ಆರೋಪಿಗಳಿಂದಲೇ 50 ಲಕ್ಷ ರೂ. ಸುಲಿದ ಪೊಲೀಸ್: ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣವರ್ ಸೇರಿದಂತೆ ಹಲವರ ವಿರುದ್ಧ ದೂರು

 
ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಸೇರಿದಂತೆ ಇತರ ಹಲವು ಪೊಲೀಸ್ ಅಧಿಕಾರಿಗಳ ಮೇಲೆ ಸುಲಿಗೆ ಆರೋಪ ಕೇಳಿ ಬಂದಿದೆ. ದೂರು ಕೂಡ ದಾಖಲಾಗಿದೆ. ಈ ಕುರಿತು ‘ದಿ ಫೈಲ್.ಇನ್’ ವಿಸ್ತೃತವಾಗಿ ವರದಿ ಮಾಡಿದೆ.

“ಕ್ರಷರ್ ಉದ್ಯಮಿ ಸೇರಿದಂತೆ ಹಲವರಿಂದ 3.96 ಕೋಟಿ ರೂ. ವಂಚನೆಯಾಗಿದೆ ಎಂದು ಸಲ್ಲಿಕೆಯಾಗಿದ್ದ ದೂರು ಆಧರಿಸಿ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸ್ ವರಿಷ್ಠಾಧಿಕಾರಿಗಳೇ ಆರೋಪಿಗಳಿಂದ 50 ಲಕ್ಷ ರೂ. ದೂರುದಾರ ಮಂಜುನಾಥ್ ಎಂಬುವರಿಂದ ವಸೂಲಿ ಮಾಡುವ ಮೂಲಕ ಅನ್ಯಾಯವೆಸಗಿದ್ದಾರೆಂಬ ಗುರುತರ ಆರೋಪಕ್ಕೆ ಗುರಿಯಾಗಿದ್ದಾರೆ” ಎಂಬ ವರದಿ ಪ್ರಕಟಿಸಿದೆ.

“ಸುಳ್ಳು ಪ್ರಕರಣಗಳನ್ನು ದಾಖಲಿಸುವುದಾಗಿ ಬೆದರಿಸುವುದು, ದೂರುದಾರರ ಪ್ರತಿಸ್ಪರ್ಧಿ ವಿರೋಧಿಗಳ ಜತೆ ಶಾಮೀಲಾಗುವುದು, ಭ್ರಷ್ಟಾಚಾರ ಮತ್ತು ಲಂಚಕ್ಕೆ ಬೇಡಿಕೆ ಇಡುವುದು, ಅಕ್ರಮವಾಗಿ ಬಂಧನದಲ್ಲಿರಿಸುವುದು ಸೇರಿದಂತೆ ಇನ್ನಿತರೆ ಚಟುವಟಿಕೆಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ರಾಜ್ಯ ಪೊಲೀಸ್ ದೂರು ಪ್ರಾಧಿಕಾರವು ವಾರ್ಷಿಕ ವರದಿ ಸಿದ್ಧಪಡಿಸಿದೆ. ಈ ಬೆನ್ನಲ್ಲೇ ರವಿ ಡಿ.ಚನ್ನಣ್ಣನವರ್ ಸೇರಿ ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ನೀಡಿರುವ ದೂರು ಮುನ್ನೆಲೆಗೆ ಬಂದಿದೆ” ಎಂದು ದಿ ಫೈಲ್ ವರದಿ ಹೇಳಿದೆ.
 
2021ರ ಸೆಪ್ಟೆಂಬರ್ 28ರಂದು ಸಲ್ಲಿಕೆಯಾದ ದೂರಿನನ್ವಯ ಕ್ರಮ ಜರುಗಿಸಲು ಒಳಾಡಳಿತ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗೆ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್  ಸೂಚಿಸಿದ್ದರು. ಹಣ ವರ್ಗಾವಣೆ ಸಂಬಂಧಿಸಿಂತೆ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರು ನಡೆಸಿರುವ ಸಂಭಾಷಣೆಯ ಆಡಿಯೊ ಕೂಡ ಇದೆ ಎಂದು ದೂರುದಾರರು ತಿಳಿಸಿದ್ದಾರೆ. ದೂರು ಸಲ್ಲಿಕೆಯಾಗಿ ಮೂರು ತಿಂಗಳಾದರೂ ಕ್ರಮ ಜರುಗಿಸಿಲ್ಲ ಎನ್ನಲಾಗಿದೆ.

“ನನಗೀಗ ಯಾವುದೇ ದಾರಿ ಕಾಣಿಸುತ್ತಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ. ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ. ನನಗೆ ಹೆಣ್ಣು ಮಗಳಿದ್ದಾಳೆ. ನಾನು ನನ್ನ ಜವಾಬ್ದಾರಿಯಿಂದ ಪಲಾಯನ ಮಾಡಲು ಮನಸ್ಸು ಒಪ್ಪುತ್ತಿಲ್ಲ. ನಾನು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಧ್ವನಿ ಮುದ್ರಣ, ವಾಟ್ಸಾಪ್ ಸಂದೇಶಗಳು ನನ್ನ ಬಳಿ ಇವೆ. ತನಿಖೆಯ ಸಂದರ್ಭದಲ್ಲಿ ಇವೆಲ್ಲವನ್ನು ಮುಂದಿಡುತ್ತೇನೆ. ವಿಶೇಷ ತನಿಖಾ ತಂಡ ಅಥವಾ ಸಿಬಿಐ ಪ್ರಕರಣವನ್ನು ತನಿಖೆ ಮಾಡಬೇಕು” ಎಂದು ದೂರಿನಲ್ಲಿ ಮಂಜುನಾಥ್ ಮನವಿ ಮಾಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲು ಹಣ ಬೇಡಿಕೆಯನ್ನು ಪೊಲೀಸ್ ಅಧಿಕಾರಿಗಳು ಇರಿಸಿದ್ದರು. ದುಡ್ಡು ವಸೂಲಿಯಾದ ಬಳಿಕ ಎಫ್ಆರ್ಐ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ನನ್ನ ಮನೆ ಬ್ಯಾಂಕ್ನಿಂದ ಹರಾಜಿಗೆ ಬಂದಿದ್ದರೂ ಪೊಲೀಸ್ ಅಧಿಕಾರಿಗಳಿಗೆ ಹಣ ನೀಡಿದ್ದೇನೆ. ರವಿ ಡಿ.ಚೆನ್ನಣ್ಣನವರ್‍ ಗೆ 25 ಲಕ್ಷ ರೂ., ಡಿವೈಎಸ್ಪಿಗೆ 15 ಲಕ್ಷ ರೂ., ಡಿವೈಎಸ್ಪಿ ಕಚೇರಿಯ ಮತ್ತೊಬ್ಬ ಅಧಿಕಾರಿಗೆ 10 ಲಕ್ಷ ರೂ. ನೀಡಲಾಗಿದೆ ಎಂದು ಆರೋಪಿ ಅಶೋಕ್ ಎಂಬಾತ ಕಂದಪ್ಪ ಮತ್ತು ಸಂಪತ್ ಎಂಬವರ ಮುಂದೆ ಬಾಯ್ಬಿಟ್ಟಿದ್ದಾರೆ’ ಎಂದು ದೂರುದಾರ ಮಂಜುನಾಥ್ ಅವರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗುವ ಮುನ್ನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ 5 ಲಕ್ಷ ರೂ. ಬೇಡಿಕೆ ಇರಿಸಿದ್ದರು. ಹೀಗಾಗಿ ನಾಲ್ಕು ಲಕ್ಷ ರೂ. ಇನ್ಸ್ಪೆಕ್ಟರ್ ಶ್ರೀನಿವಾಸ್ ಎಂಬುವರ ಸೂಚನೆ ಮೇರೆಗೆ ಮತ್ತೊಬ್ಬ ಪೊಲೀಸ್ ಅಧಿಕಾರಿ ಶುಭಾ/ಅನಿತಾ ಎಂಬುವರಿಗೆ ತಲುಪಿಸಲಾಗಿದೆ. ಹೀಗೆ ವಿವಿಧ ಅಧಿಕಾರಿಗಳಿಗೆ ಮುಂದೆಯೂ ನೀಡಲಾದ ಹಣದ ವಿವರಗಳನ್ನು ದೂರುದಾರರು ಹಂಚಿಕೊಂಡಿದ್ದಾರೆ.

ನಂತರದಲ್ಲಿ 12 ಆರೋಪಿಗಳ ಪೈಕಿ ಆರು ಜನರನ್ನು ಬಂಧಿಸಲಾಗಿತ್ತು. ಇಷ್ಟೆಲ್ಲ ಆದ ಮೇಲೆ ಆರೋಪಿ ಅಶೋಕ್ ಎಂಬುವರೊಂದಿಗೆ ರವಿ ಡಿ.ಚೆನ್ನಣ್ಣನ್ನವರ್‍ ಹಾಗೂ ಡಿವೈಎಸ್ಪಿ ಮಹದೇವಪ್ಪ ಶಾಮೀಲಾಗಿ ತನಿಖೆಯಿಂದ ಆರೋಪಿ ಕೈ ತಪ್ಪಿಸಿಕೊಳ್ಳಲು ನೆರವಾಗಿದ್ದಾರೆಂದು ಮಂಜುನಾಥ್ ಅವರು ದೂರಿದ್ದಾರೆ. ವಂಚನೆ ಪ್ರಕರಣದ ವಿವರಗಳನ್ನು ದಿ ಫೈಲ್ ವರದಿ ಮಾಡಿದೆ.

Related Posts

Leave a Reply

Your email address will not be published.

How Can We Help You?