ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ಅವರು ಅನಾರೋಗ್ಯ ಕಾರಣದಿಂದ ಕಳೆದ ವಾರಗಳ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಜನವರಿ 26ರಂದು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.

‘ಕರಾವಳಿ ಕೋಗಿಲೆ’ ಖ್ಯಾತಿಯ ಸಂಗೀತ ಗುರುಗಳಾದ ವಿದುಷಿ ಶ್ರೀಮತಿ ಶೀಲಾ ದಿವಾಕರ್ ಅವರು ಇಂದು ಕಡಲೂರಿನ ಸಂಗೀತ ಲೋಕವನ್ನು ಶೋಕಸಾಗರದಲ್ಲಿ ಮುಳುಗಿಸಿ ಜೀವಸ್ವರಲೀನವಾಗಿದ್ದಾರೆ. ಶೀಲಾರವರು ಮಂಗಳೂರು, ಉಡುಪಿ, ಮತ್ತು ಕಾಸರಗೋಡು ತ್ರಿವಳಿ ಜಿಲ್ಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಅಮ್ಮನ ಮಮತೆಯಿತ್ತು ಸಂಗೀತ ಕಲಿಸಿದ ಆರ್ಯಭಟ ಪುರಸ್ಕೃತೆ. ಭರತನಾಟ್ಯ ಹಾಡುಗಾರಿಕೆ, ಶಾಸ್ತ್ರೀಯ ಕಛೇರಿ, ಸುಗಮ ಸಂಗೀತದಲ್ಲಿ ಉತ್ಕೃಷ್ಟ ಗುಣಮಟ್ಟದ ಆಯ್ಕೆಯಾಗಿದ್ದ ಇವರು ಯಾವುದೇ ರಾಗ – ತಾಳದಲ್ಲಿ ಸರ್ವಾಂಗ ಸೊಗಸಾಗಿ ಹಾಡಬಲ್ಲ ಮೇರು ಪ್ರತಿಭೆಯಾಗಿದ್ದರು.

ಕಳೆದ 30 ವರ್ಷಗಳಿಂದ ಸಂಗೀತ ರಂಗದ ನೂರಾರು ಮೇರು ಪ್ರತಿಭೆಗಳಿಗೆ ಗುರುವಾಗಿರುವ ಶೀಲಾ ದಿವಾಕರ್ ಅವರು ಅನೇಕ ರಾಜ್ಯ ಹಾಗೂ ರಾಷ್ಟಮಟ್ಟದ ಪ್ರಶಸ್ತಿಯನ್ನ ಪಡೆದುಕೊಂಡಿದ್ದರು. ಅಲ್ಲದೇ ಆರ್ಯಭಟ ಪ್ರಶಸ್ತಿ ಪುರಸ್ಕೃತೆಯು ಆಗಿದ್ದ ಶೀಲಾ ದಿವಾಕರ್ ಅವರು 3000ಕ್ಕೂ ಅಧಿಕ ಪ್ರತಿಷ್ಠಿತ ವೇದಿಕೆಗಳಲ್ಲಿ ಕಾರ್ಯಕ್ರಮ ನೀಡಿದ್ದರು. ಸಂಗೀತ ಕ್ಷೇತ್ರದಲ್ಲಿ ಅವಳಿ ಸಹೋದರಿಯರಾಗಿ ಶೀಲ ಮತ್ತು ಶೈಲ ಅವರು ಪ್ರಸಿದ್ಧಿ ಪಡೆದುಕೊಂಡಿದ್ದರು. ಶೀಲಾ ದಿವಾಕರ್ ಅವರು ಸಾವು ಸಂಗೀತ ಲೋಕಕ್ಕೆ ಅಭಿಮಾನಿ ಹಾಗೂ ಶಿಷ್ಯವೃಂದ ತುಂಬಲಾರದ ನೋವುಂಟು ಮಾಡಿದೆ. ಹಲವು ಮಂದಿ ಗಣ್ಯರು ಕಂಬನಿ ಮಿಡಿದಿದ್ದಾರೆ.

Related Posts

Leave a Reply

Your email address will not be published.

How Can We Help You?