ಅಡಿಕೆ ಮರಗಳಿಗೆ ತಗುಲಿದ ಹಳದಿ ರೋಗ ಅಡಿಕೆ ಬೆಳಗಾರರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಸಂಜೀವ ಮಠಂದೂರು ಮನವಿ

ತೋಟಗಾರಿಕ ಬೆಳೆಯಾಗಿರುವ ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ತಾಲೂಕುಗಳ ಕೃಷಿಕರ ಜೀವನಕ್ಕೆ ಆಧಾರವಾಗಿದೆ. ಧಾರಣೆಯ ಏರಿಳಿತಗಳ ಹೊರತಾಗಿಯೂ ಈ ಭಾಗಗಳ ಜನ ಅಡಿಕೆ ಬೆಳೆಯನ್ನೇ ಅವಲಂಬಿಸಿದ್ದಾರೆ. ದಶಕಗಳ ಹಿಂದೆ ಅಡಿಕೆ ಮರಗಳಿಗೆ ತಗಲಿದ ಹಳದಿ ರೋಗವೆಂಬ ಹೆಮ್ಮಾರಿ ಈಗ ಹೆಮ್ಮರವಾಗಿ ಬೆಳೆದು ಎಕರೆಗಟ್ಟಲೆ ಅಡಿಕೆ ತೋಟಗಳನ್ನು ನಾಶ ಮಾಡಿದೆ. ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ಹಲವೆಡೆ ಅಡಿಕೆ ಮರಗಳನ್ನು ಬಾಧಿಸಿರುವ ಈ ರೋಗಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಸರಕಾರದ ಇಲಾಖೆಗಳಿಗಾಗಲಿ, ತೋಟಗಾರಿಕ ತಜ್ಞರಿಗಾಗಲಿ ಇನ್ನೂ ಸಾಧ್ಯವಾಗಿಲ್ಲ. ವರ್ಷಗಳುರುಳಿದಂತೆ ಹಳದಿ ರೋಗದ ಸಮಸ್ಯೆ ಅಧಿಕಗೊಳ್ಳುತ್ತಲೇ ಸಾಗಿದ್ದು ಬೆಳೆಗಾರರ ಪಾಲಿಗೆ ಇದೊಂದು ಬಗೆಹರಿಯದ ಜಟಿಲ ಸಮಸ್ಯೆಯಾಗಿಯೇ  ಉಳಿದಿದೆ.

ಅಡಿಕೆಗೆ ಮಾರುಕಟ್ಟೆಯಲ್ಲಿ ಸೂಕ್ತ ಧಾರಣೆ, ಬೇಡಿಕೆ ಇರುವ ಸಂದರ್ಭದಲ್ಲಿಯೇ ಹಳದಿ ರೋಗಕ್ಕೆ ಅಡಿಕೆ ಮರಗಳು ತುತ್ತಾಗುತ್ತಿರುವುದು ಬೆಳೆಗಾರರನ್ನು ಆತಂಕದ ಮಡುವಿಗೆ ತಳ್ಳಿದೆ. ಈ ನಿಟ್ಟಿನಲ್ಲಿ ಬೆಳಗಾವಿ ನಡೆಯುತ್ತಿರುವ ಅಧಿವೇಶನದ ಸಂದರ್ಭದಲ್ಲಿ ಪುತ್ತೂರು ಶಾಸಕರಾದ ಶ್ರೀ ಸಂಜೀವ ಮಠಂದೂರು ರವರು ಮಾತನಾಡಿ ಈ ಸಮಸ್ಯೆಗೆ ಸೂಕ್ತ ಪರಿಹಾರವನ್ನು ಒದಗಿಸುವಂತೆ ಮನವಿ ಮಾಡಿದರು.

Related Posts

Leave a Reply

Your email address will not be published.

How Can We Help You?