ಬಾಹ್ಯಾಕಾಶದಿಂದ ದೊರೆತ ಕಪ್ಪು ವಜ್ರ ; ಫೆಬ್ರವರಿಯಲ್ಲಿ ಹರಾಜು!

ಬಾಹ್ಯಾಕಾಶದಿಂದ ದೊರೆತ ಕಪ್ಪು ವಜ್ರ; ಫೆಬ್ರವರಿಯಲ್ಲಿ ಹರಾಜು!
ಬಾಹ್ಯಾಕಾಶದಿಂದ ಲಭಿಸಿದೆ ಎನ್ನಲಾದ ಅಪರೂಪದ ಕಪ್ಪುವಜ್ರವನ್ನು ಅಂತಾರಾಷ್ಟ್ರೀಯ ಹರಾಜು ಸಂಸ್ಥೆ ಸೊದೆಬಿಯಾ ದುಬೈ ಘಟಕವು ಇತ್ತೀಚೆಗೆ ದುಬೈನಲ್ಲಿ ಪತ್ರಕರ್ತರಿಗಾಗಿ ಪ್ರದರ್ಶನವನ್ನು ಏರ್ಪಡಿಸಿತ್ತು.
‘ದಿ ಎನಿಗ್ಮಾ’ ಹೆಸರಿನ 555.55 ಕ್ಯಾರೆಟ್ನ ಅಪರೂಪದ ಕಪ್ಪು ವಜ್ರ, ಕನಿಷ್ಠ 50 ಲಕ್ಷ ಬ್ರಿಟೀಷ್ ಪೌಂಡ್ (6.8 ದಶಲಕ್ಷ ಡಾಲರ್) ಬೆಲೆಗೆ ಮಾರಾಟವಾಗುವ ನಿರೀಕ್ಷೆ ಇದೆ ಎಂದು ಹರಾಜು ಸಂಸ್ಥೆ ಹೇಳಿಕೊಂಡಿದೆ.
ಲಂಡನ್ನಲ್ಲಿ ಕಪ್ಪು ವಜ್ರವನ್ನು ಫೆಬ್ರವರಿಯಲ್ಲಿ ಹರಾಜು ಮಾಡಲಾಗುತ್ತದೆ. ಇದಕ್ಕೂ ಮುನ್ನ ದುಬೈ ಹಾಗೂ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಕಪ್ಪು ವಜ್ರವನ್ನು ಪ್ರದರ್ಶನಕ್ಕೆ ಇಡಲಾಗುವುದೆಂದು ಸಂಸ್ಥೆ ತಿಳಿಸಿದೆ.
ಕಪ್ಪು ವಜ್ರವನ್ನು ಖರೀದಿಸುವವರಿಂದ ಪಾವತಿಗೆ ಕ್ರಿಪ್ಟೊಕರೆನ್ಸಿ ಸ್ವೀಕರಿಸುವುದಾಗಿ ಹರಾಜು ಸಂಸ್ಥೆ ಸೊದೆಬಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.
‘ಎನಿಗ್ಮಾ’ ಕಪ್ಪು ವಜ್ರವು 555.5 ಕ್ಯಾರಟ್ನದ್ದಾಗಿದ್ದು, 55 ಮುಖಗಳನ್ನು ಹೊಂದಿದೆಯೆಂದು ‘ಸೊದೆಬಿ ದುಬೈ’ನ ಆಭರಣ ತಜ್ಡೆ ಸೋಫಿ ಸ್ಟೀವನ್ಸ್ ತಿಳಿಸಿದ್ದಾರೆ.
ಈ ಕಪ್ಪು ವಜ್ರವು ಬಾಹ್ಯಾಕಾಶ ಮೂಲದ್ದೆಂದು ನಾವು ನಂಬುತ್ತೇವೆ. ಉಲ್ಕಾಶಿಲೆಗಳು ಭೂಮಿಯೊಂದಿಗೆ ಘರ್ಷಿಸುವಾಗ ಉಂಟಾಗುವ ರಾಸಾಯನಿಕ ಅನಿಲ ಸಂಯೋಜನೆಯಿಂದ ಈ ಕಪ್ಪು ಶಿಲೆ ರೂಪುಗೊಂಡಿರಬಹುದು ಅಥವಾ ಸ್ವತಃ ಉಲ್ಕಾಶಿಲೆಗಳಿಂದಲೇ ಅದು ಭೂಮಿಗೆ ಬಂದಿರಬಹುದು” ಎಂದು ಸೋಫಿಸ್ಟೀವನ್ಸ್ ಹೇಳಿದ್ದಾರೆ.
ಕಾರ್ಬನಾಡೊ ಎಂದು ಕರೆಯುವ ಕಪ್ಪುವಜ್ರವು ಅತ್ಯಂತ ಅಪರೂಪವಾಗಿದ್ದು, ಈವರೆಗೆ ಪ್ರಾಕೃತಿಕವಾಗಿ ಬ್ರೆಝಿಲ್ ಹಾಗೂ ಮಧ್ಯ ಆಫ್ರಿಕದಲ್ಲಿ ಮಾತ್ರ ಸಿಕ್ಕಿವೆ.