80 ಜಾತಿಯ ಪಕ್ಷಿಗಳನ್ನು ಗುರುತಿಸಿದ ತಮಿಳುನಾಡು

ತಮಿಳುನಾಡಿನಾದ್ಯಂತ ಏಕಕಾಲದಲ್ಲಿ ನಡೆಯುತ್ತಿರುವ ಪಕ್ಷಿಗಣತಿಯಲ್ಲಿ 80 ವಿವಿಧ ಜಾತಿಯ ಸುಮಾರು ಹತ್ತು ಲಕ್ಷ ಪಕ್ಷಿಗಳನ್ನು ಗುರುತಿಸಲಾಗಿದೆ. ಜನವರಿ 28 ಮತ್ತು 29 ರಂದು ನಡೆದ ಮೊದಲ ಹಂತದ ಸಮೀಕ್ಷೆಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಫ್ಲೆಮಿಂಗೋ ವಲಸೆ ಪಕ್ಷಿಗಳು ಕಂಡು ಬಂದಿವೆ. ಕ್ಯಾಲಿಮೆರ್, ವಲಿನೋಕ್ಕಂ, ಧನುಷ್ಕೋಡಿ, ತೂತುಕುಡಿ ಮತ್ತು ಕನ್ಯಾಕುಮಾರಿಯಲ್ಲಿ ನಡೆಸಿದ ಗಣತಿಯಲ್ಲಿ ಬಹುಪಾಲು ಫ್ಲೆಮಿಂಗೋ ಸೇರಿದಂತೆ ವಿವಿಧ ಜಾತಿಯ ಪಕ್ಷಿಗಳು ಪತ್ತೆಯಾಗಿವೆ. ಕ್ಯಾಲಿಮರ್ ಮತ್ತು ವಲಿನೋಕ್ಕಂನಲ್ಲಿ (10,000), ಧನುಷ್ಕೋಡಿಯಲ್ಲಿ (2,000), ತುತುಕುಡಿ (2,000) ಹಾಗೂ ಕನ್ಯಾಕುಮಾರಿಯಲ್ಲಿ (600) ಫ್ಲೆಮಿಂಗೋಗಳಿವೆ.
‘2020 ಮತ್ತು 2021ರಲ್ಲಿ ರಾಜ್ಯದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಕಂಡುಬಂದಿವೆ. ಹೆಚ್ಚು ಮಳೆಯು ಪರಿಸರ ವ್ಯವಸ್ಥೆಯನ್ನು ಪೋಷಿಸಿದ್ದು, ಇದು ಹಕ್ಕಿಗಳು ವಲಸೆ ಬಂದು ಗೂಡು ಕಟ್ಟಲು ಕಾರಣವಾಗಿದೆ’ ಎಂದು ಅರಣ್ಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ.
ಅದಲ್ಲದೇ, ಕ್ರೌಂಚ ಪಕ್ಷಿ (ಯುರೇಷಿಯನ್ ಕರ್ಲ್ಯೂ), ವಿಂಬ್ರೆಲ್ (ಚಿಕ್ಕ ಕ್ರೌಂಚ ) ಮತ್ತು ರುಡ್ಡಿ ಟರ್ನ್ಸ್ಟೋನ್ ಜಾತಿಯ ಅಪರೂಪದ ವಲಸೆ ಪಕ್ಷಿಗಳು ಪತ್ತೆಯಾಗಿವೆ. ಇದರ ಜೊತೆಗೆ ಮಾರ್ಷ್ ಸ್ಯಾಂಡ್ಪೈಪರ್ಸ್, ಲೆಸ್ಸರ್ ಸ್ಯಾಂಡ್ ಪ್ಲೊವರ್, ರೆಡ್ಶಾಂಕ್ಸ್, ಗ್ರೇಟ್ ನಾಟ್ಸ್ ಪ್ರಬೇಧದ ಪಕ್ಷಿಗಳು ಕಂಡುಬಂದಿವೆ. ರೆಡ್ಶಾಂಕ್ಸ್ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ (BNHS), ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (WII), ಸಲೀಂ ಅಲಿ ಸೆಂಟರ್ ಫಾರ್ ಆರ್ನಿಥಾಲಜಿ ಮತ್ತು ನ್ಯಾಚುರಲ್ ಹಿಸ್ಟರಿ (SACON) ಸಹಯೋಗದಲ್ಲಿ ತಮಿಳುನಾಡು ಅರಣ್ಯ ಇಲಾಖೆಯು ಪಕ್ಷಿ ಗಣತಿಯನ್ನು ನಡೆಸುತ್ತಿದ್ದು, 45 ನಾಗರಿಕ ಸಂಘಗಳು, ಎನ್ಜಿಒಗಳು ಮತ್ತು 10 ವಿಶ್ವವಿದ್ಯಾಲಯ ಮತ್ತು ಕಾಲೇಜುಗಳು ಈ ಗಣತಿಯಲ್ಲಿ ಭಾಗವಹಿಸಿವೆ ಎಂದು ವನ್ಯಜೀವಿ ಇಲಾಖೆ ತಿಳಿಸಿದೆ.