ಜ.17ರಂದು ಮೀನುಗಾರರಿಂದ ಬೃಹತ್ ಪ್ರತಿಭಟನೆ

ಕುಂದಾಪುರ: ಕಳೆದ ಮೂವತ್ತು ವರ್ಷಗಳ ಸುದೀರ್ಘ ಹೋರಾಟದ ಫಲವಾಗಿ ಕೊಡೇರಿ ಕಿರು ಬಂದರು ನಿರ್ಮಾಣಗೊಂಡಿದೆ. ಸರ್ಕಾರ ಬರೋಬ್ಬರಿ 64 ಕೋಟಿ 80 ಲಕ್ಷ ರೂ. ಹಣ ವ್ಯಯಿಸಿ ಮಾಡಿರುವ ಕಿರು ಬಂದರು ಮೀನುಗಾರರಿಗೆ ಸಹಾಯವಾಗದೆ ಇರುವುದು ದುರಂತ. ಮೂಲಭೂತ ಸೌಕರ್ಯಗಳಿಲ್ಲದೇ, ಕೆಲ ಅವೈಜಾÐನಿಕ ಕಾಮಗಾರಿಗಳಿಂದಾಗಿ 10 ಸಾವಿರ ಮೀನುಗಾರರು, ಮಹಿಳೆಯರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ನಮ್ಮ ಮನವಿಗಳಿಗೆ ಯಾರೂ ಸ್ಪಂದಿಸುತ್ತಿಲ್ಲ. ಹೀಗಾಗಿ ನಿದ್ದೆಗಣ್ಣಿನಲ್ಲಿರುವ ಸರ್ಕಾರ ಹಾಗೂ ಇಲಾಖೆಯನ್ನು ಎಚ್ಚರಿಸಲು ಜನವರಿ 17 ರಂದು ಬೈಂದೂರಿನ ತಹಸೀಲ್ದಾರ್ ಕಚೇರಿ ಎದುರು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಲು ತಯಾರಿ ನಡೆಸಿದ್ದೇವೆ ಎಂದು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದ ಅಧ್ಯಕ್ಷ ವೆಂಕಟರಮಣ ಖಾರ್ವಿ ಹೇಳಿದರು.

ಅವರು ಉಪ್ಪುಂದ ಸಮೀಪದ ಕೊಡೇರಿ ಕಿರು ಬಂದರಿನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾಕಷ್ಟು ಸಮಸ್ಯೆಗಳ ನಡುವೆಯೂ ಕಳೆದ ಎರಡು ವರ್ಷಗಳಿಂದ ಕೊಡೇರಿ ಕಿರು ಬಂದರುವಿನಲ್ಲಿ ಮೀನುಗಾರಿಕಾ ವಹಿವಾಟು ನಡೆಸುತ್ತಾ ಬಂದಿದ್ದೇವೆ. ಈಗಾಗಲೇ 400 ಮೀ ಬ್ರೇಕ್ ವಾಟರ್ ಕಾಮಗಾರಿ ಕೊನೆಯ ಹಂತಕ್ಕೆ ಬಂದು ತಲುಪಿದೆ. ಇನ್ನು ನಾಲ್ಕೈದು ತಿಂಗಳುಗಳಲ್ಲಿ ಸಮುದ್ರದಲ್ಲಿ ಅಲೆಗಳು ಹೆಚ್ಚಾಗುತ್ತದೆ. ಅಷ್ಟರೊಳಗೆ ಹೂಳೆತ್ತುವ ಕಾರ್ಯ ನಡೆಯಬೇಕು. ಸಮುದ್ರದ ಅಲೆಗಳು ಹೆಚ್ಚಿರುವುದರಿಂದ ದೋಣಿ ಇಲ್ಲಿಗೆ ಬರಲು ಸಾಧ್ಯವಾಗದೆ ಅನೇಕ ಸಾವು-ನೋವುಗಳು ಸಂಭವಿಸಿದೆ. ಕಳೆದ ವರ್ಷ ನಾಲ್ವರು ಮೀನುಗಾರರು ಹಾಗೂ ಈ ಬಾರಿ ಇಬ್ಬರು ಈ ಭಾಗದ ಮೀನುಗಾರರು ಸಾವನ್ನಪ್ಪಿದ್ದಾರೆ. ಇಂತಹ ಅವಘಡಗಳು ಮುಂದೆ ನಡೆಯಬಾರದು ಎಂಬ ಕಾಳಜಿ ಸರ್ಕಾರಕ್ಕಿದ್ದರೆ ಶೀಘ್ರವೇ ಹೂಳೆತ್ತುವುದು ಮತ್ತು ಬ್ರೇಕ್ ವಾಟರ್ ಕಾಮಗಾರಿ ಮುಂದುವರೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಣಿಬಲೆ ಮೀನುಗಾರರ ಒಕ್ಕೂಟದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ನಾಗೇಶ್ ಖಾರ್ವಿ, ನಿರ್ದೇಶಕರಾದ ನವೀನ್ ಖಾರ್ವಿ, ಸೋಮಶೇಖರ್, ಶಂಕರ್, ರಾಘವೇಂದ್ರ, ಶರತ್, ಶ್ರೀನಿವಾಸ್, ಕೃಷ್ಣ ಖಾರ್ವಿ ಇದ್ದರು.

Related Posts

Leave a Reply

Your email address will not be published.

How Can We Help You?