ಎಂದು ವೈದ್ಯರಾದ ಡಾ. ನಿಖಿಲ್ ಮಾಹಿತಿ ನೀಡಿದರು.ಇರುವ ಸಿಬ್ಬಂದಿಗಳೇ ಕೋವಿಡ್ ತಪಾಸಣೆ, ಲಸಿಕೆ, ಡಾಟಾ ಎಂಟ್ರಿ ಮಾಡಬೇಕಾಗಿರುವ ಕೆಲಸದ ಒತ್ತಡವಿದೆ. ಎಂಟ್ರಿ ವಿಳಂಬವಾಗುತ್ತಿದೆ ಎಂದು ಸಿಬ್ಬಂದಿ ಅಲವತ್ತುಕೊಂಡರು. ಆರೋಗ್ಯ ತುರ್ತು ಪರಿಸ್ಥಿತಿಯಿಂದ ಪಾರಾಗುವವರೆಗೆ ಶ್ರಮವಹಿಸಿ ಕೆಲಸ ಮಾಡಿ. ದೂರು ಹೇಳುವುದೇ ಕಾಯಕವಾಗಬಾರದು ಎಂದು ಸಚಿವರು ನುಡಿದರು. ಎಲ್ಲ ಕಡೆ ಡಾಟಾ ಎಂಟ್ರಿಯನ್ನು ಹಾಲಿ ಸಿಬ್ಬಂದಿಗಳೇ ಮಾಡುತ್ತಿದ್ದಾರೆ ಎಂದು ತಾ. ಆರೋಗ್ಯಾಧಿಕಾರಿ ಹೇಳಿದರು. ಗ್ರಾಮಕ್ಕೆ ಲಸಿಕೆ ಪ್ರಮಾಣ ಹೆಚ್ಚಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.

ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾದ ಡಾ. ಯತೀಶ್ ಉಳ್ಳಾಲ್, ತಹಸೀಲ್ದಾರ್ ರಮೇಶ್ ಬಾಬು, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಕುಮಾರ್ ಭಂಡಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಗ್ರಾಪಂ ಅಧ್ಯಕ್ಷರಾದ ರಮೇಶ್ ರೈ ಸಾಂತ್ಯ, ಉಪಾಧ್ಯಕ್ಷೆ ಫೌಜಿಯಾ ಇಬ್ರಾಹಿಂ ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?