ವಿವಿಧ ರಾಜ್ಯಗಳಲ್ಲಿವೆ ಹಲವು ಜಲ ವಿವಾದಗಳು!

ಬೆಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಸಲುವಾಗಿ ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಯನ್ನು ರೂಪಿಸಿ ದಶಕವೇ ಕಳೆದಿದೆ. ಆದರೂ ಈ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಯೋಜನೆಯ ವಿಳಂಬಕ್ಕೆ ತಮಿಳುನಾಡಿನ ತಗಾದೆ, ಪರಿಸರವಾದಿಗಳ ಹೋರಾಟ, ಯೋಜನೆಯನ್ನು ವಿವಾದವನ್ನಾಗಿಸುತ್ತಿರುವ ರಾಜಕಾರಣ – ಹೀಗೆ ನಾನಾ ಕಾರಣ ಇರಬಹುದು. ಆದರೆ, ಮೇಕೆದಾಟು ವಿವಾದದ ಹೊರತಾಗಿಯೂ ಕರ್ನಾಟಕ-ತಮಿಳುನಾಡಿನ ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಕನಿಷ್ಟ ಒಂದು ಶತಮಾನ ಅರ್ಥಾತ್ 100 ವರ್ಷಗಳ ಇತಿಹಾಸ ಇದೆ.

ಪ್ರತಿವರ್ಷದ ಮಳೆಗಾಲ ಮತ್ತು ಬೇಸಿಗೆಯ ಸಂದರ್ಭದಲ್ಲಿ ಕಾವೇರಿ ನೀರಿಗಾಗಿ ತಮಿಳುನಾಡು ಖ್ಯಾತೆ ತೆಗೆಯುವುದು ಮತ್ತು ಪ್ರಕರಣ ಸುಪ್ರೀಂ ಕೋರ್ಟ್‌ನ ಕಾವೇರಿ ಟ್ರಿಬ್ಯೂನಲ್ ಮೆಟ್ಟಿಲೇರುವುದು ಸಾಮಾನ್ಯ. ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹಲವಾರು ಸಂದರ್ಭಗಳಲ್ಲಿ ಎರಡೂ ರಾಜ್ಯಗಳಲ್ಲಿ ಅದರಲ್ಲೂ ಗಡಿಭಾಗಗಳಲ್ಲಿ ಗಲಭೆಗಳು, ಹಿಂಸಾಚಾರಗಳು ಉಂಟಾಗುವುದು. ಹೊಸೂರು-ಬೆಂಗಳೂರು ಗಡಿ ಮುಚ್ಚುವುದು ಸಾಮಾನ್ಯ ಎಂಬಂತಾಗಿರುವುದು ದುರಾದೃಷ್ಟಕರ.

ಕಾವೇರಿ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಈವರೆಗೆ ಸಾಕಷ್ಟು ಹಿಂಸಾಚಾರಗಳು ಸಂಭವಿಸಿರುವುದಂತೂ ನಿಜ. ಆದರೆ, ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಜಟಾಪಟಿ ಇರುವುದು ಕೇವಲ ತಮಿಳುನಾಡು ಮತ್ತು ಕರ್ನಾಟಕದ ನಡುವೆ ಮಾತ್ರವಲ್ಲ. ಬದಲಾಗಿ ದೇಶದಲ್ಲಿ ಹಲವಾರು ರಾಜ್ಯಗಳ ನಡುವೆ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಹತ್ತಾರು ವ್ಯಾಜ್ಯಗಳಿವೆ. ಈ ವಿಚಾರವಾಗಿ ಅನೇಕ ಹಿಂಸಾಚಾರಗಳನ್ನು ಎದುರಿಸಿರುವ ರಾಜ್ಯಗಳ ದೊಡ್ಡ ಪಟ್ಟಿಯೇ ಭಾರತದಲ್ಲಿದೆ. ಆ ಕುರಿತು ಸಂಕ್ಷಿಪ್ತ ಮಾಹಿತಿ ಮಾಹಿತಿ ಇಲ್ಲಿದೆ.

ನರ್ಮದಾ ನದಿ ವಿವಾದ:

ನರ್ಮದಾ ನದಿ ನೀರಿನ ಹಂಚಿಕೆ ಗುಜರಾತ್ ಮತ್ತು ಮಧ್ಯಪ್ರದೇಶ ರಾಜ್ಯಗಳ ನಡುವಿನ ವ್ಯಾಜ್ಯವಾಗಿದೆ. ಮಧ್ಯಪ್ರದೇಶದ ಅಮರ್ಕಾಂತಕದಲ್ಲಿ ಹುಟ್ಟಿ ಹರಿಯುವ ಈ ನದಿಯ ಉದ್ದ 1,300 ಕಿ.ಮೀ. ಮತ್ತು ನದಿಪಾತ್ರ 98,796 ಚದರ ಕಿ.ಮೀ. ಇದೆ. ನರ್ಮದಾ ನದಿ ವಿವಾದವು ಮಹಾರಾಷ್ಟ್ರ, ಗುಜರಾತ್ ಮಾತ್ರವಲ್ಲದೇ ಮಧ್ಯಪ್ರದೇಶಕ್ಕೂ ಸಹ ಸಂಬಂಧಿಸಿದೆ. ಸರ್ದಾರ್ ಸರೋವರ್ ಅಣೆಕಟ್ಟು ನರ್ಮದಾ ನದಿಯ ಮೇಲೆ ಕಟ್ಟಲ್ಪಟ್ಟಿದೆ.

river narmada

1956ರ ಅಂತರರಾಜ್ಯ ಜಲ ವಿವಾದ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, ಕೇಂದ್ರ ಸರ್ಕಾರವು ನರ್ಮದಾ ಜಲ ವಿವಾದ ನ್ಯಾಯಾಧೀಕರಣವನ್ನು ಸ್ಥಾಪಿಸಿತು. ನ್ಯಾಯಮೂರ್ತಿ ವಿ. ರಾಮಸ್ವಾಮಿ ಅಧ್ಯಕ್ಷರಾಗಿದ್ದರು. ರಾಮಸ್ವಾಮಿ ನ್ಯಾಯಾಧೀಕರಣ ಡಿಸೆಂಬರ್ 7, 1979 ರಂದು ತೀರ್ಪು ನೀಡಿತು. ಆದರೂ ಸಹ ಇದು ಇನ್ನೂ ವಿವಾದಾತ್ಮಕವಾಗಿಯೇ ಉಳಿದಿದೆ.

ಯಮುನಾ ನದಿ ವಿವಾದ:

ಯಮುನಾ ನದಿ ನೀರಿನ ವಿವಾದವು ತುಂಬಾ ಹಳೆಯದು. ಇದು ಒಟ್ಟು ಐದು ರಾಜ್ಯಗಳಿಗೆ ಸಂಬಂಧಿಸಿದೆ. ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಯಮುನಾ ನದಿ ಹರಿಯುತ್ತದೆ. 1954 ರಲ್ಲಿ ಮೊದಲನೆಯದಾಗಿ ಹರಿಯಾಣ ಮತ್ತು ಉತ್ತರಪ್ರದೇಶ ರಾಜ್ಯಗಳ ನಡುವೆ ಯಮುನಾ ನದಿ ಒಪ್ಪಂದವಾಯಿತು.

river yamuna

ಯಮುನಾ ನದಿಯಲ್ಲಿ ಹರಿಯಾಣದ ಪಾಲು ಶೇ. 77 ರಷ್ಟು ಮತ್ತು ಉತ್ತರ ಪ್ರದೇಶದ ಪಾಲು ಶೇ.23 ರಷ್ಟಿತ್ತು. ರಾಜಸ್ಥಾನ, ದೆಹಲಿ ಮತ್ತು ಹಿಮಾಚಲ ಪ್ರದೇಶದ ಉಲ್ಲೇಖಗಳು ಬಂದಿಲ್ಲ. ಈ ರಾಜ್ಯಗಳು ತಮ್ಮ ಪಾಲಿನ ಬೇಡಿಕೆಗಾಗಿ ತೀವ್ರ ವಿವಾದವನ್ನು ಪ್ರಾರಂಭಿಸಿವೆ.

ಸೋನಾ ನದಿ ವಿವಾದ:

ಸೋನಾ ನದಿ ನೀರಿನ ವಿವಾದವು ಮೂರು ರಾಜ್ಯಗಳಾದ ಬಿಹಾರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ನಡುವೆ ಇದೆ. 1973 ರಲ್ಲಿ, ಸೋನಾ ಮತ್ತು ರಿಹಂದ್ ನದಿಗಳ ನಡುವಿನ ನೀರಿನ ವಿವಾದವನ್ನು ಪರಿಹರಿಸಲು ಬನ್ಸಾಗರ್ ಒಪ್ಪಂದವನ್ನುಮಾಡಿಕೊಳ್ಳಲಾಯಿತು.

river sona

ಆರಂಭದಿಂದಲೂ ಈ ಒಪ್ಪಂದವನ್ನು ಸರಿಯಾಗಿ ಜಾರಿಗೊಳಿಸಿಲ್ಲ ಎಂದು ಬಿಹಾರ ಆರೋಪಿಸಿದೆ. ಈ ಒಪ್ಪಂದದ ಪ್ರಕಾರ, ರಿಹಾಂಡ್ ನದಿಯ ಸಂಪೂರ್ಣ ನೀರನ್ನು ಬಿಹಾರಕ್ಕೆ ಹಂಚಲಾಗಿತ್ತು. ಆದರೆ ಎನ್ಟಿಪಿಸಿ ಮತ್ತು ಉತ್ತರ ಪ್ರದೇಶ ಸರಕಾರವು ಬಿಹಾರ್ ನದಿಯ ಹಿಂಭಾಗದ ಜಲಾಶಯದಿಂದ ನೀರು ಬಳಸುತ್ತಿವೆ.

ಕೃಷ್ಣಾ ನದಿ ವಿವಾದ:

ಕೃಷ್ಣಾ ನದಿ ನೀರು ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ವಿವಾದಕ್ಕೆ ಕಾರಣವಾಗಿದೆ. ಈ ನದಿಯು ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರದ ಸತಾರ ಮತ್ತು ಸಾಂಗ್ಲಿ ಜಿಲ್ಲೆಗಳ ನಡುವೆ ಹಾಗೂ ಕರ್ನಾಟಕ, ದಕ್ಷಿಣ ಆಂಧ್ರಪ್ರದೇಶದ ನಡುವೆ ಹರಿಯುತ್ತದೆ. ಕೃಷ್ಣಾ ನದಿಯು ಕರ್ನಾಟಕದ 60 ಪ್ರತಿಶತದಷ್ಟು 3 ದಶಲಕ್ಷ ಹೆಕ್ಟೇರ್ ಭೂಮಿಗೆ ನೀರು ಒದಗಿಸುತ್ತದೆ.

river krishna

ಈ ನದಿಯ ವಿವಾದವನ್ನು ಪರಿಹರಿಸಲು, 1969 ರಲ್ಲಿ ಬಚ್ಚವತ್ ಟ್ರಿಬ್ಯೂನಲ್ ಸ್ಥಾಪನೆಯಾಯಿತು. ಅದು 1976 ರಲ್ಲಿ ತೀರ್ಪು ನೀಡಿತು. ಈ ತೀರ್ಪಿನಲ್ಲಿ ಕರ್ನಾಟಕ 700 ಬಿಲಿಯನ್ ಕ್ಯೂಸೆಕ್, ಆಂಧ್ರ ಪ್ರದೇಶ 800 ಬಿಲಿಯನ್ ಕ್ಯೂಸೆಕ್ ಮತ್ತು ಮಹಾರಾಷ್ಟ್ರ 560 ಬಿಲಿಯನ್ ಕ್ಯೂಸೆಕ್ ನೀರನ್ನು ಬಳಸಲು ಅನುಮತಿ ನೀಡಿತು.

ಗೋದಾವರಿ ನದಿ ನೀರಿನ ವಿವಾದ:

ಗೋದಾವರಿ ಭಾರತದ ದೊಡ್ಡ ನದಿ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಅದರ ಉದ್ದ 1,465 ಕಿ.ಮೀ . ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಒಡಿಶಾ ಮತ್ತು ಆಂಧ್ರಪ್ರದೇಶದ ನಡುವೆ ಗೋದಾವರಿ ನೀರಿಗಾಗಿ ಸಾಕಷ್ಟು ವಿವಾದಗಳಾಗಿವೆ.

godavari river

ಇದನ್ನು ಪರಿಹರಿಸಲು, ಏಪ್ರಿಲ್ 1969 ರಲ್ಲಿ ಸರ್ಕಾರ ಸಮಿತಿಯು ರಚನೆಯಾಯಿತು. ಈ ಸಂದರ್ಭದಲ್ಲಿ, ಸಮಿತಿಯು ತನ್ನ ವರದಿಯನ್ನು ಸಲ್ಲಿಸಿದರೂ, ಗೋದಾವರಿ ನದಿ ನೀರಿನ ವಿವಾದ ಸಂಪೂರ್ಣವಾಗಿ ಬಗೆಹರಿದಿಲ್ಲ.

ಸಟ್ಲೇಜ್-ರಾವಿ- ವ್ಯಾಸ ನದಿ ವಿವಾದ:

ಪಂಜಾಬ್ನಲ್ಲಿ ನದಿ ನೀರಿನ ವಿವಾದದ ವಿಷಯ ಇತ್ತು. ನವೆಂಬರ್ 1966 ರಲ್ಲಿ ಪಂಜಾಬ್ನ ಒಂದು ಭಾಗವನ್ನು ಪ್ರತ್ಯೇಕಿಸಿ ಹೊಸ ರಾಜ್ಯ ಹರಿಯಾಣವನ್ನು ಸ್ಥಾಪಿಸಲಾಯಿತು. ಸಟ್ಲೆಜ್, ರಾವಿ ಮತ್ತು ವ್ಯಾಸ ನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದ ವಿವಾದವು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವೆ ನಡೆಯುತ್ತಿದೆ.

satleg

ಇತರ ನದಿ ನೀರಿನ ವಿವಾದಗಳು:

  • ಮಹಾನದಿ ನೀರಿನ ವಿವಾದ – ಗುಜರಾತ್, ರಾಜಸ್ಥಾನ ಮತ್ತು ಮಧ್ಯ ಪ್ರದೇಶ
  • ಕರ್ಮನಾಶ ನದಿ ನೀರಿನ ವಿವಾದ – ಉತ್ತರ ಪ್ರದೇಶ ಮತ್ತು ಬಿಹಾರ
  • ಬರಾಕ್ ನದಿ ನೀರಿನ ವಿವಾದ – ಅಸ್ಸಾಂ ಮತ್ತು ಮಣಿಪುರ
  • ಅಲಿಯಾರ್ ಮತ್ತು ಭವಾನಿ ನದಿಯ ನೀರಿನ ವಿವಾದಗಳು – ತಮಿಳುನಾಡು ಮತ್ತು ಕೇರಳ
  • ತುಂಗಭದ್ರ ನದಿ ನೀರಿನ ವಿವಾದ – ಆಂಧ್ರಪ್ರದೇಶ ಮತ್ತು ಕರ್ನಾಟಕ.

Related Posts

Leave a Reply

Your email address will not be published. Required fields are marked *

How Can We Help You?