ಹೂಡಿಕೆ ಮತ್ತು ವ್ಯಾಪಾರಕ್ಕೆ ದೊಡ್ಡ ಉತ್ತೇಜನ: ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ಗ್ರೂಪ್ ಜೊತೆಗೆ ಒಪ್ಪಂದಕ್ಕೆ ಸಹಿ

ದುಬೈ: ಹೂಡಿಕೆಗಳು ಮತ್ತು ವ್ಯಾಪಾರಕ್ಕೆ ದೊಡ್ಡ ಉತ್ತೇಜನ ದೊರೆಯುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ಗ್ರೂಪ್ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇಲ್ಲಿನ ದುಬೈಎಕ್ಸ್ ಪೊ 2020 ಕಾರ್ಯಕ್ರಮ ನಡೆಯುತ್ತಿರುವ ಪೆವಿಲಿಯನ್‍ನಲ್ಲಿ ಈ ಒಪ್ಪಂದಕ್ಕೆ ಕರ್ನಾಟಕ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳ ಸಚಿವ ಮುರುಗೇಶ್ ನಿರಾಣಿ ಹಾಗೂ ಐಟಿ, ಬಿಟಿ ಸಚಿವ ಸಿ ಎನ್ ಅಶ್ವಥ ನಾರಾಯಣ್ ಅವರ ಉಪಸ್ಥಿತಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ಭಾರತ ಮತ್ತು ಸಂಯುಕ್ತ ಅರಬ್ ಸಂಸ್ಥಾನದ ನಡುವೆ ಹೂಡಿಕೆಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಪ್ರೋತ್ಸಾಹಕ್ಕಾಗಿ ಗಲ್ಫ್ ಇನ್ವೆಸ್ಟ್ ಮೆಂಟ್ ಗ್ರೂಪ್ (ಜಿಐಐ) ಬೆಂಗಳೂರಿನಲ್ಲಿ ತನ್ನ ಕಚೇರಿ ತೆರೆಯಲಿದೆ.ಗಲ್ಫ್ ಇಸ್ಲಾಮಿಕ್ ಇನ್ವೆಸ್ಟ್ ಮೆಂಟ್ ಗ್ರೂಪ್,  ಯುಎಇ ಮೂಲದ ಶರೀಯ- ಬದ್ಧ ವಿತ್ತೀಯ ಸೇವೆಗಳ ಸಂಸ್ಥೆಯಾಗಿದ್ದು  ಸುಮಾರು 2 ಬಿಲಿಯನ್ ಡಾಲರ್‍ಗೂ ಹೆಚ್ಚು ಮೌಲ್ಯದ ಸಂಸ್ಥೆಯಾಗಿದೆ.ಜಿಐಐ ಗ್ರೂಪ್ ಬೆಂಗಳೂರಿನಲ್ಲಿ ಕಚೇರಿಯನ್ನು ತೆರೆಯುವುದರಿಂದ ಇನ್ನಷ್ಟು ಹೂಡಿಕೆಗಳು, ವ್ಯಾಪಾರ ಅಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಯಾಗಲಿದೆ ಎಂದು ಮುರುಗೇಶ್ ನಿರಾಣಿ ಆಶಾವಾದ ವ್ಯಕ್ತಪಡಿಸಿದರು.ಒಪ್ಪಂದದಂತೆ ಜಿಐಐ ಗ್ರೂಪ್ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 500 ಮಿಲಿಯನ್ ಅಮೆರಿಕನ್ ಡಾಲರ್ (ರೂ 3500 ಕೋಟಿ) ಹೂಡಿಕೆ ಮಾಡಲಿದೆ. ಮಧ್ಯಪೂರ್ವ ವಿಸ್ತರಣಾ ಯೋಜನೆ ಹೊಂದಿರುವ ಸ್ಟಾರ್ಟ್-ಅಪ್‍ಗಳಿಗೂ ಸಹಾಯ ಮಾಡುವ ಉದ್ದೇಶವನ್ನು ಜಿಐಐ ಹೊಂದಿದೆ.ದುಬೈಯಲ್ಲಿನ ಭಾರತೀಯ ಕಾನ್ಸುಲರ್ ಜನರಲ್ ಡಾ. ಅಮನ್ ಪುರಿ ಈ ಸಂದರ್ಭ ಉಪಸ್ಥಿತರಿದ್ದರಲ್ಲದೆ ಕರ್ನಾಟಕವನ್ನು ಭಾರತದ ಸ್ಟಾರ್ಟ್-ಅಪ್ ರಾಜಧಾನಿ ಎಂದು ಬಣ್ಣಿಸಿದರು.ಈ ಒಪ್ಪಂದ ಕುರಿತಂತೆ ಜಿಐಐ ಸಂಸ್ಥೆಯ ಸ್ಥಾಪಕ ಪಾಲುದಾರರಾದ ಹಾಗೂ ಜಂಟಿ ಸಿಇಒ ಗಳಾದ ಮೊಹಮ್ಮದ್ ಅಲ್‍ಹಸನ್ ಹಾಗೂ ಪಂಕಜ್ ಗುಪ್ತಾ  ಜಂಟಿ ಹೇಳಿಕೆ ಬಿಡುಗಡೆಗೊಳಿಸಿದ್ದಾರೆ.

“ಭಾರತದ ತಂತ್ರಜ್ಞಾನ ರಾಜಧಾನಿ ಬೆಂಗಳೂರಿನಲ್ಲಿ ಜಿಐಐ ಕಚೇರಿ ಸ್ಥಾಪಿಸುವ ಕುರಿತು ಅಧಿಕೃತವಾಗಿ ಘೋಷಿಸಲು ನಮಗೆ ಸಂತೋಷವಾಗುತ್ತಿದೆ. ಭಾರತವು ಜಿಐಐಗೆ ಪ್ರಮುಖ ಹೂಡಿಕೆಯ ಕ್ಷೇತ್ರವಾಗಿದೆ ಹಾಗೂ ಭವಿಷ್ಯದಲ್ಲಿ ಇನ್ನಷ್ಟು ಹೂಡಿಕೆಗಳನ್ನು ಭಾರತದಲ್ಲಿ ಮಾಡಲು ಹಾಗೂ ಅಲ್ಲಿನ  ಬೆಳೆಯುತ್ತಿರುವ ಸ್ಟಾರ್ಟ್-ಅಪ್ ಕ್ಷೇತ್ರ ಮತ್ತಿತರ ಉದ್ಯಮ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ನಾವು ಬದ್ಧರಾಗಿದ್ದೇವೆ. ಇಂಡಿಯಾ ಗ್ರೋತ್ ಪೋರ್ಟ್‍ಫೋಲಿಯೋ ಸರಣಿಯಲ್ಲಿ ಈಗಾಗಲೇ ರೂ 1000 ಕೋಟಿ ಹೂಡಿಕೆ ಯಶಸ್ಸು ಕಂಡಿದೆ ಹಾಗೂ  ಭಾರತ-ಯುಎಇ ಹೂಡಿಕೆ ಕಾರಿಡಾರ್ ಇನ್ನಷ್ಟು ಅಭಿವೃದ್ಧಿ ಹೊಂದಬೇಕೆಂಬುದು ನಮ್ಮ ಆಶಯವಾಗಿದೆ” ಎಂದು ಅವರು ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?