ರಾಜ್ಯದಲ್ಲಿ ಡಿ.28 ರಿಂದ ನೈಟ್ ಕರ್ಫ್ಯೂ ಜಾರಿ: ಸಿಎಂ ಬೊಮ್ಮಾಯಿ ನೇತೃತ್ವದ ಸಭೆಯಲ್ಲಿ ನಿರ್ಧಾರ

ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣದಿಂದ ಡಿಸೆಂಬರ್ 28ರಿಂದ ಮತ್ತೆ ರಾಜ್ಯದಾದ್ಯಂತ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಭಾನುವಾರ ಬೆಳಿಗ್ಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ‌ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.‌ಸುಧಾಕರ್, ‘ಡಿ.28ರಿಂದ ಪ್ರತಿ ದಿನ ರಾತ್ರಿ 10ರಿಂದ ಬೆಳಿಗ್ಗೆ5 ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಆಧರಿಸಿ ಹತ್ತು ದಿನಗಳ (ಜನವರಿ 7) ಬಳಿಕ ಮುಂದಿನ ಕ್ರಮದ ಕುರಿತು ನಿರ್ಧರಿಸಲಾಗುವುದು’ ಎಂದರು.

ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ. ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್ ಮತ್ತು ಕ್ಲಬ್‌ಗಳಲ್ಲಿ ಸಾಮರ್ಥ್ಯದ ಶೇಕಡ 50ರಷ್ಟು ಆಸನಗಳ ಭರ್ತಿಗೆ ಮಾತ್ರ ಅವಕಾಶವಿದೆ. ಸದ್ಯಕ್ಕೆ ಇತರ ಉದ್ಯಮಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ ಶೇ 97ರಷ್ಟು ಮಂದಿ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ. ಶೇ 3ರಷ್ಟು ಮಂದಿ ಮೊದಲ ಡೋಸ್ ಪಡೆಯುವುದು ಬಾಕಿ ಇದೆ. ಶೇ 72ರಷ್ಟು ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ ಎಂದರು.

ರಾಜ್ಯದಲ್ಲಿ 15ರಿಂದ 18 ವರ್ಷ ವಯೋಮಾನದ 43 ಲಕ್ಷ ಮಕ್ಕಳು, ಯುವ ಜನರಿದ್ದಾರೆ. ಅವರಿಗೆ ಕೋವಿಡ್ ಲಸಿಕೆ ನೀಡಲು ಸಿದ್ಧತೆ ನಡೆದಿದೆ. ಕೋವಿಡ್ ನಿಯಂತ್ರಣ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವವರು ಮತ್ತು ತೀವ್ರ ಸ್ವರೂಪದ ಅನಾರೋಗ್ಯದ ಸಮಸ್ಯೆ ಇರುವವರಿಗೆ ಬೂಸ್ಟರ್ ಡೋಸ್ ನೀಡುವುದಕ್ಕೂ ತಯಾರಿ ಮಾಡಲಾಗುತ್ತಿದೆ ಎಂದು ಸುಧಾಕರ್ ಹೇಳಿದರು.

ದೇಶದಲ್ಲಿ ಓಮೈಕ್ರಾನ್ ತಳಿಯ ಕೋವಿಡ್ ವೈರಾಣು ಸೋಂಕಿನ 400ಕ್ಕೂ ಹೆಚ್ಚು ಪ್ರಕರಣಗಳು ದೃಢಪಟ್ಟಿವೆ. ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರವಾಗಿ ಏರಿಕೆಯಾದರೆ ಹೇಗೆ ಎದುರಿಸಬೇಕು ಎಂಬುದರ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಆರೋಗ್ಯ ಇಲಾಖೆ ನಡೆಸಿರುವ ಸಿದ್ಧತೆಗಳನ್ನು ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು ಎಂದರು.

ರಾಜ್ಯದಲ್ಲಿ ಸದ್ಯ 4,000 ಐಸಿಯು ಹಾಸಿಗೆಗಳಿವೆ.  7,500 ಹಾಸಿಗೆಗಳನ್ನು ಐಸಿಯು ಹಾಸಿಗೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದರು.

ಕಂದಾಯ ಸಚಿವ ಆರ್. ಅಶೋಕ, ಗೃಹ ಸಚಿವ ಆರಗ ಜ್ಞಾನೇಂದ್ರ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.‌ರವಿಕುಮಾರ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

ಮಾರ್ಗಸೂಚಿ ಆದೇಶದ ಪ್ರಮುಖಾಂಶಗಳು:

* ಡಿಸೆಂಬರ್‌ 30ರಿಂದ 2022ರ ಜನವರಿ 2ರ ವರೆಗೂ ರೆಸ್ಟೊರೆಂಟ್‌, ಬಾರ್‌, ಪಬ್‌ ಹಾಗೂ ಹೋಟೆಲ್‌ಗಳಲ್ಲಿ ಸಾಮರ್ಥ್ಯದ ಶೇಕಡ 50ರಷ್ಟು ಆಸನಗಳ ಭರ್ತಿಗೆ ಅವಕಾಶ.
* ರಾತ್ರಿ ಕರ್ಫ್ಯೂ: ಡಿಸೆಂಬರ್‌ 28ರಿಂದ 2022ರ ಜನವರಿ 7ರ ವರೆಗೂ; ರಾತ್ರಿ 10ರಿಂದ ಬೆಳಿಗ್ಗೆ 5ರವರೆಗೂ.
* ಮದುವೆ ಸೇರಿದಂತೆ ಇತರೆ ಸಭೆ ಸಮಾರಂಭಗಳಲ್ಲಿ ಭಾಗಿಯಾಗುವವರ ಸಂಖ್ಯೆ 300 ಜನರನ್ನು ಮೀರುವಂತಿಲ್ಲ.
* ಮಹಾರಾಷ್ಟ್ರ ಮತ್ತು ಕೇರಳ ಗಡಿ ಭಾಗಗಳಲ್ಲಿ ಓಮೈಕ್ರಾನ್‌ ಸೋಂಕು ತಡೆಗೆ ಕಠಿಣ ನಿಗಾವಹಿಸುವುದು.

ರಾತ್ರಿ ಕರ್ಫ್ಯೂ ನಿರ್ಬಂಧಗಳು

* ತುರ್ತು ಅಗತ್ಯಗಳನ್ನು ಹೊರತು ಪಡಿಸಿ ಉಳಿದಂತೆ ಸಾರ್ವಜನಿಕರ ಸಂಚಾರಕ್ಕೆ ರಾತ್ರಿ 10ರಿಂದ ಬೆಳಿಗ್ಗೆ 5ರ ವರೆಗೂ ನಿರ್ಬಂಧ
* ರೋಗಿಗಳು ಮತ್ತು ಅವರ ಸಹಾಯಕರ ತುರ್ತು ಸಂಚಾರಕ್ಕೆ ಅವಕಾಶ
* ಸಂಸ್ಥೆಗಳಲ್ಲಿ ರಾತ್ರಿ ಪಾಳಿಯ ಉದ್ಯೋಗಿಗಳು ಕಂಪನಿಯ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅವಕಾಶವಿದೆ
* ಇಂಟರ್‌ನೆಟ್‌ ಸೇವೆಗಳು ಮತ್ತು ದೂರಸಂಪರ್ಕ ಸೇವೆ ಕಂಪನಿಗಳ ಉದ್ಯೋಗಿಗಳು, ವಾಹನಗಳ ಸಂಚಾರಕ್ಕೆ ಅವಕಾಶ (ಐಡಿ ಕಾರ್ಡ್ ಇರಬೇಕು)
* ವೈದ್ಯಕೀಯ, ಔಷಧ ಮಳಿಗೆಗಳು ಸೇರಿ ಅಗತ್ಯ ಸೇವೆಗಳನ್ನು ಹೊರತು ಪಡಿಸಿ ಇತರೆ ವಾಣಿಜ್ಯ ಚಟುವಟಿಕೆಗಳಿಗೆ ನಿರ್ಬಂಧ
* ಸಾರ್ವಜನಿಕ ಸಾರಿಗೆ, ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶವಿದೆ.

Related Posts

Leave a Reply

Your email address will not be published. Required fields are marked *

How Can We Help You?