ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಕಾಂಗ್ರೆಸ್ ಟಿಕೆಟ್; ರಂಗೇರುತ್ತಿದೆ ಉತ್ತರ ಪ್ರದೇಶ ಚುನಾವಣೆ.

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ಮತದಾರರನ್ನು ಸೆಳೆಯಲು ವಿವಿಧ ರಾಜಕೀಯ ಪಕ್ಷಗಳು ಒಂದಿಲ್ಲೊಂದು ರೀತಿಯ ಕಸರತ್ತುಗಳು ನಡೆಸುತ್ತಿವೆ.
2017 ರ ಉನ್ನಾವೋ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಾಯಿ ಆಶಾ ಸಿಂಗ್ಗೆ ಅವರಿಗೆ ಉತ್ತರ ಪ್ರದೇಶ ಕಾಂಗ್ರೆಸ್ ಇಂದು ಟಿಕೆಟ್ ನೀಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಅಚ್ಚರಿಯ ಬೆಳವಣಿಗೆಗೆ ಕಾರಣವಾಗಿದೆ.
ಬಿಜೆಪಿ ಮುಷ್ಠಿಯಲ್ಲಿರುವ ಯುಪಿ ಚುನಾವಣಾ ಕಣವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಈ ಹಿಂದೆ ಶೇ.40ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೆ ನೀಡುವುದಾಗಿ ಘೋಷಿಸಿದಂತೆ ಸ್ವತಃ ಕಾಂಗ್ರೆಸ್ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಗಾಂಧಿ ಈ ಬಗ್ಗೆ ಆಶ್ವಾಸನೆ ನೀಡಿದ್ದರು. ಅದರಂತೆ ಇಂದು (ಜನವರಿ.14) ಉತ್ತರ ಪ್ರದೇಶದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ. ಶೇ.40 ಮಹಿಳೆಯರಿಗೆ ಸ್ಥಾನ ನೀಡಲಾಗಿದೆ. ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಹೆಸರು ಸಹ ಪಟ್ಟಿಯಲ್ಲಿದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಮೊದಲ ಪಟ್ಟಿಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿ ಉತ್ತರ ಪ್ರದೇಶ ಜನರಿಗೆ ಸಂದೇಶ ನೀಡಿರುವ ಪ್ರಿಯಾಂಕ ಗಾಂಧಿ, “ನೀವು ಕಿರುಕುಳ ಮತ್ತು ಚಿತ್ರಹಿಂಸೆಗೆ ಬಲಿಯಾಗಿದ್ದರೆ, ಕಾಂಗ್ರೆಸ್ ನಿಮ್ಮನ್ನು ಬೆಂಬಲಿಸುತ್ತದೆಂಬ ಹೊಸ ಸಂದೇಶವನ್ನು ನಮ್ಮ ಈ ಪಟ್ಟಿ ರವಾನಿಸುತ್ತದೆ” ಎಂದು ತಿಳಿಸಿದ್ದಾರೆ.
ಈ ಹಿಂದೆ ಮಹಿಳಾ ಕೇಂದ್ರಿತ “ಲಡ್ಕಿ ಹೂಂ, ಲಾಡ್ ಸಕ್ತಿ ಹೂಂ” (ನಾನು ಹುಡುಗಿ, ನಾನು ಹೋರಾಡಬಲ್ಲೆ) ಪ್ರಚಾರ ಅಭಿಯಾನ ನಡೆಸಿದ್ದ ಪ್ರಿಯಾಂಕಾ ಗಾಂಧಿ, “ಪಟ್ಟಿಯಲ್ಲಿ ಶೇಕಡಾ 40 ರಷ್ಟು ಟಿಕೆಟ್ಗಳನ್ನು ಮಹಿಳೆಯರಿಗೆ ಮತ್ತು ಶೇಕಡಾ 40 ರಷ್ಟು ಟಿಕೆಟ್ಗಳನ್ನು ಯುವಜನತೆಗೆ ಮೀಸಲಿಡಲಾಗಿದೆ” ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಯುಪಿ ಚುನಾವಣೆಗೆ 125 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿ ಆಶಾ ಸಿಂಗ್ ಸೇರಿದಂತೆ 50 ಮಹಿಳಾ ಅಭ್ಯರ್ಥಿಗಳಿದ್ದಾರೆ. ಗೌರವಧನ ಹೆಚ್ಚಳಕ್ಕಾಗಿ ನಡೆದ ಆಂದೋಲನದ ನೇತೃತ್ವ ವಹಿಸಿದ್ದ ಆಶಾ ಕಾರ್ಯಕರ್ತೆ ಪೂನಂ ಪಾಂಡೆಯನ್ನು ಶಹಜಹಾನ್ಪುರದಿಂದ ಕಣಕ್ಕಿಳಿಸಿದ್ದೇವೆಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳು, ಲಿಂಗ ಸಮಾನತೆಯ ಬಗ್ಗೆ ಪದೇಪದೆ ಮಾತನಾಡುತ್ತಿರುವ ಕಾಂಗ್ರೆಸ್, ಹತ್ರಾಸ್ನಲ್ಲಿ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಉನ್ನಾವೋ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ದನಿ ಎತ್ತಿದೆ.
2017ರಲ್ಲಿ ಕೆಲಸ ಮುಗಿಸಿ ಬರುವ 17 ವರ್ಷದ ಬಾಲಕಿ ಮೇಲೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ತಮ್ಮ ನಿವಾಸದಲ್ಲಿ ಅತ್ಯಾಚಾರ ಎಸಗಿ, ಈ ವಿಚಾರವನ್ನು ಹೊರಗೆ ತಿಳಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಆದರೆ, ಇದಕ್ಕೆ ಬಗ್ಗದ ಬಾಲಕಿ ಕೋರ್ಟ್ ಮೆಟ್ಟಿಲೇರಿದ್ದಳು.
ಪ್ರಕರಣದ ನಿಮಿತ್ತ ಕುಟುಂಬದವರೊಂದಿಗೆ ಸಂತ್ರಸ್ತೆ ಕೋರ್ಟ್ ಗೆ ತೆರಳುವಾಗ ಇವರ ಕಾರಿಗೆ ರಾಯ್ಬರೇಲಿ ಜಿಲ್ಲೆಯಲ್ಲಿ ಟ್ರಕ್ವೊಂದು ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಆಕೆಯ ಕುಟುಂಬದ ಸದಸ್ಯರಿಬ್ಬರು ಸಾವನ್ನಪ್ಪಿದ್ದರು. ಸಂತ್ರಸ್ತೆ ಹಾಗೂ ಆಕೆಯ ವಕೀಲರು ತೀವ್ರವಾಗಿ ಗಾಯಗೊಂಡಿದ್ದರು.
ಈ ಅಪಘಾತ ಸಹ ಪೂರ್ವ ನಿಯೋಜಿತವೆನ್ನಲಾಗಿತ್ತು. ಕೊನೆಗೆ ಅತ್ಯಾಚಾರ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅಪರಾಧಿ ಎಂದು ದೆಹಲಿಯ ಟಿಸ್ ಹಜಾರಿ ನ್ಯಾಯಾಲಯ ಘೋಷಿಸಿದ್ದು, ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.