ಮೀನು ಖರೀದಿಗೆ ಬಹಿಷ್ಕಾರ ಹಾಕಿ ಮಹಿಳೆಯರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ಯಶ ಕಾಣದು: ಸದಾನಂದ ಉಪ್ಪಿನಕುದ್ರು

ಕುಂದಾಪುರ: ಗಂಗೊಳ್ಳಿಯಲ್ಲಿ ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯ ಬಳಿಕ ಇಲ್ಲಿನ ಮೀನುಗಾರ ಮಹಿಳೆಯರಿಂದ ಮೀನು ಖರೀದಿ ಬಹಿಷ್ಕರಿಸಿದ ಅನ್ಯಧರ್ಮೀಯರ ನಡೆಯನ್ನು ಖಂಡಿಸಿ ಭಾನುವಾರ ಬಿಜೆಪಿ ಬೈಂದೂರು ಮಂಡಲ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಮೂಲಕ ಮೀನುಗಾರ ಮಹಿಳೆಯರಿಗೆ ಆತ್ಮಸ್ಥೈರ್ಯ ನೀಡಿದರು.

ಈ ವೇಳೆಯಲ್ಲಿ ಮಾತನಾಡಿದ ಬಿಜೆಪಿ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಗಂಗೊಳ್ಳಿಯಲ್ಲಿ ಗೋ ಹತ್ಯೆಯನ್ನು ವಿರೋಧಿಸಿ ನಡೆದ ಬೃಹತ್ ಪಾದಯಾತ್ರೆಯಲ್ಲಿ ಹಿಂದೂ ಸಮಾಜ ಒಗ್ಗಟ್ಟಿನಿಂದ ಭಾಗವಹಿಸಿ ಪ್ರತಿಭಟನೆ ನಡೆಸಿತ್ತು. ಈ ಪಾದಯಾತ್ರೆಯಲ್ಲಿ ಮಹಿಳಾ ಮೀನುಗಾರರು, ಮೀನು ಮಾರಾಟ ಮಾಡುವ ಮಹಿಳೆಯರು, ತಾಯಂದಿರು ಪಾಲ್ಗೊಂಡಿದ್ದರು ಎಂಬ ಒಂದೇ ಉದ್ದೇಶದಿಂದ ಅನ್ಯಧರ್ಮದ ಒಂದು ವರ್ಗ ಗಂಗೊಳ್ಳಿ ಮೀನು ಖರೀದಿಗೆ ಬಹಿಷ್ಕಾರ ಹಾಕಿರುವುದು, ಮೀನು ಖರೀದಿಗೆ ಬಂದ ಅನ್ಯಧರ್ಮದ ಜನರನ್ನು ತಡೆದು ಮೀನು ಖರೀದಿಸದಂತೆ ತಡೆಯುತ್ತಿರುವುದು ಖಂಡನೀಯ ಎಂದರು.

ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಹೊಟ್ಟೆಪಾಡಿಗೆ, ದೈನಂದಿನ ಜೀವನ ನಡೆಸಲು ಮೀನು ಮಾಡುತ್ತಿರುವ ಮೀನುಗಾರರಿಂದ ಒಂದೇ ಸಮನೆ ಮೀನು ಖರೀದಿಗೆ ಬಹಿಷ್ಕಾರ ಹಾಕುವ ಮೂಲಕ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಪ್ರಯತ್ನ ನಡೆಸಲಾಗುತ್ತಿದೆ. ಅನ್ಯಕೋಮಿನವರ ಈ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಅನ್ಯಕೋಮಿನವರ ಆರ್ಥಿಕ ಬಹಿಷ್ಕಾರದ ಪ್ರಯತ್ನವನ್ನು ಧಿಕ್ಕರಿಸುವ ನಿಟ್ಟಿನಲ್ಲಿ, ಮಹಿಳಾ ಮೀನುಗಾರರಲ್ಲಿ ಆತ್ಮಸ್ಥೈರ್ಯ ನೀಡಿ ಬೆಂಬಲ ನೀಡುವ ಹಾಗೂ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಸಾರುವ ಉದ್ದೇಶದಿಂದ ಬೈಂದೂರು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ವತಿಯಿಂದ ಗಂಗೊಳ್ಳಿ ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆ ಹಾಗೂ ಕ್ಷೇತ್ರದ ಬೇರೆ ಬೇರೆ ಭಾಗಗಳಿಂದ ಜನರು ಗಂಗೊಳ್ಳಿಗೆ ಬಂದು ಮೀನು ಮಾರುಕಟ್ಟೆಯಲ್ಲಿ ಮೀನು ಖರೀದಿ ಮಾಡುವ ಕಾರ್ಯ ನಿರಂತರವಾಗಿ ನಡೆಯಲಿದೆ. ಇದು ಯಾರ ವಿರುದ್ಧವೂ ಅಲ್ಲ, ಪ್ರತಿಭಟನೆಯೂ ಅಲ್ಲ ಎಂದು ಅವರು ಹೇಳಿದರು.

ಬೈಂದೂರು ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಸಂತೋಷ ಪೂಜಾರಿ, ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ ಮತ್ತು ಚಂದ್ರ ಜೋಗಿ, ಕಾರ್ಯದರ್ಶಿ ಉಮೇಶ ಮೊಗವೀರ, ಸಂತೋಷ ಪೂಜಾರಿ, ಉಡುಪಿ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಗೋಪಾಲ ಕಾಂಚನ್, ನಾರಾಯಣ ಖಾರ್ವಿ, ರವಿ ಗಾಣಿಗ ಕೆಂಚನೂರು, ಸುಕುಮಾರ್ ನೆಂಪು, ಸತೀಶ ಕುಲಾಲ್, ಕೃಷ್ಣ ಪೂಜಾರಿ, ತಾಪಂ ಮಾಜಿ ಸದಸ್ಯ ಪುಷ್ಪರಾಜ್ ಶೆಟ್ಟಿ, ಸುರೇಶ ಮೂಡುಬಗೆ, ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷೆ ಪ್ರೇಮಾ ಸಿ.ಪೂಜಾರಿ, ಸದಸ್ಯೆ ಶಾಂತಿ ಖಾರ್ವಿ, ಬಿಜೆಪಿ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published. Required fields are marked *

How Can We Help You?