ಅಂತರ್ ಕಾಲೇಜು ಮಟ್ಟದ ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್ : ಪ್ರಶಸ್ತಿ ಮುಡಿಗೇರಿಸಿಕೊಂಡ ಉಜಿರೆ ಎಸ್.ಡಿ.ಎಂ ತಂಡ

ಉಜಿರೆ: 2021-22ನೇ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಹ್ಯಾಂಡ್ ಬಾಲ್ ಟೂರ್ನಮೆಂಟ್ನಲ್ಲಿ ಅತಿಥೇಯ ಉಜಿರೆ ಎಸ.ಡಿ.ಎಂ ತಂಡವು ಪ್ರಶಸ್ತಿ ಮುಡಿಗೇರಿಸಿಕೊಂಡಿತು.

ಉಡುಪಿ ಶ್ರೀ ಅದಮಾರು ಮಠದ ಪೂಜ್ಯ ಶ್ರೀ ವಿಭುದೇಶ ತೀರ್ಥ ಸ್ವಾಮೀಜಿ ಸ್ಮಾರಕ ಪರ್ಯಾಯ ಫಲಕಕ್ಕಾಗಿ ಉಜಿರೆಯ ಎಸ್.ಡಿ.ಎಂ ಕಾಲೇಜಿನ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯಲ್ಲಿ ಜಿ.ಎಫ್.ಜಿ.ಸಿ ವಾಮದಪದವು ತಂಡವನ್ನು 16-8 ಗೋಲ್ಗಳ ಅಂತರದಿಂದ ಮಣಿಸಿದ ಎಸ್.ಡಿ.ಎಂ ಅಂತಿಮವಾಗಿ ಗೆಲುವಿನ ನಗೆ ಬೀರಿತು.

ರೋಚಕ ಫೈನಲ್ ಹಣಾಹಣಿಯ ಮೊದಲಾರ್ಧದಲ್ಲಿ 8-5 ಗೊಲ್ಗಳ ಅಂತರದಿಂದಅಲ್ಪ ಮುನ್ನಡೆ ಕಾಯ್ದುಕೊಂಡಿದ್ದ ಎಸ್.ಡಿ.ಎಂ ತಂಡ ದ್ವಿತೀಯಾರ್ಧದಲ್ಲಿ ಎದುರಾಳಿಯ ಪ್ರತೀ ತಂತ್ರಕ್ಕೂ ಪ್ರತಿತಂತ್ರ ಹೂಡುತ್ತ ಗೋಲ್ಗಳ ಸುರುಮಳೆಗರೆಯಿತು. ಎಸ್.ಡಿ.ಎಂ ನ ಮಯೂರ್ ಬರೋಬ್ಬರಿ 6 ಗೋಲ್ಗಳನ್ನು ಗಳಿಸುವ ಮೂಲಕ ಗಮನ ಸೆಳೆದರು.

ಇದಕ್ಕೂ ಮೊದಲು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಮೂಡಬಿದರೆಯ ಆಳ್ವಾಸ್ ತಂಡದ ವಿರುದ್ಧ 25-24 ಗೋಲ್ಗಳ ಅಂತರದಲ್ಲಿ ರೋಚಕ ಜಯ ದಾಖಲಿಸಿ ಎಸ್.ಡಿ.ಎಂ ಅಂತಿಮ ಘಟ್ಟವನ್ನು ಪ್ರವೇಶಿಸಿದರೆ, ಅತ್ತ ವಾಮದಪದವು ತಂಡವು ಎಸ್.ಡಿ.ಎಂ.ಸಿ.ಬಿ.ಎಂ ತಂಡವನ್ನು ಮಣಿಸುವುದರೊಂದಿಗೆ ಫೈನಲ್‍ಗೆ ಲಗ್ಗೆಯಿಟ್ಟಿತ್ತು. ಬಳಿಕ ಫೈನಲ್‍ನಲ್ಲಿ ಪರಾಭವಗೊಳ್ಳುವುದರೊಂದಿಗೆ ವಾಮದಪದವು ತಂಡವು ರನ್ನರ್ಸ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿತು. ಇನ್ನುಳಿದಂತೆ ಆಳ್ವಾಸ್ ಮೂಡಬಿದರೆ ಹಾಗೂ ಎಸ್.ಡಿ.ಎಂ.ಸಿ.ಬಿ.ಎಂ ತಂಡಗಳು ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದುಕೊಂಡವು.

ಟೂರ್ನಿಯಲ್ಲಿ ಒಟ್ಟು 11 ತಂಡಗಳು ಭಾಗವಹಿಸಿದ್ದು, ಜಿ.ಎಫ್.ಜಿ.ಸಿ ವಾಮದಪದವು ತಂಡದ ಹರೀಶ್ ರೆಡ್ಡಿ ಉತ್ತಮ ಆಟಗಾರ ಪ್ರಶಸ್ತಿ ತಮ್ಮದಾಗಿಸಿಕೊಂಡರೆ, ಎಸ್.ಡಿ.ಎಂ ನ ಭೀಮಣ್ಣ  ಉತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಭಾಜನರಾದರು.

Related Posts

Leave a Reply

Your email address will not be published. Required fields are marked *

How Can We Help You?