ಕೊರಗ ಸಮುದಾಯದ ಮನೆಯ ಮೇಲೆ ಪೋಲಿಸ್ ಧಾಳಿ ಖಂಡಿಸಿ ಪ್ರತಿಭಟನಾ ಪ್ರದರ್ಶನ

ಆದಿವಾಸಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದ ಮೇಲೆ ಪೋಲೀಸರು ನಡೆಸಿದ ಮಾರಣಾಂತಿಕ ದೌರ್ಜನ್ಯವನ್ನು ಖಂಡಿಸಿ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ,ದಲಿತ ಹಕ್ಕುಗಳ ಸಮಿತಿ ಹಾಗೂ DYFI ಜಂಟಿ ನೇತ್ರತ್ವದಲ್ಲಿ ಮಂಗಳೂರು ನಗರದಲ್ಲಿಂದು (30-12-2021) ಪ್ರತಿಭಟನಾ ಪ್ರದರ್ಶನವನ್ನು ನಡೆಸಲಾಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಪೋಲೀಸರ ದೌರ್ಜನ್ಯದ ವಿರುದ್ದ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು. ಬಳಿಕ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರಾದ ಡಾ.ಕ್ರಷ್ಣಪ್ಪ ಕೊಂಚಾಡಿಯವರು, ಶತಶತಮಾನಗಳಿಂದ ಶೋಷಣೆಗೆ ಒಳಗಾದ ಕೆಳವರ್ಗದ ಜನತೆಯ ಉತ್ತಮ ಬದುಕಿಗಾಗಿ ಎಳ್ಳಷ್ಟೂ ಗಮನ ನೀಡದ ಸರಕಾರಗಳು ನಿರಂತರವಾಗಿ ದೌರ್ಜನ್ಯ ಎಸಗುತ್ತಾ ಬಂದಿದೆ. ತುಳಿತಕ್ಕೊಳಗಾದ ಜನತೆಯ ಮುಖದಲ್ಲಿ ಕನಿಷ್ಟ ಮಂದಹಾಸ ಬೀರಿದರೂ ಅದನ್ನೂ ನೋಡಲು ಸಾಧ್ಯವಾಗದ ಆಳುವ ವರ್ಗದ ಮನೋಸ್ಥಿತಿ ನಿಜಕ್ಕೂ ಅಸಹ್ಯವೆನಿಸುತ್ತಿದೆ. ಅದರ ಭಾಗವಾಗಿಯೇ ಕೊರಗ ಸಮುದಾಯದ ಮನೆಯಲ್ಲಿ ಮೆಹಂದಿ ಕಾರ್ಯಕ್ರಮದ ಮೇಲೆ ಪೋಲೀಸರು ಅಮಾನವೀಯ ಧಾಳಿ ನಡೆಸಿದ್ದು,ಈಗ ಪ್ರಕರಣವನ್ನು ಮುಚ್ವಿ ಹಾಕಲು ಪೋಲೀಸರ ಅಮಾನತು ಎಂಬ ನಾಟಕವಾಡಿದ ಸರಕಾರದ ಕ್ರಮ ತೀರಾ ನಾಚಿಕೆಗೇಡು ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

DYFI ಮಾಜಿ ನಾಯಕರಾದ ಸುನಿಲ್ ಕುಮಾರ್ ಬಜಾಲ್ ರವರು ಕೊರಗ ಸಮುದಾಯದ ಮೇಲೆ ನಡೆದ ಧಾಳಿಯನ್ನು ತೀವ್ರವಾಗಿ ಖಂಡಿಸುತ್ತಾ,ಈ ಘಟನೆ ಇಡೀ ರಾಜ್ಯದಲ್ಲಿ ಸುದ್ದಿಯಾಗಿದ್ದರೂ,ಹಿಂದೂ ನಾವೆಲ್ಲ ಒಂದು ಎಂದು ಬೊಗಳೆ ಬಿಡುವ ಬಿಜೆಪಿ ಸಂಘ ಪರಿವಾರ ಮಾತ್ರ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಸದೆ ಇರುವುದು ಅವರ ಗೋಸುಂಬೆತನ ಬಟ್ಟಬಯಲಾಗಿದೆ.ಕೆಳವರ್ಗದ ಜನತೆಯ ಮುಖದಲ್ಲಿ ನಗು ಮೂಡಿದಾಗ ಇಡೀ ಸಮಾಜವೇ ಅವರ ಬೆನ್ನಿಗೆ ನಿಲ್ಲಬೇಕೇ ಹೊರತು ಮೇಲ್ವರ್ಗದ,ಶ್ರೀಮಂತರ ಸಂತೋಷದಲ್ಲಿ ಪಾಲ್ಗೊಂಡರೆ ಸಮಾಜ ಸರ್ವನಾಶಗೊಳ್ಳುವುದು ಖಂಡಿತ.ಘಟನೆಗೆ ಸಂಬಂಧಪಟ್ಟ ಪೋಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

DYFI ದ.ಕ.ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಮಾತನಾಡುತ್ತಾ,ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಕಾಲಬುಡದಲ್ಲೇ ಇಂತಹ ಆಘಾತಕಾರಿ ಘಟನೆ ನಡೆದರೂ ಯಾವುದೇ ಕಠಿಣ ಕ್ರಮ ಕೈಗೊಂಡಿಲ್ಲ.ಬದಲಾಗಿ ಅನ್ಯಾಯಕ್ಕೊಳಗಾದ ಕುಟುಂಬದ ಮದುಮಗ ಸೇರಿ 7 ಮಂದಿಯ ಮೇಲೆಯೇ FIR ದಾಖಲಿಸಿರುವುದು ಎಷ್ಟು ಸರಿ..? ಎಂದು ಪ್ರಶ್ನಿಸಿದರು

ನಿವ್ರತ್ತ ಪ್ರಾಧ್ಯಾಪಕರಾದ ಪಟ್ಟಾಭಿರಾಮ ಸೋಮಯಾಜಿಯವರು ಹೋರಾಟವನ್ನು ಬೆಂಬಲಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಸಮಿತಿಯು ಜಿಲ್ಲಾಧ್ಯಕ್ಷರಾದ ತಿಮ್ಮಯ್ಯ ಕೊಂಚಾಡಿ,ಕೊರಗ ಸಂಘಟನೆಗಳ ಒಕ್ಕೂಟದ ನಾಯಕರಾದ ಅಣ್ಣಿ,ಜನವಾದಿ ಮಹಿಳಾ ಸಂಘಟನೆಯ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಸಾಮಾಜಿಕ ಚಿಂತಕರಾದ ಅಸುಂತ ಡಿಸೋಜ,DYFI ಜಿಲ್ಲಾ ನಾಯಕರಾದ ಮನೋಜ್ ವಾಮಂಜೂರು, ಮಹಾಬಲ ದೆಪ್ಪಲಿಮಾರ್,ಬಶೀರ್ ಪಂಜಿಮೊಗರು,CITU ನಾಯಕರಾದ ದಿನೇಶ್ ಶೆಟ್ಟಿ, ಉಮೇಶ್ ಶಕ್ತಿನಗರ, ಮನೋಜ್ ಉರ್ವಾಸ್ಟೋರ್, ಲೋಕೇಶ್ ಎಂ,ಚಂದ್ರಹಾಸ ಜೆ, ಮಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್, ನಾಗೇಶ್ ಕೋಟ್ಯಾನ್, ಸಮುದಾಯ ಸಂಘಟನೆಯ ಮುಖಂಡರಾದ ವಾಸುದೇವ ಉಚ್ಚಿಲ್,ಯುವ ವಕೀಲರಾದ ಸುನಂದಾ ಕೊಂಚಾಡಿ ಮುಂತಾದವರು ಉಪಸ್ಥಿತರಿದ್ದರು.

ಹೋರಾಟದ ನೇತ್ರತ್ವವನ್ನು ದಲಿತ ಹಕ್ಕುಗಳ ಸಮಿತಿಯ ನಾಯಕರಾದ ಯೋಗೀಶ್ ಜಪ್ಪಿನಮೊಗರು,ಕ್ರಷ್ಣ ತಣ್ಷೀರುಬಾವಿ,ರಘುವೀರ್, ರಾಧಾಕ್ರಷ್ಣ,ಸುರೇಶ್, ಚಂದ್ರಶೇಖರ್,ಪ್ರಶಾಂತ್ ಎಂ.ಬಿ,ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮುಖಂಡರಾದ ಶಶಿಕಲಾ, ಮೀನಾ,,DYFI ಮಂಗಳೂರು ನಗರ ಮುಖಂಡರಾದ ನವೀನ್ ಕೊಂಚಾಡಿ, ನೌಷಾದ್,ಹನೀಫ್ ಜೆ,ರಫೀಕ್ ಬೆಂಗರೆ,ಜಗದೀಶ್ ಬಜಾಲ್,ಪ್ರವೀಣ್ ಬಜಾಲ್ ಮುಂತಾದವರು ವಹಿಸಿದ್ದರು.

Related Posts

Leave a Reply

Your email address will not be published. Required fields are marked *

How Can We Help You?