ರಸ್ತೆ ಎಲ್ಲೆಡೆ ಚೆಲ್ಲಿದ ಯುಪಿಸಿಎಲ್ ಹಾರು ಬೂದಿ : ಸಾರ್ವಜನಿಕರ ಆಕ್ರೋಶ

 ಗ್ರಾ.ಪಂ. ಎಚ್ಚರಿಕೆಯ ಹೊರತಾಗಿಯೂ ಅನಧಿಕೃತವಾಗಿ ಟಿಪ್ಪರ್ ಗಳಲ್ಲಿ ಹಾರುಬೂದಿ ಸಾಗಿಸುತ್ತಿದ್ದ ವೇಳೆ ರಸ್ತೆ ಎಲ್ಲೆಡೆ ಚೆಲ್ಲಿದ ಹಾರು ಬೂದಿಯನ್ನು ತೆರವುಗೊಳಿಸಲು ತಿಳಿಸಿದ ಗ್ರಾ.ಪಂ. ಉಪಾಧ್ಯಕ್ಷಗೆ ಆವಾಜ್ ಹಾಕಿದ ಯುಪಿಸಿಎಲ್ ಗುತ್ತಿಗೆದಾರನ ವಿರುದ್ಧ ಸಿಡಿದ ಜನರು, ಪೊಲೀಸ್ಅಧಿಕಾರಿಗಳ ಸಮ್ಮುಖದಲ್ಲಿ ಆತನಿಂದಲೇ ಕ್ಲಿನ್ ಮಾಡಿಸಿದ ಘಟನೆ ಮುದರಂಗಡಿಯಲ್ಲಿ ನಡೆದಿದೆ.

ಯುಪಿಸಿಎಲ್ ಗುತ್ತಿಗೆದಾರ ಡೇವಿಡ್ ಡಿಸೋಜ ಎಂಬಾತ ಕಾನೂನು ಬಾಹಿರವಾಗಿ ಟಿಪ್ಪರ್ ಗಳಲ್ಲಿ ಹಾರು ಬೂದಿ ಸಾಗಿಸುತ್ತಿದ್ದರು, ಮುದರಂಗಡಿ ಪೇಟೆ ಸಮೀಪದ ರಸ್ತೆ ಉಬ್ಬು ಬಳಿ ಬೂದಿ ರಸ್ತೆಗೆ ಚೆಲ್ಲಿದೆ. ಚೆಲ್ಕಿದ ಬೂದಿ ಗಾಳಿಯಲ್ಲಿ ಹಾರುತ್ತಿದ್ದರೂ ಟಿಪ್ಪರ್ ನಿಲ್ಲದೆ ಮುಂದೊಡಿದೆ, ಇದರಿಂದ ಆಕ್ರೋಶಗೊಂಡ ಮುದರಂಗಡಿ ಗ್ರಾ.ಪಂ. ಉಪಾಧ್ಯಕ್ಷ ಶರತ್ ಶೆಟ್ಟಿ,  ಗುತ್ತಿಗೆದಾರನಲ್ಲಿ ರಸ್ತೆಗೆ ಚೆಲ್ಲಿದ ಬೂದಿ ತೆರವುಗೊಳಿಸುವಂತೆ ಸೂಚಿಸಿದಾಗ ಉಪಾಧ್ಯಕ್ಷನಲ್ಲಿ ಗುತ್ತಿಗೆದಾರ ಉಢಾಪೆಯಾಗಿ ವರ್ತಿಸಿದ್ದಾನೆ ಎಂಬುದಾಗಿ ಶರತ್ ಶೆಟ್ಟಿ ಆರೋಪಿಸಿದ್ದಾರೆ.  ಈ ಘಟನೆಯನ್ನು ಗಮನಿಸುತ್ತಿದ್ದ ಸಾರ್ವಜನಿಕರು ಉಪಾಧ್ಯಕ್ಷರ ನೆರವಿಗೆ ಬಂದು ಪಡುಬಿದ್ರಿ ಪೊಲೀಸರಿಗೆ ಮಾಹಿತಿ ನೀಡಿ ಅವರು ಸ್ಥಳಕ್ಕೆ ಬಂದ ಬಳಿಕವೂ ಉಪಾಧ್ಯಕ್ಷರು ಹಾಗೂ ಗುತ್ತಿಗೆದಾರನ ಮಧ್ಯೆ ಮಾತಿನ ಚಕಮಕಿ ನಡೆದು ಅಂತಿಮವಾಗಿ ಗುತ್ತಿಗೆದಾರ ಮುಖಾಂತರವೇ ರಸ್ತೆಯನ್ನು ಕ್ಲಿನ್ ಮಾಡಿಸಲಾಯಿತು. ಈ ಬಗ್ಗೆ ಮಾತನಾಡಿದ ಉಪಾಧ್ಯಕ್ಷ ಶರತ್ ಶೆಟ್ಟಿ, ಗುತ್ತಿಗೆದಾರ ಗೂಂಡಾವರ್ತನೆ ಅತಿಯಾಗಿದ್ದು, ಈ ಬಗ್ಗೆ ಆತನ ಯುಪಿಸಿಎಲ್ ಕಂಪನಿಯ ಗುತ್ತಿಗೆಯನ್ನು ರದ್ದುಗೊಳಿಸುವಂತೆ ಗ್ರಾ.ಪಂ. ಮೂಲಕ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?