ಬಿಲ್ಲವ ಸಂಘಟನೆಗಳಿಂದ ಗುರುವಿನ ಕಡೆಗೆ ಸ್ವಾಭಿಮಾನದ ನಡಿಗೆ ಜಾಥಾಕ್ಕೆ ಚಾಲನೆ

ಗಣರಾಜ್ಯೋತ್ಸವ ಪರೇಡ್ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಸಮಸ್ತ ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ `ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಪ್ರಾರಂಭವಾಗಿದೆ.

ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು. ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.

ವಾಹನ ಜಾಥಾ ಆರಂಭದಲ್ಲಿ ಮಾತನಾಡಿದ ಹರೀಶ್ ಕುಮಾರ್, ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುವ ಈ ನಡಿಗೆ ಇದು ರಾಜಕೀಯ ಪ್ರೇರಿತವಾದ ಹೋರಾಟ ಅಲ್ಲ ಸ್ವಾಭಿಮಾನದ ನಡಿಗೆ. ಇಲ್ಲಿ ಪಕ್ಷ, ಧರ್ಮ ಜಾತಿ ಬೇಧ ಮರೆತು ಹಳದಿ ಶಾಲಿನ ಗೌರವದೊಂದಿಗೆ ನಡೆಯುತ್ತಿದೆ ಎಂದರು.

ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತ ಕ್ರಾಂತಿಗಳು. ಆ ಪ್ರಕಾರ ಗಣರಾಜ್ಯೋತ್ಸವದಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 6ಕ್ಕೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ.
ಈ ಸಂದರ್ಭ ಮಾಜಿ ಶಾಸಕ ಜೆ.ಆರ್. ಲೋಬೊ, ಐವನ್ ಡಿಸೋಜಾ, ವಿಶ್ವಾಸ್ದಾಸ್ ಕುಮಾರ್ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.