ಕೊರಗಜ್ಜನ ದೈವವನ್ನು ಹೋಲುವ ವೇಷಭೂಷಣ ಧರಿಸಿ ವಂಚನೆ

ದುರ್ಬಲ ಮನೋಸ್ಥಿತಿಯ ಬಡ ಮುಗ್ಧ ದಲಿತ ವ್ಯಕ್ತಿಗೆ ಕೊರಗಜ್ಜನ ವೇಷ ಹಾಕಿಸಿ ಕುಣಿಸಿ  ಕೊರಗಜ್ಜ ಮೈಮೇಲೆ ಬಂದು ಕಷ್ಟ ನಿವಾರಿಸುವ ಅಭಯ ಹಸ್ತ ನೀಡುತ್ತಾನೆಂಬುದಾಗಿ ನಂಬಿಸಿ  ವಂಚಿಸುತ್ತಾ ಹರಕೆ, ಪರಿಹಾರ, ಪ್ರಶ್ನೆ ಇತ್ಯಾದಿ ಹೆಸರಿನಲ್ಲಿ  ಎರಡು ವರ್ಷಗಳಿಂದ ನೊಂದು ಬರುವವರಿಂದ ಹಣ ದೋಚುತ್ತಿರುವ ಮೌಢ್ಯ ಪ್ರಚೋದಿಸುವ  ದಂಧೆಯೊಂದು ಬೆಳ್ತಂಗಡಿ ತಾಲೂಕಿನ ಕುಗ್ರಾಮದಂತಿರುವ ಶಿಶಿಲ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ದ ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕೊಕ್ಕಡ ಸಮೀಪದ ಶಿಶಿಲ ಗ್ರಾಮದ ಕಾರೆಗುಡ್ಡೆ ಎಂಬಲ್ಲಿ ಬಡ ಮುಗ್ಧ ಪರಿಶಿಷ್ಟ ಜಾತಿಯ ಅಮಾಯಕ ವ್ಯಕ್ತಿಯೊಬ್ಬರಿಗೆ ಕೊರಗಜ್ಜ ದೈವವನ್ನು  ಹೋಲುವ ವೇಷಭೂಷಣ ಹಾಕಿಸಿ ಹೂಮಾಲೆಯಿಂದ ಮೈಯನ್ನೆಲ್ಲಾ ಶೃಂಗರಿಸಿ ಮುಗ್ಧ ಜನರಿಂದ ಹಣ ವಸೂಲಿ ಮಾಡುತ್ತಿರುವ  ಕೃತ್ಯವೊಂದು ಬೆಳಕಿಗೆ ಬಂದಿದೆ.

ಸ್ಥಳೀಯ ಗ್ರಾಮಪಂಚಾಯತ್ ಅಧ್ಯಕ್ಷನ ಸಾರಥ್ಯದಲ್ಲಿ ನಿರಾತಂಕವಾಗಿ ಸುಮಾರು ಎರಡು ವರ್ಷಗಳಿಂದ ದಿನ ನಿತ್ಯ ನಡೆಯುತ್ತಿರುವ ಸಂಶಯಾಸ್ಪದ ಪ್ರಹಸನದಲ್ಲಿ ದಲಿತ ವ್ಯಕ್ತಿಗೆ ಕೊರಗಜ್ಜ  ಆವಾಹನೆಯಾಗುವುದಾಗಿ ನಂಬಿಸಿ ದಂಧೆ ನಡೆಸುತ್ತಿರುವುದು ಸ್ಥಳೀಯರ ಸಂಶಯಕ್ಕೆ ಕಾರಣವಾಗಿದೆ. ಕೊರಗಜ್ಜನ ಮಾದರಿಯ  ವೇಷಭೂಷಣ ಧರಿಸಿದ ದಲಿತ ವ್ಯಕ್ತಿಗೆ  ದೇಹವಿಡೀ ಹೂಮಾಲೆ ಆವರಿಸಿಕೊಂಡಿದ್ದು  ಕಪ್ಪು ಪಂಚೆ ಧರಿಸಿ  ಎರಡೂ  ಕೈಗಳಿಗೂ  ಎರಡು ಊರುಗೊಲು ಕೊಟ್ಟು ಕುಣಿಸುತ್ತಾ ಇನ್ನೊಂದೆಡೆ  ಪುಟಾಣಿ ಹೆಣ್ಣು ಮಕ್ಕಳನ್ನೂ ಕುಣಿಸಲು  ಬಳಸಿಕೊಳ್ಳುತ್ತಿರುವುದು  ಸ್ಥಳೀಯವಾಗಿ ತೀವ್ರ  ಚರ್ಚೆಗೆ ಗ್ರಾಸವಾಗಿದೆ.

ಇಲ್ಲಿ ಕೊರಗಜ್ಜನ ವೇಷ ಭೂಷಣ ಹಾಕಿಕೊಳ್ಳುವ  ವ್ಯಕ್ತಿ ಪರಿಶಿಷ್ಟ ಜಾತಿಗೆ ಸೇರಿದ್ದರೂ ಭೂತ ಕಟ್ಟುವ ಸಮುದಾಯಕ್ಕೆ ಸೇರಿದವರಲ್ಲ ಎಂಬ ಸಂಗತಿ ಇನ್ನಷ್ಟು ಸಂಶಯಕ್ಕೆಡೆ ಮಾಡಿದೆ.

ಕೊರಗಜ್ಜ ವೇಷಧಾರಿ ಜೊತೆ ಹಿರಿಯ ಹೆಂಗಸರನ್ನೂ ಮಕ್ಕಳನ್ನೂ ಕುಣಿಸಲಾಗುತ್ತಿದೆ.

ಗ್ರಾಮಪಂಚಾಯತ್ ಅಧ್ಯಕ್ಷನ ನೇತೃತ್ವದ ಸಮಿತಿಯೊಂದನ್ನು ರಚಿಸಿಕೊಳ್ಳಲಾಗಿದ್ದು ಸಮಿತಿಯಲ್ಲಿ ದಲಿತೇತರರೇ ಪ್ರಮುಖ ಪದಾಧಿಕಾರದಲ್ಲಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಮಾಡಿಕೊಳ್ಳುವ ಕಾರಣ ಪ್ರತಿ ದಿನ ದೂರದ ಊರುಗಳಿಂದ ನೊಂದು ಬಂದವರಿಂದ ಟೋಕನ್ ಮಾಡಿಸಿಕೊಂಡು ಸರದಿಯಲ್ಲಿ ನಿಲ್ಲಿಸಿ ಪ್ರಶ್ನೆ ಕೇಳಿಸಿ  ಮಾನಸಿಕವಾಗಿ ನೊಂದವರಲ್ಲಿ  ಇನ್ನಷ್ಟು ಭಯ ಹುಟ್ಟಿಸಿ ಹರಕೆ ಬೇಡಿಕೆಯಿಟ್ಟು  ಪರಿಹಾರದ ಹೆಸರಲ್ಲಿ ಶೋಷಣೆ ಮಾಡುತ್ತಿದ್ದು ಗ್ರಾಮದ ಪ್ರಥಮ ಪ್ರಜೆಯೇ 

ಈ ಚಟುವಟಿಕೆಯ ನೇತೃತ್ವವಹಿಸಿಕೊಂಡು ಅವಿದ್ಯಾವಂತ  ದಲಿತ ವ್ಯಕ್ತಿಯ ಅಮಾಯಕತೆಯನ್ನು  ಬಂಡವಾಳ ಮಾಡಿಕೊಂಡು  ಕಷ್ಟದಲ್ಲಿ ಪ್ರಶ್ನೆ ಕೇಳಲು  ಬರುವ  ಜನರ ಮೌಢ್ಯವನ್ನೇ ದಂಧೆಯಾಗಿ ಪರಿವರ್ತಿಸಿಕೊಂಡಿರುವುದು 

 ಜಿಲ್ಲಾಡಳಿತ ಗಮನಿಸಬೇಕಾದ ವಿಚಾರವಾಗಿದೆ ಎಂಬ ಅಭಿಪ್ರಾಯಗಳು ಗ್ರಾಮಸ್ಥರಿಂದ ಕೇಳಿ ಬರುತ್ತಿದೆ.

Related Posts

Leave a Reply

Your email address will not be published.

How Can We Help You?