ದೆಹಲಿಯ ವಿವಿ ಹಂಸರಾಜ್ ಕಾಲೇಜು ಕ್ಯಾಂಪಸ್ನಲ್ಲಿ ಗೋಶಾಲೆಗೆ ವಿದ್ಯಾರ್ಥಿ ಫೆಡರೇಶನ್ ಆಕ್ಷೇಪ

ದೆಹಲಿ ವಿವಿಯ ಹಂಸರಾಜ್ ಕಾಲೇಜಿನ ಕ್ಯಾಂಪಸ್ನಲ್ಲಿ ಮಹಿಳಾ ಹಾಸ್ಟೆಲ್ ಗೆ ಮೀಸಲಾದ ಸ್ಥಳದಲ್ಲಿ ಗೋರಕ್ಷಣೆ ಮತ್ತು ಸಂಶೋಧನಾ ಕೇಂದ್ರ ಪ್ರಾರಂಭಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ.
ಗೋವಿನ ವೈವಿಧ್ಯತೆಗಳ ಕುರಿತ ಸಂಶೋಧನೆ ನಡೆಸುವುದು ಕಾಲೇಜಿನ ಉದ್ದೇಶ ಎಂದು ಹೇಳಲಾಗಿದೆ. ಆದರೆ ಹಸುವನ್ನು ಸಾಕಿ ಏನು ಮಾಡುತ್ತೀರಿ ಎನ್ನುವ ಪ್ರಶ್ನೆಗೆ ಕಾಲೇಜು, ಇದರಿಂದ ವಿದ್ಯಾರ್ಥಿಗಳಿಗೆ ಶುದ್ಧ ಹಾಲು ಮತ್ತು ತುಪ್ಪ ನೀಡುತ್ತೇವೆ. ಕಾಲೇಜು ಗೋಬರ್ ಅನಿಲ ಘಟಕವನ್ನು ಪ್ರಾರಂಭಿಸಲು ಯೋಜಿಸಿದ್ದು, ಹಸು ಸಾಕಣೆಯಿಂದ ಅದಕ್ಕೆ ಬೇಕಾದ ಸಂಪನ್ಮೂಲವೂ ಸಿಗಲಿದೆ ಎನ್ನುವ ಹಾರಿಕೆಯ ಉತ್ತರವನ್ನು ನೀಡಿದೆ.
ಸ್ವಾಮಿ ದಯಾನಂದ್ ಸರಸ್ವತಿ ಸಂವರ್ಧನ್ ಮತ್ತು ಸಂಶೋಧನಾ ಕೇಂದ್ರವನ್ನು ಒಂದು ಹಸುವಿನಿಂದ ಪ್ರಾರಂಭಿಸಲಾಗಿದ್ದು, ಕಾಲೇಜು ಆವರಣದಲ್ಲಿ ತೆರೆಯಲಾಗಿದೆ. ಪ್ರಯೋಜನೆಗಳು ಸಾಕಾರಗೊಂಡರೆ ಈ ಯೋಜನೆ ವಿಸ್ತರಿಸಲಾಗುವುದು ಎಂದು ಪ್ರಾಂಶುಪಾಲ ಡಾ. ರಾಮ ಶರ್ಮಾ ಹೇಳಿದ್ದಾರೆ.
ಗೋ ಸಾಕಾಣೆ ಮಾತ್ರವಲ್ಲದೆ ಹವನಗಳನ್ನು ನಡೆಸುವ ಉದ್ದೇಶವನ್ನೂ ಕಾಲೇಜು ತಿಳಿಸಿದೆ. “ನಮ್ಮದು ಡಿಎವಿ ಟ್ರಸ್ಟ್ ಕಾಲೇಜು ಮತ್ತು ಅದರ ನೆಲೆ ಆರ್ಯ ಸಮಾಜ. ಆ ಸಂಪ್ರದಾಯಕ್ಕೆ ಅನುಗುಣವಾಗಿ, ಪ್ರತಿ ತಿಂಗಳ ಮೊದಲ ದಿನದಂದು ಹವನ ನಡೆಸುತ್ತೇವೆ. ಇದರಲ್ಲಿ ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಈ ಹವನದ ಕಾರ್ಯಕ್ರಮದಲ್ಲಿ ಆ ತಿಂಗಳು ಜನ್ಮದಿನ ಹೊಂದಿರುವವರನ್ನು ನಾವು ಅಭಿನಂದಿಸುತ್ತೇವೆ. ಹವನದ ಉರಿಗಾಗಿ ಪ್ರತಿ ತಿಂಗಳು ಮಾರುಕಟ್ಟೆಯಿಂದ ಶುದ್ಧ ತುಪ್ಪ ಖರೀದಿಸಬೇಕಿತ್ತು. ಇದೀಗ ಗೋಸಾಕಣೆಯಿಂದ ಸ್ವಾವಲಂಬಿಗಳಾಗಿದ್ದೇವೆ” ಎಂದು ಪ್ರಾಂಶುಪಾಲ ಡಾ. ರಾಮ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹಂಸರಾಜ್ ಕಾಲೇಜಿನ ವಿದ್ಯಾರ್ಥಿ ಫೆಡರೇಷನ್ ಆಫ್ ಇಂಡಿಯಾ ಘಟಕವು ಮಹಿಳಾ ಹಾಸ್ಟೆಲಿಗೆ ಮೀಸಲಾದ ಸ್ಥಳದಲ್ಲಿ ಸಂಶೋಧನಾ ಕೇಂದ್ರದ ಹೆಸರಲ್ಲಿ ಗೋಶಾಲೆ ನಿರ್ಮಿಸಲಾಗಿದೆ ಎಂದು ಆರೋಪಿಸಿದೆ.