ಉಜಿರೆಯ ಎಸ್.ಡಿ‌.ಎಂ. ಕಾಲೇಜಿನಲ್ಲಿ ‘ಚಂಪಾ’ಗೆ ನುಡಿನಮನ

ಉಜಿರೆ ಜ.11 :- “ ಹೊಸಗನ್ನಡ ಸಾಹಿತ್ಯದ ಪ್ರಮುಖ ಸಾಹಿತಿಯಾಗಿ ಮತ್ತು ಕನ್ನಡ ಹೋರಾಟಗಾರರಾಗಿ ಪ್ರಮುಖವಾಗಿದ್ದ ಪ್ರೊ. ಚಂದ್ರಶೇಖರ ಪಾಟೀಲರು ಚಂಪಾ ಎಂದೇ ಜನಮನ್ನಣೆ ಗಳಿಸಿದ್ದವರು, ಅವರ ಅಕಾಲಿಕ ಮರಣವು ಕನ್ನಡ ಸಾಹಿತ್ಯ ಲೋಕಕ್ಕೆ, ಕನ್ನಡ ನೆಲ ನುಡಿಯ ಹೋರಾಟಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಕಾಲೇಜಿನ ಕನ್ನಡ ಪ್ರಾಧ್ಯಾಪಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಎಂ.ಪಿ ಶ್ರೀನಾಥ್ ನುಡಿನಮನ ಸಲ್ಲಿಸಿದರು.

            ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ “ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು‌” ಮತ್ತು ಕಾಲೇಜಿನ ಕನ್ನಡ ಸಂಘದ ವತಿಯಿಂದ ಇತ್ತೀಚೆಗೆ ಇಹಲೋಕ ತ್ಯಜಿಸಿದ ಕನ್ನಡದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಪಾಟೀಲರ ನುಡಿನಮನ ಕಾರ್ಯಕ್ರಮದಲ್ಲಿ ಗೌರವ ಸಮರ್ಪಣೆ ಸಲ್ಲಿಸಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. 

        “ಚಂಪಾ ಎಂದೇ ಕನ್ನಡ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡ ಚಂದ್ರಶೇಖರ ಪಾಟೀಲರು ನುಡಿತಂತೆ ನಡೆಯುವ ವ್ಯಕ್ತಿತ್ವದವರಾಗಿದ್ದರು, ಅವರು ಸಾಹಿತ್ಯ ಮಾತ್ರವಲ್ಲದೇ ನಾಡು ನುಡಿಯ ಅಭಿವೃದ್ಧಿಗಾಗಿ ಕೂಡ ಜೀವನವಿಡೀ ಹಲವಾರು ಹೋರಾಟಗಳನ್ನು ಮಾಡಿದ್ದಾರೆ. 

ಬಂಡಾಯ ಸಾಹಿತ್ಯದ ಪ್ರಮುಖರಾಗಿ ಗುರುತಿಸಿಕೊಂಡಿದ್ದ ಚಂಪಾ ನಿಧನವು ಸಾಹಿತ್ಯ ವಲಯಕ್ಕೆ ದೊಡ್ಡ ಆಘಾತವಾಗಿದೆ” ಎಂದು ಡಾ.ಎಂ.ಪಿ.ಶ್ರೀ ನಾಥ್ ವಿಷಾದಿಸಿದರು. 

     “ಚಂಪಾರವರು ಕವಿ, ನಾಟಕಕಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದರು, ಅಷ್ಟೇ ಅಲ್ಲ ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಭಾಷಾ ಚಳುವಳಿಯಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು, ಅವರ ಹೋರಾಟ ಮತ್ತು ಬಂಡಾಯ ಸಾಹಿತ್ಯಕ್ಕೆ ಅವರ ಕೊಡುಗೆ ಅಪಾರ” ಎಂದು ಕಾಲೇಜಿನ ಹಿರಿಯ ಆಂಗ್ಲಭಾಷಾ ಪ್ರಾಧ್ಯಾಪಕ ಜಿ.ಆರ್. ಭಟ್ ಸ್ಮರಿಸಿದರು. 

            ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಸಂಪತ್ ಕುಮಾರ್ “ಬಂಡಾಯ ಸಾಹಿತ್ಯದ ಬೇರಾಗಿ ಚಂಪಾರವರು ಬದುಕಿದ್ದರು, ಈಗ ಅವರ ಮರಣದ ನಂತರ ಆ ಮರವು ತನ್ನ ಆಸರೆಯನ್ನು ಕಳೆದುಕೊಂಡಿದೆ, ಚಂಪಾನ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬ ಮತ್ತು ಸಾಹಿತ್ಯ ಪ್ರೇಮಿಗಳಿಗೆ ದೇವರು ನೀಡಲಿ” ಎಂದು ಆಶಿಸಿದರು. 

ಕಾರ್ಯಕ್ರಮದಲ್ಲಿ  ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರು‌, ಸಾಹಿತ್ಯ ಅಭಿಮಾನಿಗಳು ಮತ್ತು ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?