ಕುಂದಾಪುರ: ಭಾವನಾತ್ಮಕ ಡೆತ್ ನೋಟ್ ಬರೆದಿಟ್ಟು ಕನಸು ಕಂಗಳ ಹುಡುಗ ನೇಣಿಗೆ ಶರಣು

ಕುಂದಾಪುರ: ಮೊಬೈಲ್ ಆಪ್ ನಲ್ಲಿ ಮಾಡಿಕೊಂಡ ಸಾಲ ತೀರಿಸಲಾಗದೆ ಡೆತ್ ನೋಟ್ ಬರೆದಿಟ್ಟು ಎಮ್ಎನ್ಸಿ ಕಂಪೆನಿ ಉದ್ಯೋಗಿ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಳವಳಕಾರಿ ಘಟನೆ ಇಲ್ಲಿನ ಹೆಮ್ಮಾಡಿಯ ಹರೆಗೋಡುವಿನಲ್ಲಿ ನಡೆದಿದೆ.

ಹೆಮ್ಮಾಡಿಯ ಹರೆಗೋಡು ಕೊಳಹಿತ್ಲು ನಿವಾಸಿ ಸಂಜೀವ ದೇವಾಡಿಗ ಹಾಗೂ ಕನಕ ಎಂಬವರ ಪುತ್ರ ವಿಘ್ನೇಶ್ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಬುಧವಾರ ರಾತ್ರಿ ಮನೆಯಲ್ಲಿ ಊಟ ಮುಗಿಸಿ ಬೇಗನೇ ಮಲಗಿದ್ದ ವಿಘ್ನೇಶ್ ನಸುಕಿನ ಜಾವ ಐದು ಗಂಟೆಯ ಸುಮಾರಿಗೆ ಮನೆ ಎದುರಿನ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಘ್ನೇಷ್ ತಾಯಿ ಬೆಳಿಗ್ಗೆ ಎದ್ದು ನೋಡುವಾಗ ಮನೆಯ ಬಾಗಿಲು ತೆರೆದಿತ್ತು. ಅನುಮಾನಗೊಂಡು ಹೊರಗಡೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಸ್ನೇಹಿರೊಡಗೂಡಿ ಬ್ಯುಸಿನೆಸ್ ಆರಂಭಿಸಿದ್ದ ವಿಘ್ನೇಶ್:

ಸಂಜೀವ ಹಾಗೂ ಕನಕ ದಂಪತಿಗಳ ನಾಲ್ವರು ಮಕ್ಕಳಲ್ಲಿ ಎರಡನೇ ಪುತ್ರನಾದ ವಿಘ್ನೇಶ್ ಬೆಂಗಳೂರಿನ ಎಮ್ ಎನ್ ಸಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಮೊದಲ ಲಾಕ್ ಡೌನ್ ಸಮಯದಲ್ಲಿ ಊರಿಗೆ ಮರಳಿದ್ದರು. ಬಳಿಕ ವರ್ಕ್ ಫ್ರಮ್ ಹೋಮ್ ನಡಿಯಲ್ಲಿ ಮನೆಯಲ್ಲೇ ಕೆಲಸ ಮಾಡುತ್ತಿದ್ದು, ಅದರ ಜೊತೆಜೊತೆಗೆ ಕಳೆದ ಒಂದು ವರ್ಷಗಳ ಹಿಂದೆ ಸ್ನೇಹಿತರೊಡಗೂಡಿ ಬ್ರಹ್ಮಾವರ ಸಮೀಪ ಚಪ್ಪಲಿ ಹೋಲ್ ಸೆಲ್ ಶೋರೂಂ ಒಂದನ್ನು ಆರಂಭಿಸಿದ್ದರು. ಸಮಯದಲ್ಲಿ ಉದ್ಯಮಕ್ಕೆ ಬಂಡವಾಳ ಹಾಕುವ ಉದ್ದೇಶದಿಂದ ಮೊಬೈಲ್ ಯಾಪ್ ಮೂಲಕ ಸಾಲಾ ಪಡೆದುಕೊಂಡಿದ್ದರು ಎನ್ನಲಾಗಿದೆ. ಲಾಕ್ ಡೌನ್ ಕಾರಣದಿಂದಾಗಿ ಆರಂಭಿಸಿದ ವ್ಯವಹಾರ ಎಣಿಸಿದಷ್ಟು ಕೈಹಿಡಿಯದ ಹಿನ್ನೆಲೆ ವಿಘ್ನೇಶ್ ಗೆ ಪಡೆದುಕೊಂಡ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮೊಬೈಲ್ ಯಾಪ್ ಮೂಲಕ ಸಾಲ ಕೊಟ್ಟವರು ಕಿರುಕುಳ ನೀಡಿದ್ದರಿಂದ ಅವರು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ಕಾಲ್ ಮಾಡಿದರೆ ಸತ್ತು ಹೋದ ಅನ್ನಿ!:

ಆತ್ಮಹತ್ಯೆಗೂ ಮೊದಲೇ ವಿಘ್ನೆಶ್ ಡೆತ್ ನೋಟ್ ಬರೆದಿದ್ದಾರೆ. “ನನ್ನ ಸಾವಿಗೆ ಕಾರಣ ನಾನು ಮಾಡಿಕೊಂಡಿರುವ ಸಾಲ. ಮೊಬೈಲ್ ಆಪ್ ನಲ್ಲಿ ಮಾಡಿಕೊಂಡ ಸಾಲ ನನಗೆ ತೀರಿಸಲು ಆಗುತ್ತಿಲ್ಲ. ಆದ್ದರಿಂದ ನಾನು ಸೂಸೈಡ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾಲ ಇದೆ ಕಟ್ಟಿ ಎಂದು ಯಾರಾದರೂ ಕರೆ ಮಾಡಿದರೆ ಅವನು ನಮಗೆ ಗೊತ್ತಿಲ್ಲ ಅಥವಾ ಸತ್ತು ಹೋದ ಎಂದು ಹೇಳಿ ಬಿಡಿ. ಎಲ್ಲರಿಗೂ ಮೋಸ ಮಾಡಿ ಹೋಗುತ್ತಿದ್ದೇನೆ. ಕ್ಷಮಿಸಿ ಬಿಡಿ. ಕೆಳಗಡೆ ಆಫೀಸ್ ಕೆಲಸ ಮಾಡುವವನ ನಂಬರ್ ಇದೆ. ಕಾಲ್ ಮಾಡಿ ತಿಳಿಸಿ ಬಿಡಿ. ಶುಕ್ರವಾರ ಸಂಬಳ ಬರುತ್ತದೆಎಂದು ಎಟಿಎಂ ಪಾಸ್ವರ್ಡ್ ಬರೆದಿದ್ದಾರೆ.

ಕನಸುಕಂಗಳ ಹುಡುಗ ವಿಘ್ನೇಶ್:

ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಹಪಾಹಪಿಯಲ್ಲಿದ್ದ ವಿಘ್ನೇಶ್ ಕಾಲೇಜು ದಿನಗಳಿಂದಲೂ ಶ್ರಮಜೀವಿಯಾಗಿದ್ದರು. ಕಾಲೇಜು ರಜಾ ಸಮಯದಲ್ಲಿ ಕೆಲಸಕ್ಕೆ ಹೋಗಿ ಮನೆಯವರಿಗೆ ನೆರವಾಗುತ್ತಿದ್ದರು. ಕೆಲಸದ ಜೊತೆಗೂ ಉದ್ಯಮ ಆರಂಭಿಸಿ ನೆಮ್ಮದಿಯ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಕಂಡಿದ್ದ ಕನಸು ಕಂಗಳ ಹುಡುಗನ ಸಾವು ಅವರ ಕುಟುಂಬಿಕರು ಹಾಗೂ ಆಪ್ತವಲಯದವರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ.

ಸದ್ಯ ಕುಂದಾಪುರ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತದೇಹದ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Related Posts

Leave a Reply

Your email address will not be published.

How Can We Help You?