ಎಸ್‌ಕೆಎಫ್ ಬಾಯ್ಲರ್‍ಸ್ ಎಂಡ್ ಡ್ರೈಯರ್‍ಸ್ ಕೈಗಾರಿಕೆ ಮುಚ್ಚುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

ಮೂಡುಬಿದಿರೆ:ಬನ್ನಡ್ಕದಲ್ಲಿರುವ ಬೆಂಗಳೂರು ಮೂಲದ ಎಸ್‍ಕೆಎಫ್ ಬಾಯ್ಲರ್ಸ್ ಎಂಡ್ ಡ್ರೈಯರ್ಸ್ ಕೈಗಾರಿಕೆಯನ್ನು ಮುಚ್ಚಬೇಕೆಂದು ಆಗ್ರಹಿಸಿ ಶುಕ್ರವಾರ ಪಡುಮಾರ್ನಾಡು ಗ್ರಾಮಪಂಚಾಯಿತಿ ಕಚೇರಿ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸೂರಜ್ ಜೈನ್ `ಕಂಪೆನಿಯ ಶೌಚ ನೀರು ಪಕ್ಕದ ಮನೆಗಳ ಜಾಗಕ್ಕೆ ಹರಿದು ಪರಿಸರ ಮಾಲಿನ್ಯ ಉಂಟಾಗಿದೆ. ಪೈಂಟಿಂಗ್‍ನಿಂದ ಹಾಗೂ ಇನ್ನೊಂದೆಡೆ ಶಬ್ದ ಮಾಲಿನ್ಯದಿಂದಲೂ ಸ್ಥಳೀಯರಿಗೆ ತೊಂದರೆ ಆಗುತ್ತಿದೆ. ಪರವಾನಿಗೆ ನವೀಕರಿಸದೆ ಅನಧಿಕೃತವಾಗಿ ಕಂಪೆನಿ ಕಾರ್ಯನಿರ್ವಹಿಸುತ್ತಿದೆ. ಈ ಬಗ್ಗೆ ಪಂಚಾಯಿತಿಗೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗೆ ಹಲವು ಬಾರಿ ದೂರು ನೀಡಿದರೂ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ. ಕಂಪೆನಿಗೆ ಬೀಗ ಮುದ್ರೆ ಹಾಕದೆ ನಾವು ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದ ಎಚ್ಚರಿಸಿದರು. ಪಂಚಾಯಿತಿ ಅಧಿಕಾರಿಗಳ ವಿರುದ್ಧ ಪ್ರತಿಭಟನೆಕಾರರು ಧಿಕ್ಕಾರ ಕೂಗಿದರು.

ಪೊಲೀಸ್ ವಾಹನದಲ್ಲಿ ಓರ್ವ ಮಹಿಳಾ ಪೇದೆ ಸಹಿತ ಇಬ್ಬರು ಪೊಲೀಸರು ಎಸ್‍ಕೆಎಫ್‍ಗೆ ಬಂದಿದ್ದರು. ರಕ್ಷಣೆ ನೀಡಬೇಕೆಂದು ನಮಗೆ ಮೇಲಾಧಿಕಾರಿಗಳಿಂದ ಸೂಚನೆ ಬಂದಿಲ್ಲ ಎಂದು ಹೇಳಿ ಪಂಚಾಯಿತಿ ಅಧಿಕಾರಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿದರು. ಕಂಪೆನಿಗೆ ಬೀಗಹಾಕಲು ಬಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮಾ ನಾಯಕ್ ಮತ್ತು ಸಿಬಂದಿಗಳು ಮತ್ತು ಅಧ್ಯಕ್ಷೆ ಕಲ್ಯಾಣಿ ಪೊಲೀಸ್ ರಕ್ಷಣೆ ಸಿಗದ ಕಾರಣ ಎಸ್‍ಕೆಎಫ್‍ನಿಂದ ವಾಪಾಸಾದರು.

ತಾಲ್ಲೂಕು ಪಂಚಾಯಿತಿ ಸಿಇಒ ದಯಾವತಿ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪ್ರಮುಖರ ಜತೆ ಮಾತುಕತೆ ನಡೆಸಿ ಸೋಮವಾರದವರೆಗೆ ಕಾಯುವಂತೆ ವಿನಂತಿಸಿದ್ದಾರೆ. ಆದರೆ ಇದಕ್ಕೊಪ್ಪದ ಪ್ರತಿಭಟನಕಾರರು ಅಹೋರಾತ್ರಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.  

Related Posts

Leave a Reply

Your email address will not be published.

How Can We Help You?