ಸಂಜೆ ಸಮಯದ ಸ್ವಾತಂತ್ರ್ಯ: ವಿದ್ಯಾರ್ಥಿನಿಯರ ಒಂದು ವರ್ಷದ ನಿರಂತರ ಹೋರಾಟಕ್ಕೆ ಗೆಲುವು!

ಮಹಿಳಾ ಹಾಸ್ಟೆಲ್‌ಗಳಲ್ಲಿ ಸಂಜೆ 6 ಗಂಟೆಗೆ ಆರಂಭವಾಗುತ್ತಿದ್ದ ಕರ್ಫ್ಯೂ ವಿರುದ್ದ ಹೋರಾಟ ಆರಂಭಿಸಿದ್ದ ಕೇರಳದ ಅಲುವಾ ಯುಸಿ ಕಾಲೇಜಿನ ವಿದ್ಯಾರ್ಥಿಗಳು ಒಂದು ವರ್ಷದ ಬಳಿಕ ಗೆಲುವು ಸಾಧಿಸಿದ್ದಾರೆ. ಮಹಿಳಾ ಹಾಸ್ಟೆಲ್‌ಗಳಲ್ಲಿ ಕರ್ಫ್ಯೂ ಸಮಯವನ್ನು ರಾತ್ರಿ 9.30ರ ನಂತರ ವಿಧಿಸಬೇಕು ಎಂಬ ವಿದ್ಯಾರ್ಥಿಗಳ ಉತ್ತಾಯಕ್ಕೆ ಕಾಲೇಜು ಆಡಳಿತ ಒಪ್ಪಿಗೆ ನೀಡಿದೆ.

“ಇದು ಕಷ್ಟಪಟ್ಟು ಗಳಿಸಿದ ಸ್ವಾತಂತ್ರ್ಯ. ಹಲವು ಪ್ರತಿಭಟನೆಗಳ ಮತ್ತು ಹಕ್ಕೊತ್ತಾಯಗಳನ್ನು ಸಲ್ಲಿಸಿದ ನಂತರ, ಕಾಲೇಜು ಅಂತಿಮವಾಗಿ ನಮ್ಮ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡಿದೆ ”ಎಂದು ವಿದ್ಯಾರ್ಥಿನಿ ಎಮಿಲ್ಲಾ ಜಾನ್ ಹೇಳಿದ್ದಾರೆ.

“2021ರ ಕೊನೆಯ ಕೆಲವು ತಿಂಗಳುಗಳಲ್ಲಿ ನಮ್ಮ ಪ್ರತಿಭಟನೆಗಳನ್ನು ನಡೆಸಿದ್ದೆವು. ಈ ಬಳಿಕ, ಕಾಲೇಜು ಪುನರಾರಂಭವಾದಾಗ ನಮಗೆ ಅನುಕೂಲಕರವಾದ ಉತ್ತರವನ್ನು ನೀಡುವುದಾಗಿ ಕಾಲೇಜು ಆಡಳಿತ ಭರವಸೆ ನೀಡಿತ್ತು. ನಮ್ಮ ಬೇಡಿಕೆ ಸರಳವಾಗಿತ್ತು: 2019 ರ ಹೈಕೋರ್ಟ್ ಆದೇಶದಂತೆ ಎಲ್ಲಾ ಹಾಸ್ಟೆಲ್‌ಗಳಲ್ಲಿ ಕರ್ಫ್ಯೂ ಅನ್ನು ರಾತ್ರಿ 9.30ರ ನಂತರ ಇರಬೇಕು ಹಾಗೂ ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ವಿದ್ಯಾರ್ಥಿಗಳಿಗೆ ಹೊರಗೆ ಹೋಗಲು ಅವಕಾಶ ಮಾಡಿಕೊಡಿ ಎಂದು ನಾವು ಒತ್ತಾಯಿಸಿದ್ದೆವು” ಎಂದು ಮತ್ತೊಬ್ಬ ವಿದ್ಯಾರ್ಥಿನಿ ಟೆಸ್ಸಾ ಸಾರಾ ಕುರಿಯಾಕೋಸ್ ತಿಳಿಸಿದ್ದಾರೆ.

ಜನವರಿ 3 ರಂದು ಆಡಳಿತ ಮಂಡಳಿ ಸಭೆ ಸೇರಿತ್ತು. ನಮ್ಮ ಎಲ್ಲಾ ಬೇಡಿಕೆಗಳನ್ನು ಅವರು ಒಪ್ಪಿಕೊಂಡಿದ್ದಾರೆ. ಮುಂದಿನ ದಿನ ಹಾಸ್ಟೆಲ್ ವಾರ್ಡನ್‌ಗಳೊಂದಿಗಿನ ಸಭೆಯ ನಂತರ ಅಧಿಕೃತ ನಿಲುವನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ. ಆದರೆ ಜನವರಿ 4 ರಂದು ನಡೆದ ಸಭೆಯ ನಂತರ, ಕರ್ಫ್ಯೂ ಸಮಯದಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಅವರು ಹೇಳಿದರು. ಇದು ನಮ್ಮ ಸಹನೆಯನ್ನು ಪರೀಕ್ಷಿಸಿತ್ತು ಎಂದು ಟೆಸ್ಸಾ ಹೇಳಿದ್ದಾರೆ.

ಸೋಲನ್ನು ಒಪ್ಪಿಕೊಳ್ಳಲು ವಿದ್ಯಾರ್ಥಿಗಳು ಸಿದ್ಧರಿರಲಿಲ್ಲ. “ಆರಂಭದಲ್ಲಿ ಅನೇಕ ಹಾಸ್ಟೆಲ್‌ಗಳಿಗೆ ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಂಘಟನೆಗಳು ಭಾಗಿಯಾಗುವುದು ಇಷ್ಟವಿರಲಿಲ್ಲ. ಆದರೆ, ಕಾಲೇಜು ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರಿಂದಾಗಿ, ಜನವರಿ 6 ರಂದು ನಾವು ರಾಜಕೀಯ ಆಂದೋಲನವನ್ನು ಪ್ರಾರಂಭಿಸಲು ನಿರ್ಧರಿಸಿದೆವು. ಎಸ್‌ಎಫ್‌ಐ ಸಂಘಟನೆಯು ಪ್ರಾಂಶುಪಾಲರ ಕಚೇರಿಯ ಬಳಿ ಪ್ರತಿಭಟನೆಯನ್ನು ಪ್ರಾರಂಭಿಸಿತು ಮತ್ತು ಕೆಎಸ್‌ಯು ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ನಾವು ಹಾಸ್ಟೆಲ್ ನಿಯಮ ಪುಸ್ತಕವನ್ನು ಸುಡುವ ಮೂಲಕ ಹೋರಾಟವನ್ನು ಪ್ರಾರಂಭಿಸಿವು. 30 ಗಂಟೆಗಳ ನಿರಂತರ ಪ್ರತಿಭಟನೆಯ ನಂತರ ಆಡಳಿತವು ನಮ್ಮ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡಿತು” ಟೆಸ್ಸಾ ತಿಳಿಸಿದ್ದಾರೆ.

ಸಂಜೆ 6 ಗಂಟೆಗೆ ಕರ್ಫ್ಯೂ ಉಳಿದಿದ್ದರೂ ವಿದ್ಯಾರ್ಥಿಗಳು ತಡವಾಗಿ ಸ್ಲಿಪ್‌ಗೆ ಸಹಿ ಮಾಡಿ ರಾತ್ರಿ 9 ರವರೆಗೆ ಹೊರಗಿರಬಹುದು ಎಂದು ಹೊಸ ನಿಯಮಗಳು ಹೇಳುತ್ತವೆ. ಚಲನಚಿತ್ರಗಳನ್ನು ವೀಕ್ಷಿಸುವುದು ಮತ್ತು ಶಾಪಿಂಗ್ ಸೇರಿದಂತೆ ಯಾವುದೇ ಕಾರಣಗಳನ್ನು ಅನುಮತಿಸಲಾಗುತ್ತದೆ. “ನಾವು ಎರಡನೇ ಮತ್ತು ನಾಲ್ಕನೇ ಭಾನುವಾರದಂದು ಸಂಜೆ 5 ಗಂಟೆಯವರೆಗೆ ಹೊರ ಹೋಗಬಹುದು ಎಂದು ಅವರು ಹೇಳಿದರು. ಆದರೆ, ಈಗ ನಾವು ಸಾರ್ವಜನಿಕ ರಜಾದಿನಗಳಲ್ಲಿ ಹೊರಗೆ ಹೋಗಬಹುದು” ಎಂದು ಎಮಿಲಾ ಹೇಳುತ್ತಾರೆ.

ಮೊದಲ ಮತ್ತು ಮೂರನೇ ಭಾನುವಾರದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಆಡಳಿತವನ್ನು ಕೇಳಲಾಯಿತು. “ಒಂದು ತಿಂಗಳೊಳಗೆ ಅವರು ತಮ್ಮ ನಿರ್ಧಾರವನ್ನು ನಮಗೆ ತಿಳಿಸುತ್ತಾರೆ. ಪ್ರಸ್ತುತ ನಿಯಮಗಳು ಮುಂದಿನ ಶೈಕ್ಷಣಿಕ ವರ್ಷದಿಂದ ಅಧಿಕೃತವಾಗಿ ಹಾಸ್ಟೆಲ್ ನಿಯಮಗಳ ಭಾಗವಾಗಲಿದೆ ಎಂದು ಆಡಳಿತ ಹೇಳಿದೆ. ಹೊಸ ನಿಯಮಗಳಿಂದ ವಿದ್ಯಾರ್ಥಿಗಳು ಸಂತೋಷವಾಗಿರುವ ಕಾರಣ ನಾವು ಸದ್ಯಕ್ಕೆ ಕಾನೂನು ಆಯ್ಕೆಗಳ ಬಗ್ಗೆ ಯೋಚಿಸುತ್ತಿಲ್ಲ. ಮೊದಲು ನಾವು ಸಂಜೆ 6 ಗಂಟೆಯ ನಂತರ ಹೊರಗೆ ಇರಲು ಸಾಧ್ಯವಿರಲಿಲ್ಲ. ಈಗ ನಾವು ಹೊರ ಹೋಗುತ್ತೇವೆ” ಎಂದು ಟೆಸ್ಸಾ ಹೇಳುತ್ತಾರೆ.

ಕೋವಿಡ್ ಮೂರನೇ ಅಲೆಯಿಂದಾಗಿ ವಿದ್ಯಾರ್ಥಿಗಳು ಕಷ್ಟಪಟ್ಟು ಸಂಪಾದಿಸಿದ ಸ್ವಾತಂತ್ರ್ಯವನ್ನು ಸಂಭ್ರಮಿಸಲು ಸಾಧ್ಯವಾಗಲಿಲ್ಲ. ಸದ್ಯ ಕಾಲೇಜಿನ ಹಾಸ್ಟೆಲ್‌ಗಳನ್ನು ಮುಚ್ಚಲಾಗಿದೆ. “ಆದರೆ, ಮುಂದಿನ ವರ್ಷಗಳಲ್ಲಿ ಎಲ್ಲಾ ವಿದ್ಯಾರ್ಥಿಗಳು ಈ ಸ್ವಾತಂತ್ರ್ಯವನ್ನು ಆನಂದಿಸಬಹುದು” ಎಂದು ಎಮಿಲಾ ಹೇಳುತ್ತಾರೆ.

.

Related Posts

Leave a Reply

Your email address will not be published.

How Can We Help You?