ಜಾರ್ಖಂಡ್‌ನಲ್ಲಿ ತಲೆ ಎತ್ತಲಿವೆ 100 ಕೃಷಿ ಶಾಲೆಗಳು

ರಾಂಚಿ: ಕೃಷಿ ವಲಯವನ್ನು ಅಭಿವೃದ್ಧಿಗೊಳಿಸುವ ನಿಟ್ಟನಲ್ಲಿ ಕ್ರಾಂತಿಕಾರಿ ಹೆಜ್ಜೆ ಇಟ್ಟಿರುವ ಜಾರ್ಖಂಡ್‌ ಸರ್ಕಾರ ರೈತರಿಗಾಗಿ ಶಾಲೆ ತೆರೆಯಲು ಮುಂದಾಗಿದೆ. ಈ ಶಾಲೆಗಳಲ್ಲಿ ರಾಜ್ಯದ ರೈತರಿಗೆ ಕೃಷಿಯ ವೈಜ್ಞಾನಿಕ ಮಾದರಿಗಳ ಬಗ್ಗೆ ತರಬೇತಿ ನೀಡುವುದು ಜಾರ್ಖಂಡ್‌ ಸರ್ಕಾರದ ಉದ್ದೇಶವಾಗಿದೆ. ಮುಂದಿನ 3 ವರ್ಷಗಳಲ್ಲಿ ಹಂತ ಹಂತವಾಗಿ ಜಾರ್ಖಂಡ್‌ನಲ್ಲಿ 100 ಕೃಷಿ ಶಾಲೆಗಳನ್ನು ತೆರೆಯುವುದಾಗಿ ಹೇಮಂತ್‌ ಸುರೇನ್‌ ನೇತೃತ್ವದ ಸರ್ಕಾರ ಘೋಷಿಸಿದೆ.

“ಕೃಷಿಕ್‌ ಪಾಠಶಾಲಾ” (ಕೃಷಿ ಶಾಲೆ) ಗಳ ಮೂಲಕ ಕೃಷಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಲು ರೈತರಿಗೆ ಉತ್ತೇಜನ ನೀಡುವುದು. ಅದರ ಜೊತೆ ಜೊತೆಗೆ ಕೃಷಿ ಉತ್ಪಾದನೆಯನ್ನೂ ಹೆಚ್ಚಿಸಿ ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಕೃಷಿ, ಪಶು ಸಂಗೋಪನೆ ಹಾಗೂ ಕೃಷಿ ಸಹಕಾರಿ ಇಲಾಖೆಗಳ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಭಾಗವಾಗಿಯೂ ಕೃಷಿಕ್‌ ಪಾಠಶಾಲಾಗಳು ಕಾರ್ಯ ನಿರ್ವಹಿಸಲಿವೆ. ಈ ಮೂಲಕ ಕೃಷಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳ ಮಾಹಿತಿಯನ್ನು ರೈತರಿಗೆ ಒಂದೇ ವೇದಿಕೆಯಡಿ ನೀಡುವುದು ಇನ್ನೂ ಸುಲಭವಾಗಲಿದೆ.

ಬಿರ್ಸಾ ವಿಕಾಸ್‌ ಯೋಜನೆಯ ಭಾಗವಾಗಿ ಮೊದಲ ಹಂತದಲ್ಲಿ 17 ಕೃಷಿ ಶಾಲೆಗಳು ಆರಂಭಗೊಳ್ಳಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಇದೇ ಮಾದರಿಯ 100 ಶಾಲೆಗಳನ್ನು ತೆರೆಯಲು ಜಾರ್ಖಂಡ್‌ ಸರ್ಕಾರ ಸಿದ್ಧತೆ ನಡೆಸಿದೆ. ಇನ್ನೂ ಕ್ಲಸ್ಟರ್‌ ವಿಧಾನದಡಿಯಲ್ಲಿ ಪ್ರತಿ ಕೃಷಿ ಶಾಲೆಯೂ 3 ರಿಂದ 5 ಹಳ್ಳಿಗಳೊಂದಿಗೆ ಸಂಪರ್ಕ ಹೊಂದಿರಲಿವೆ ಎಂದು ಅಲ್ಲಿನ ಕೃಷಿ, ಪಶುಸಂಗೋಪನೆ ಮತ್ತು ಸಹಕಾರಿ ಕಾರ್ಯದರ್ಶಿ ಅಬು ಬಕರ್‌ ಸಿದ್ಧಿಖಿ ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?