ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ದೌರ್ಜನ್ಯ ಪ್ರಕರಣ : ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಯ

ಕುಂದಾಪುರ: ಘಟನೆಯ ಕುರಿತು ಮನಸ್ಸಿಗೆ ತುಂಬಾ ನೋವಾಗಿದೆ. ಎಲ್ಲವನ್ನೂ ಮರೆತು ನೆಮ್ಮದಿಯಿಂದಿರಿ ಸರ್ಕಾರ ನಿಮ್ಮ ಜೊತೆಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೊಂದ ಕೊರಗರಿಗೆ ಧೈರ್ಯ ತುಂಬಿದ್ದಾರೆ.

ಕೋಟತಟ್ಟು ಗ್ರಾ.ಪಂ ವ್ಯಾಪ್ತಿಯ ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ನಡೆದ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಬುಧವಾರ ರಾತ್ರಿ ಕೋಟತಟ್ಟು ಕೊರಗ ಕಾಲನಿಗೆ ಭೇಟಿ ನೀಡಿದ ಅವರು ಕೊರಗರ ನೋವುಗಳನ್ನು ಆಲಿಸಿದರು.

ಘಟನೆಯ ಕುರಿತು ಮಾತನಾಡಿದ ಅವರು ಈ ಕೊರಗರ ಕೇರಿ ಅನಾದಿ ಕಾಲದಿಂದಲೂ ಇದ್ದು ಇಲ್ಲಿಯ ಒಂಭತ್ತು ಕುಟುಂಬಗಳೊಂದಿಗೆ ನಾನು ಮತ್ತು ಊರಿನ ಜನರು ಭಾವನಾತ್ಮಕ ಸಂಬಂಧವನ್ನು ಇಟ್ಟುಕೊಂಡಿದ್ದೇವೆ. ನಾನು ಗ್ರಾಮ ಪಂಚಾಯತ್ ಸದಸ್ಯನಾಗಿ ಇಲ್ಲಿಯ ಕುಟುಂಬಗಳೊಂದಿಗೆ ಹಲವಾರು ಅಭಿವೃದ್ದಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದೇನೆ. ಮೆಹಂದಿ ಕಾರ್ಯಕ್ರಮದಲ್ಲಿ ನಡೆದಿರುವ ಪೊಲೀಸ್ ದೌರ್ಜನ್ಯ ಹಿನ್ನಲೆಯಲ್ಲಿ ಈಗಾಗಲೇ ಹೇಳಿರುವಂತೆ ಪಿ ಎಸ್ ಐ ಅವರನ್ನು ಅಮಾನತುಗೊಳಿಸಿ ಉಳಿದ ಏಳು ಮಂದಿ ಸಿಬ್ಬಂದಿಗಳನ್ನು ವರ್ಗಾವಣೆಗೊಳಿಸಲಾಗಿದೆ. ಜೊತೆಯಲ್ಲಿ ಇಡೀ ಪ್ರಕರಣವನ್ನು ಸಮಗ್ರವಾಗಿ ತನಿಖೆ ಮಾಡಲು ಸೂಚಿಸಿದ್ದೇನೆ ಎಂದರು.

ಸಂತ್ರಸ್ಥ ಕುಟುಂಬಗಳ ನೋವಿನಲ್ಲಿ ನಾವೆಲ್ಲಾರೂ ಭಾಗಿಯಾಗಿದ್ದು ಅವರೊಂದಿಗೆ ಸದಾ ಬೆಂಬಲವಾಗಿ ನಿಲ್ಲುತ್ತೇವೆ. ಪ್ರಕರಣವನ್ನು ಹೊರಗಿನ ಅಧಿಕಾರಿಗಳಿಂದ ತನಿಖೆ ಮಾಡುವ ಆಗ್ರಹ ಇದ್ದು ಅದರ ಕುರಿತು ಪರಿಶೀಲನೆ ನಡೆಸಲಾಗುವುದು. ಕುಟುಂಬಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಯಾಗಬೇಕು ಎನ್ನುವ ಬಹಳ ದಿನಗಳ ಬೇಡಿಕೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಎಲ್ಲಾ ಕುಟುಂಬಗಳಿಗೆ ಹಕ್ಕು ಪತ್ರದ ವಿಚಾರದಲ್ಲಿ ಸಮಸ್ಯೆ ಇದ್ದು ನಾಲ್ಕು ಜನರಿಗೆ ಕೂಡಲೇ ಹಕ್ಕು ಪತ್ರ ನೀಡಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಐದು ಕುಟುಂಬಗಳಿಗೆ ಸಂಬಂಧಪಟ್ಟು ಭೂಸ್ವಾಧಿನ ಪ್ರಕ್ರಿಯೆ ನಡೆಸಿ ಅದಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಅತ್ಯಂತ ಕಟ್ಟಕಡೆಯ ಸಮಾಜದವರಾಗಿದ್ದು ಇಂತಹ ಕುಟುಂಬಗಳ ಮೇಲೆ ದೌರ್ಜನ್ಯ ನಡೆದಿರುವುದು ನೋವು ತಂದಿದೆ. ಯಾವ ಕಾರಣಕ್ಕೂ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲಾಗುವುದು. ಈ ಕುಟುಂಬಗಳಿಗೆ ಅಗತ್ಯ ಭದ್ರತೆ ನೀಡಲು ಗೃಹ ಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

ಪ್ರಕರಣದ ತನಿಖೆ ಮುಗಿಯುವವರೆಗೂ ಪಿಎಸ್‌ಐ ಅವರನ್ನು ಅಮಾನತುಗೊಳಿಸಿದಂತೆ, ಉಳಿದ ಸಿಬ್ಬಂದಿಗಳನ್ನು ಅಮಾನತುಗೊಳಿಸಬೇಕು. ಅಲ್ಲದೇ ಹೊರ ಜಿಲ್ಲಾ ಅಧಿಕಾರಿಗಳಿಂದ ತನಿಖೆಯಾದರೆ ಮಾತ್ರ  ಪ್ರಕರಣದ ನಿಸ್ಪಕ್ಷಪಾತ ತನಿಖೆಯಾಗುವ ವಿಶ್ವಾಸವಿದೆ. ಹೀಗಾಗಿ ನಾಗರಿಕಾ ಹಕ್ಕು ಜಾರಿ ನಿರ್ದೇಶನಾಲಯದಿಂದ ತನಿಖೆಯಾಗಬೇಕು ಎಂದು ಮುಖಂಡರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕೂರ್ಮರಾವ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಕೊರಗ ಮುಖಂಡರಾದ ಗಣೇಶ್ ಕುಂಭಾಶಿ, ಗಣೇಶ್ ಬಾರ್ಕೂರು, ಶೇಖರ ಮರವಂತೆ, ದಸಂಸ ಮುಖಂಡರಾದ ಉದಯ್ ಕುಮಾರ್ ತಲ್ಲೂರು, ಮಂಜುನಾಥ ಗಿಳಿಯಾರ್, ಚಂದ್ರಮ ತಲ್ಲೂರು, ಬಿಜೆಪಿ ಗ್ರಾ.ಪಂ ಸದಸ್ಯರು ಇದ್ದರು.

Related Posts

Leave a Reply

Your email address will not be published. Required fields are marked *

How Can We Help You?