ಭಾರತದಲ್ಲಿ ಕೊರೊನಾ ನಡುವೆ ನಿರುದ್ಯೋಗದ ಭೀಕರತೆ; ಗಗನಕ್ಕೇರಿದೆ ನಿರುದ್ಯೋಗ ದರ!

ಕಳೆದ ಕೆಲವು ತಿಂಗಳುಗಳಿಂದ ದೇಶದ ಆರ್ಥಿಕ ಬೆಳವಣಿಗೆ ಪ್ರಗತಿ ಸಾಧಿಸಿದೆ ಎಂದು ಭಾರತ ಸರ್ಕಾರ ಮತ್ತು ಮುಖ್ಯವಾಹಿನಿಯ ಮಾಧ್ಯಮಗಳು ಹೇಳುತ್ತಿವೆ. ಇದೇ ವೇಳೆ, ಅವುಗಳು ಉದ್ಯೋಗ ಮಾರುಕಟ್ಟೆಯ ಬಗ್ಗೆ ಬಹಳ ಕಡಿಮೆ ಗಮನವನ್ನು ನೀಡಿವೆ. ಇತ್ತೀಚಿನ ತಿಂಗಳುಗಳಲ್ಲಿ ಭಾರತದ ನಿರುದ್ಯೋಗ ದರವು ಗಗನಕ್ಕೇರಿದೆ. 2021ರ ಡಿಸೆಂಬರ್‌ನಲ್ಲಿ ದೇಶದ ನಿರುದ್ಯೋಗ ದರವು 7.91%ಕ್ಕೆ ಏರಿಕೆಯಾಗಿದೆ ಇದು 2018-2019ರಲ್ಲಿ 6.3% ಮತ್ತು 2017-18ರಲ್ಲಿ 4.7% ಇತ್ತು,

ನಿರುದ್ಯೋಗ ದರದಲ್ಲಿ ಏರಿಕೆ ಕಾಣಲು ಆರಂಭವಾದಾಗ – ಈ ವಿದ್ಯಮಾನವು ಕೋವಿಡ್‌ನಿಂದ ಎದುರಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದು ಕೇವಲ ಕೋವಿಡ್‌ನಿಂದಲ್ಲ ಎಂಬುದು ನಂತರದಲ್ಲಿ ಸ್ಪಷ್ಟವಾಗಿದೆ. ನಗರ ಪ್ರದೇಶಗಳಲ್ಲಿ 2021ರ ಜನವರಿಯಲ್ಲಿ 8.09% ನಿರುದ್ಯೋಗ ದರವು ಡಿಸೆಂಬರ್ 2021ರ ವೇಳೆಗೆ 9.30%ಗೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ, ಇದು ಶೇಕಡಾ 5.81%ನಿಂದ 7.28%ಗೆ ಏರಿದೆ.

ನಿರುದ್ಯೋಗವು ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ ಹೆಚ್ಚಾಗಿದೆ ಎಂಬುದು ಸ್ಪಷ್ಟವಾಗಿದೆ. 2019-20 ಮತ್ತು ಡಿಸೆಂಬರ್ 2021ರ ನಡುವೆ ಉತ್ಪಾದನಾ ವಲಯದಲ್ಲಿ 9.8 ಮಿಲಿಯನ್ ಉದ್ಯೋಗಗಳು ನಷ್ಟವಾಗಿವೆ, ಇದಕ್ಕೆ ವ್ಯತಿರಿಕ್ತವಾಗಿ, ಕೃಷಿ ಕ್ಷೇತ್ರದಲ್ಲಿನ ಉದ್ಯೋಗಗಳು 7.4 ಮಿಲಿಯನ್‌ಗಳಷ್ಟು ಏರಿಕೆಯಾಗಿವೆ. ನಗರ ಪ್ರದೇಶಗಳಿಗೆ ಉದ್ಯೋಗ ಹರಸಿ ಬಂದಿದ್ದ ಜನರು ಮತ್ತೆ ತಮ್ಮ ಹಳ್ಳಿಗಳತ್ತ ಮುಖ ಮಾಡಿದ್ದಾರೆ.

ಉದ್ಯೋಗಗಳ ಗುಣಮಟ್ಟವೂ ಅಪಾಯದಲ್ಲಿದೆ. ಸಂಬಳ ಪಡೆಯುವ ಜನರ ಶೇಕಡಾವಾರು ಪ್ರಮಾಣವು 2019-2020 ರಲ್ಲಿ ಶೇಕಡಾ 21.2% ಇತ್ತು. ಇದು ಈಗ (2021 ಡಿಸೆಂಬರ್) ಶೇಕಡಾ 19% ಗೆ ಕುಸಿದಿದೆ, ಅಂದರೆ 9.5 ಮಿಲಿಯನ್ ಜನರು ಸಂಬಳವನ್ನು ಕಳೆದುಕೊಂಡಿದ್ದಾರೆ. ಇದರರ್ಥ ಅಷ್ಟು ಜನರು ನಿರುದ್ಯೋಗಿಗಳಾಗಿದ್ದಾರೆ ಅಥವಾ ಅನೌಪಚಾರಿಕ ವಲಯದ ಭಾಗವಾಗಿದ್ದಾರೆ.

ಆದರೆ, ಅನೌಪಚಾರಿಕ ವಲಯವು ಎಷ್ಟು ಕುಗ್ಗಿದೆ ಎಂದರೆ – ಉದ್ಯೋಗಿ ಸಂಖ್ಯೆಯು 408.9 ಮಿಲಿಯನ್‌ನಿಂದ 406 ಮಿಲಿಯನ್‌ಗೆ ಕುಸಿದಿದೆ. ಅದೇ ಸಮಯದಲ್ಲಿ ಸುಮಾರು 10 ಮಿಲಿಯನ್ ಯುವ ಭಾರತೀಯರು ಶಿಕ್ಷಣ ಮುಗಿಸಿ ಉದ್ಯೋಗ ಹರಸಿ ಬರುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯಾತರು ಉದ್ಯೋಗ ದೊರೆಯದೇ ನಿರುದ್ಯೋಗಿಗಳ ಗುಂಪಿಗೆ ಸೇರುತ್ತಿದ್ದಾರೆ.

ಭಾರತದ ಕಾರ್ಮಿಕ ಬಲದ ಭಾಗವಹಿಸುವಿಕೆ (LPR)ಯು ಪ್ರಗತಿಶೀಲ ದೇಶಗಳಿಗೆ ಹೋಲಿಸಿದರೆ ಕಳಪೆ ಮಟ್ಟದಲ್ಲಿದೆ. ವಿಶ್ವ ಬ್ಯಾಂಕ್ ಪ್ರಕಾರ, ಭಾರತದ ಎಲ್‌ಪಿಆರ್‌ ದರವು 2020ರಲ್ಲಿ 46% ಇದೆ (ಅಂದಿನಿಂದ ಇದು ಸುಧಾರಿಸಿಲ್ಲ), ಬ್ರೆಜಿಲ್ 59%, ಚಿಲಿ 57%, ಚೀನಾ 67%, ಇಥಿಯೋಪಿಯಾ 76%, ಘಾನಾ 66%, ಇಂಡೋನೇಷ್ಯಾ 66% ಮತ್ತು ಮಲೇಷ್ಯಾ 64% ಇದೆ.

CMIE ಡೇಟಾ ಪ್ರಕಾರ, ಭಾರತೀಯ ರಾಜ್ಯಗಳಲ್ಲಿನ ನಿರುದ್ಯೋಗ ದರದಲ್ಲಿ ವ್ಯತ್ಯಾಸಗಳಿವೆ. ಡಿಸೆಂಬರ್ 2021 ರಲ್ಲಿ ನಿರುದ್ಯೋಗ ದರವು ಹರಿಯಾಣದಲ್ಲಿ (34.1%) ಅತ್ಯಧಿಕವಾಗಿದೆ, ನಂತರ ಸ್ಥಾನದಲ್ಲಿ ರಾಜಸ್ಥಾನ (27.1%) ಇದೆ, ಜಾರ್ಖಂಡ್ (17.3%), ಬಿಹಾರ (16%), ಜಮ್ಮು ಮತ್ತು ಕಾಶ್ಮೀರ (15%) ಇದೆ. ನಿರುದ್ಯೋಗ ದರದ ಪ್ರಮಾಣವು ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತಿ ಕಡಿಮೆ ಇದ್ದು, 1,4% ಇದೆ.

ವಯೋಮಾನದ ಆಧಾರದಲ್ಲಿ ನೋಡುವುದಾದರೆ, 2019-20 ಕ್ಕೆ ಹೋಲಿಸಿದರೆ 2020-21ರ ಅವಧಿಯಲ್ಲಿ 15-19 ವರ್ಷ ವಯಸ್ಸಿನ ದುಡಿಯುವವರ ಸಂಖ್ಯೆ 42.4% ಕಡಿಮೆಯಾಗಿದೆ. 20-29 ವರ್ಷ ವಯೋಮಾನದ ಉದ್ಯೋಗಿಗಳ ಸಂಖ್ಯೆ ಸರಾಸರಿ 15.6% ರಷ್ಟು ಕುಸಿದಿದೆ.

ವಾಸ್ತವವಾಗಿ, NSSO ಪ್ರಕಾರ, 2019 ರಲ್ಲಿ ಭಾರತವು ಕಳೆದ 45 ವರ್ಷಗಳಲ್ಲಿಯೇ ಅತಿ ಹೆಚ್ಚು ನಿರುದ್ಯೋಗ ದರವನ್ನು ದಾಖಲಿಸಿತ್ತು, ಈ ದರದಲ್ಲಿ ಭಾರತದ ಯುವಜನರ ಸಂಖ್ಯೆಯೇ ಹೆಚ್ಚಾಗಿತ್ತು. 20 ಮತ್ತು 29 ವರ್ಷಗಳ ನಡುವಿನ 37.5% ಯುವಜನರು ನಿರುದ್ಯೋಗಿಗಳಾಗಿದ್ದರು. ಅಂದರೆ, ಈ ವಯಸ್ಸಿನ ಸುಮಾರು 30.8 ಮಿಲಿಯನ್ ಯುವಜನರು ನಿರುದ್ಯೋಗಿಗಳಾಗಿದ್ದಾರೆ, 2017 ರಲ್ಲಿ ಈ ದರವು 17.8 ಮಿಲಿಯನ್‌ ಇತ್ತು. ಆಶ್ಚರ್ಯಕರ ಸಂಗತಿಯೆಂದರೆ, ಜನರು ಹೆಚ್ಚು ವಿದ್ಯಾವಂತರಾದ್ದಾರೆ ಮತ್ತು ಅವರಲ್ಲಿ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದರು – 20-24 ವರ್ಷ ವಯಸ್ಸಿನ 63.4% ರಷ್ಟು ಪದವೀಧರರು ನಿರುದ್ಯೋಗಿಗಳಾಗಿದ್ದರು. ಈ ಸಂಖ್ಯೆಯು ಕಾಲಾನಂತರದಲ್ಲಿ ಹೆಚ್ಚಾಯಿತು.

ಲಿಂಗಕ್ಕೆ ಅನುಗುಣವಾದ ವ್ಯತ್ಯಾಸಗಳು ಸಹ ಮುಖ್ಯವಾಗಿದೆ. ಮಹಿಳಾ ನಿರುದ್ಯೋಗ ದರವು ಪುರುಷರಿಗಿಂತ ಹೆಚ್ಚಾಗಿದೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸರಾಸರಿ ನಿರುದ್ಯೋಗ ದರವು 14.28% ಇದೆ ಮತ್ತು ಪುರುಷರಲ್ಲಿ ಇದು 7.88% ರಷ್ಟಿದೆ. ಇದಲ್ಲದೆ, ನಗರ ಪ್ರದೇಶಗಳಲ್ಲಿ ಕೆಲಸ ಹುಡುಕಲು ಸಿದ್ಧರಿರುವ ಮಹಿಳೆಯರ ಪೈಕಿ 92.1% ರಷ್ಟು ಜನರಿಗೆ ಯಾವುದೇ ಕೆಲಸ ಸಿಗುವುದಿಲ್ಲ. ಗ್ರಾಮೀಣ ಮಹಿಳೆಯರ ಈ ಎಣಿಕೆ 54.8% ರಷ್ಟಿದೆ.

ಮೊದಲಿಗೆ, ಉದ್ಯೋಗ ಪಡೆಯುವ ಮತ್ತು ಸಂಬಳ ಪಡೆಯುವ ಮಹಿಳೆಯರ ಪ್ರಮಾಣವು ಕಡಿಮೆಯಾಗಿದೆ. ಮಾತ್ರವಲ್ಲದೆ, ಅದು ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಇದೆ. ದೇಶದಲ್ಲಿ ಹೆಚ್ಚು ಹೆಚ್ಚು ಮಹಿಳೆಯರು ಶಾಲಾ-ಕಾಲೇಜಿಗೆ ಸೇರುತ್ತಿದ್ದರೂ ಉದ್ಯೋಗ ಪಡೆಯುವ ಮಹಿಳೆಯರ ಸಂಖ್ಯೆ ಕಡಿಮೆಯಾಗುತ್ತಿದೆ.

ಮೊದಲನೆಯದಾಗಿ, ಹೆಚ್ಚಿನ ಮಹಿಳೆಯರು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಈ ಕ್ಷೇತ್ರಕ್ಕೆ ನುಸುಳಿದ ಯಾಂತ್ರೀಕರಣವು ದೇಶದಲ್ಲಿ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆಯ ಮೇಲೆ ಪರಿಣಾಮ ಬೀರಿತು. ಎರಡನೆಯದಾಗಿ, ಭಾರತದ ಉತ್ಪಾದನಾ ವಲಯವು ಶ್ರಮದಾಯಕವಾಗಿಲ್ಲ. ಇದರಿಂದ ಕೃಷಿ ಉದ್ಯೋಗದಿಂದ ಗುಳೆ ಹೋಗಿರುವ ಮಹಿಳೆಯರಿಗೆ ಪರಿಹಾರ (ಉದ್ಯೋಗ) ನೀಡುವುದು ಕಷ್ಟಕರವಾಗಿದೆ.

ಪ್ರಾಥಮಿಕ ಆರೈಕೆದಾರರಾಗಿ ಮಹಿಳೆಯರ ಪಾತ್ರ ಮತ್ತು ಮನೆಕೆಲಸಗಳ ಮಾಲೀಕತ್ವವು ಉದ್ಯೋಗಿಗಳಲ್ಲಿ ಮಹಿಳೆಯರ ಕಡಿಮೆ ಭಾಗವಹಿಸುವಿಕೆಗೆ ಯಾವ ರೀತಿಯಲ್ಲಿ ಕಾರಣವಾಗಿದೆ ಎಂಬುದರ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಸಾಂಸ್ಕೃತಿಕ ರೂಢಿಗಳು ಮತ್ತು ಪಿತೃಪ್ರಭುತ್ವದ ಆಳವಾದ ಬೇರುಗಳು ಭಾರತದಲ್ಲಿ ಮಹಿಳಾ ಕಾರ್ಮಿಕ ಭಾಗವಹಿಸುವಿಕೆಯನ್ನು ಸ್ಪಷ್ಟವಾಗಿ ಕಡಿತಗೊಳಿಸುತ್ತವೆ.

ಭಾರತದಲ್ಲಿ ನಿರುದ್ಯೋಗವು ನಿರ್ಣಾಯಕ ಹಂತವನ್ನು ತಲುಪಿದೆ.ಇದು ಆರ್ಥಿಕ ಚೇತರಿಕೆಯ ಗುಣಮಟ್ಟದ ಮೇಲೆ ಗಂಭೀರವಾದ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ, ಇದೀಗ ಕೊರೊನಾ 3ನೇ ಅಲೆ ಆರಂಭವಾಗುತ್ತಿದ್ದು, ಇದು ಉದ್ಯೋಗ ಮಾರುಕಟ್ಟೆಯ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ ಮತ್ತು ನಿರುದ್ಯೋಗವನ್ನು ಇನ್ನಷ್ಟು ತೀವ್ರವಾದ ಸಮಸ್ಯೆಯನ್ನಾಗಿ ಮಾಡುತ್ತದೆ.

Related Posts

Leave a Reply

Your email address will not be published.

How Can We Help You?