ಉತ್ತರ ಪ್ರದೇಶ: ಚುನಾವಣೆಗೆ ಯುವ ಪ್ರಣಾಳಿಕೆ ಬಿಡುಗಡೆ ಮಾಡಿದ ಕಾಂಗ್ರೆಸ್!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಯುವ ಪ್ರಣಾಳಿಕೆಯನ್ನು ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಶುಕ್ರವಾರ ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
ಯುವಜನತೆ ಮತ್ತು ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಏಕಾಂಗಿಯಾಗಿ ಯುಪಿ ಚುನಾವಣೆ ಎದುರಿಸಲು ಕಾಂಗ್ರೆಸ್ ಸಜ್ಜಾಗಿದೆ.
ರಾಜ್ಯದಲ್ಲಿ ಇದುವರೆಗೆ 125, 41 ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ಗಳನ್ನು ಮೀಸಲಿರಿಸುವ ಮೂಲಕ ತನ್ನ ಭರವಸೆ ಉಳಿಸಿಕೊಂಡಿರುವುದಾಗಿ ಹೇಳಿಕೊಂಡಿದೆ.
ಚುನಾವಣಾ ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ 403 ವಿಧಾನಸಭಾ ಕ್ಷೇತ್ರಗಳ ಚುನಾವಣೆ ನಡೆಯಲಿದೆ.
ಈ ಪೈಕಿ ಎರಡನೇ ಪಟ್ಟಿಯೊಂದಿಗೆ 166 ಅಭ್ಯರ್ಥಿಗಳನ್ನು ಕಾಂಗ್ರೆಸ್ ಇದುವರೆಗೆ ಘೋಷಿಸಿದೆ.
ಫೆ.10 ರ ಮೊದಲ ಹಂತದ ಚುನಾವಣೆಯಲ್ಲಿ 94 ಸ್ಥಾನಗಳಿಗೆ ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿದೆ.
ಇಬ್ಬರು ಹಾಲಿ ಶಾಸಕರಾದ ನರೇಶ್ ಸೈನಿ ಮತ್ತು ಪಶ್ಚಿಮ ಯುಪಿಯ ಸಹರಾನ್ಪುರ ಜಿಲ್ಲೆಯ ಮಸೂದ್ ಅಖ್ತರ್ ಸೇರಿದಂತೆ ಸಾಕಷ್ಟು ಸಂಖ್ಯೆಯ ಪಕ್ಷಾಂತರಿಗಳು ಕಾಂಗ್ರೆಸ್ ತೊರೆದಿದ್ದಾರೆ. ಪಶ್ಚಿಮ ಯುಪಿ ಯಲ್ಲಿ ಹಿರಿಯ ನಾಯಕರಾದ ಇಮ್ರಾನ್ ಮಸೂದ್ ಮತ್ತು ಪಂಕಜ್ ಮಲಿಕ್ ಕೂಡ ಪಕ್ಷದಿಂದ ಹೊರಗುಳಿದಿದ್ದು ಇಂಥ ಹಲವು ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಹುಡುಕುವ ಸವಾಲನ್ನು ಕಾಂಗ್ರೆಸ್ ಎದುರಿಸುತ್ತಿದೆ.
ಚುನಾವಣೆ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ, ‘ಲಡ್ಕಿ ಹೂ, ಲಡ್ ಸಕ್ತಿ ಹೂ ( ನಾನು ಹುಡುಗಿ, ನಾನು ಹೋರಾಡಬಲ್ಲೆ)’ ಎಂಬ ಹೇಳಿಕೆಯೊಂದಿಗೆ ಪಕ್ಷದ ಪ್ರಚಾರದ ಕೇಂದ್ರಬಿಂದುವಾಗಿದ್ದಾರೆ.
ಮೂರು ದಶಕಗಳಿಂದ ಉತ್ತರ ಪ್ರದೇಶದಲ್ಲಿ ಅಧಿಕಾರದಿಂದ ಹೊರಗುಳಿದ
ಕಾಂಗ್ರೆಸ್, ಈ ರ್ಷ ಪುನಃ ಅಧಿಕಾರ ಹಿಡಿಯುವ ದಾರಿಯಲ್ಲಿ ಬಿಜೆಪಿ ಹಾಗೂ ಸಮಾಜವಾದಿ ಪಕ್ಷ ಟಫ್ ಫೈಟ್ ಎದುರಿಸುತ್ತಿದೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27, ಮತ್ತು ಮಾರ್ಚ್ 3 ಮತ್ತು 7 ರಂದು ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.