ರಾಜ್ಯದ 4 ಕ್ಲಸ್ಟರ್ಗಳಲ್ಲಿ ಐಟಿ ಕ್ಷೇತ್ರ ವಿಸ್ತರಣೆ..! ತೆರೆಕೊಳ್ಳುತ್ತಾ ಸ್ಥಳೀಯರಿಗೆ ಉದ್ಯೋಗ?

ರಾಜ್ಯ ರಾಜಧಾನಿ ಬೆಂಗಳೂರು ದೇಶದ ಪ್ರಮುಖ ವಾಣಿಜ್ಯ ನಗರಿಗಳಲ್ಲಿ ಒಂದು. 2000 ಹಾಗೂ ನಂತರದ 22 ವರ್ಷಗಳ ನಡುವಿನ ಅವಧಿ ಬೆಂಗಳೂರು ನಗರಕ್ಕೆ ಅಭಿವೃದ್ಧಿಯ ಪರ್ವ. ಇಲ್ಲಿನ ಐಟಿ-ಬಿಟಿ ಕ್ಷೇತ್ರಗಳಲ್ಲಾದ ಹೂಡಿಕೆ ಹಾಗೂ ಸಾವಿರಾರು ಕಂಪನಿಗಳ ಸ್ಥಾಪನೆಯಿಂದಾಗಿ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಯಿತು. ದೇಶದ ಪ್ರಮುಖ ಐಟಿ-ಸಿಟಿಗಳ ಪಟ್ಟಿಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದ್ದು, ದೇಶದ ಐಟಿ ರಫ್ತಿಗೆ ಬೆಂಗಳೂರಿನ ಕೊಡುಗೆ ಶೇ.38 ರಷ್ಟಿದೆ.
ದೇಶದ ಪ್ರಮುಖ ವಾಣಿಜ್ಯ ನಗರಿಗಳ ಪಟ್ಟಿಯಲ್ಲಿ ಬೆಂಗಳೂರು 5ನೇ ಸ್ಥಾನಮಾನ ಪಡೆದುಕೊಂಡಿದೆ. ಮುಂಬೈ, ನವದೆಹಲಿ, ಕೋಲ್ಕತ್ತಾ, ಚೆನ್ನೈ ನಗರಗಳ ನಂತರದ ಸ್ಥಾನದಲ್ಲಿ ಬೆಂಗಳೂರು ಇದೆ.
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಕಾರಣದಿಂದ ಐಟಿ ಸಿಬ್ಬಂದಿ ಬೆಂಗಳೂರು ನಗರ ತೊರೆದು ಅವರ ಊರುಗಳತ್ತ ಮುಖ ಮಾಡಿದ್ದಾರೆ. ಕಳೆದೆರಡು ವರ್ಷಗಳಿಂದ ಬಹುತೇಕ ಖಾಸಗಿ ಕಂಪನಿಗಳ ನೌಕರರು ಮನೆಯಿಂದಲೇ ಕೆಲಸ ಮಾಡುತ್ತಿದ್ದು, ಬೆಂಗಳೂರು ಹೊರತಾದ ದ್ವಿತೀಯ ಹಂತದ ವಾಣಿಜ್ಯ ನಗರಗಳು ಹಾಗೂ ಚಿಕ್ಕ ನಗರಗಳತ್ತ ಬಹುತೇಕ ಉದ್ಯೋಗಿಗಳು, ಹೂಡಿಕೆದಾರರು ದೃಷ್ಟಿಹರಿಸಿದ್ದಾರೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಂಸ್ಥೆ ಮುಂದಿನ ನಾಲ್ಕು ವರ್ಷಗಳಲ್ಲಿ ಅಂದರೆ 2026ರ ವೇಳೆಗೆ 5 ಲಕ್ಷ ಐಟಿ ನೌಕರರು ದ್ವಿತೀಯ ಹಾಗೂ ತೃತೀಯ ದರ್ಜೆಯ ವಾಣಿಜ್ಯ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗಕ್ಕೆ ತೆರಳಲಿದ್ದಾರೆ ಎಂದು ಅಂದಾಜಿಸಲಾಗಿದೆ.
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಸಂಸ್ಥೆಯು ಸರ್ಕಾರ ಹಾಗೂ ಕಂಪನಿಗಳ ಮಧ್ಯೆ ಸೇತುವೆಯಂತೆ ಕಾರ್ಯ ನಿರ್ವಹಿಸುತ್ತಿದ್ದು, ಮೈಸೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಟೆಕ್ ಕ್ಲಸ್ಟರ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಈಗಾಗಲೇ 80 ಸಾವಿರ ಜನರು ಈ ಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ 2026ರ ವೇಳೆಗೆ ಅವರ ಸಂಖ್ಯೆ 5 ಲಕ್ಷಕ್ಕೆ ಏರಲಿದೆ ಎಂದು ಕೆಡಿಇಎಂ ಮಾಹಿತಿ ನೀಡಿದೆ.
ಬಹುತೇಕ ಮಾಹಿತಿ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿನಲ್ಲೇ ನೆಲೆ ಕಂಡು ಕೊಂಡಿದ್ದು, ಶೇ.2 ಕ್ಕೂ ಕಡಿಮೆ ಪ್ರಮಾಣದ ಐಟಿ ರಫ್ತು ರಾಜ್ಯದ ಬೇರೆ ಕ್ಲಸ್ಟರ್ನಿಂದಾಗುತ್ತಿದೆ. ಹೀಗಾಗಿ ಕ್ಲಸ್ಟರ್ ಮಟ್ಟದಲ್ಲಿ ಹಾಗೂ ಬೆಂಗಳೂರಿನ ಹೊರ ಭಾಗಗಳಲ್ಲಿ ಕೈಗಾರಿಕೆ ಅಭಿವೃದ್ಧಿಪಡಿಸುವ, ಐಟಿ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಕೆಡಿಇಎಂ ಕೆಲಸ ಮಾಡಲಿದೆ ಎಂದು ಹೇಳಿದೆ.
ಆದಾಗ್ಯೂ, ನಮ್ಮ ಮುಂದೆ ಹಲವು ಸವಾಲುಗಳಿದ್ದು, ಐಟಿ ಕ್ಷೇತ್ರದ ಅಭಿವೃದ್ಧಿ ದೊಡ್ಡ ನಗರಗಳಲ್ಲಷ್ಟೇ ಸಾಧ್ಯವೆಂಬ ಅಭಿಪ್ರಾಯವಿದೆ. ಆದರೆ ಕೋವಿಡ್ ಸಂದಿಗ್ಧ ಪರಿಸ್ಥಿತಿ ಈ ಅಭಿಪ್ರಾಯದಿಂದ ಹೊರ ಬರುವ ಅಲೋಚನೆಯೊಂದನ್ನು ಎಲ್ಲರಲ್ಲೂ ಬಿತ್ತಲಾಗುತ್ತಿದೆ. ಬೆಂಗಳೂರಿನ ಶೇ.40 ರಷ್ಟು ಜನರು ಸ್ಥಳೀಯ ಊರುಗಳಿಗೆ ತೆರಳಿದ್ದಾರೆ. ಮಂಗಳೂರು, ಮೈಸೂರು, ಹುಬ್ಬಳ್ಳಿಯಂಥ ನಗರಗಳಲ್ಲಿ ದೊಡ್ಡ ಮಟ್ಟದ ಐಟಿ ಕಂಪನಿಗಳನ್ನು ಆರಂಭಿಸಲು ಸಾಧ್ಯವೇ ಎಂಬ ಪ್ರಶ್ನೆಯ ಸುತ್ತ ಇರುವ ಜನಾಭಿಪ್ರಾಯ ಕ್ರಮೇಣ ಬದಲಾಗುವ ಸಾಧ್ಯತೆ ಇದೆ ಎಂದು ಕೆಡಿಇಎಂ ತಿಳಿಸಿದೆ.
ಮೈಸೂರು ಕ್ಲಸ್ಟರ್ನ್ನು ಸೈಬರ್ ಸೆಕ್ಯೂರಿಟಿಗೆ, ಮಂಗಳೂರನ್ನು ಫಿನ್ ಟೆಕ್, ಬ್ಯಾಕ್ ಎಂಡ್ ಕಾರ್ಯಾಚರಣೆ, ಬೆಳಗಾವಿ ಮತ್ತು ಹುಬ್ಬಳ್ಳಿ ಕ್ಲಸ್ಟರ್ನ್ನು ಅಗ್ರಿ ಟೆಕ್ (ಕೃಷಿ ತಂತ್ರಜ್ಞಾನ) ಹಾಗೂ ಶಿಕ್ಷಣ ಸಂಸ್ಥೆಗಳ ಸ್ಥಾಪನೆಯ ಗುರಿ ಇದೆ.
ಐಬಿಎಂ ಈಗಾಗಲೇ ಮೈಸೂರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದು, ಇನ್ನೊಂದು ಬೃಹತ್ ಕೈಗಾರಿಕೆಯೊಂದು ಆಗಮಿಸುವ ಸೂಚನೆ ಇದೆ.