ಜಾತಿನಿಂದನೆ ಪ್ರಕರಣ: ಹೊರಟ್ಟಿ ವಿಚಾರಣೆಗೆ ತಡೆಯಾಜ್ಞೆ

ಜಾತಿ ನಿಂದನೆ ಆರೋಪ ಪ್ರಕರಣ ಎದುರಿಸುತ್ತಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಸಭಾಪತಿ ಬಸವರಾಜ ಹೊರಟ್ಟಿ, ಜಾತಿನಿಂದನೆ ಆರೋಪದ ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಪ್ರಕರಣದಲ್ಲಿ ಉಳಿದವರ ವಿರುದ್ಧ ಪೊಲೀಸರು ಮುಂದಿನ ಪ್ರಕ್ರಿಯೆ ಕೈಗೊಳ್ಳಬಹುದು ಎಂದು ಇದೇ ವೇಳೆ ಪೀಠವು ಸ್ಪಷ್ಟಪಡಿಸಿದೆ. ಪ್ರಕರಣದ ದೂರುದಾರರಿಗೆ ತುರ್ತು ನೋಟಿಸ್ ಹಾಗೂ ರಾಜ್ಯ ಸರ್ಕಾರ ಸೇರಿ ಉಳಿದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆ ಮುಂದೂಡಿತು.
ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿರುವ ಸರ್ವೋದಯ ಶಿಕ್ಷಣ ಟ್ರಸ್ಟ್ಗೆ ಸೇರಿದ ಶಿಕ್ಷಣ ಸಂಸ್ಥೆಯಲ್ಲಿ ಬಸವರಾಜ ಹೊರಟ್ಟಿ ಅವರ ನಾಮಫಲಕ ತೆಗೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಈ ಘಟನೆ ನಡೆದ ಸ್ಥಳದಲ್ಲಿ ಅರ್ಜಿದಾರರು ಇರಲಿಲ್ಲ. ಎಫ್ಐಆರ್ನಲ್ಲೂ ಅವರ ವಿರುದ್ಧ ಗಂಭೀರ ವಿಚಾರಗಳು ಇಲ್ಲ. ಅರ್ಜಿದಾರರು ವಿಧಾನ ಪರಿಷತ್ ಸಭಾಪತಿಯಾಗಿದ್ದು, ಸಾಂವಿಧಾನಿಕ ಹುದ್ದೆಯಲ್ಲಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪ್ರಕರಣವನ್ನು ನ್ಯಾಯಾಲಯ ಸೂಕ್ಷ್ಮವಾಗಿ ಪರಿಗಣಿಸಬೇಕಾಗುತ್ತದೆ. ಮೇಲ್ನೋಟಕ್ಕೆ ಈ ಹಂತದಲ್ಲಿ ತಡೆ ನೀಡಬಹುದಾಗಿದೆ ಎಂದ ಪೀಠವು ಹೊರಟ್ಟಿ ಅವರ ವಿರುದ್ಧದ ವಿಚಾರಣೆಗೆ ಸೀಮಿತವಾಗಿ ಮಧ್ಯಂತರ ತಡೆ ನೀಡಲಾಗುತ್ತಿದೆ ಎಂದು ಆದೇಶಿಸಿದೆ.
ಬಸವರಾಜ ಹೊರಟ್ಟಿ ಹಾಗೂ ಇತರ ಐವರ ವಿರುದ್ಧ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಜನವರಿ 27ರಂದು ಅಖಲಿ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಪ್ರಕರಣ ದಾಖಲಿಸಿತ್ತು. ಬಸವರಾಜ ಹೊರಟ್ಟಿ ಅವರು ಸರ್ವೋದಯ ಟ್ರಸ್ಟ್ನ ಅಧ್ಯಕ್ಷರಲ್ಲದಿದ್ದರೂ ಅಧ್ಯಕ್ಷರಂತೆ ವರ್ತಿಸುತ್ತಾರೆಂದು ಮಹಾಸಭಾ ಸದಸ್ಯರು ದೂರಿದ್ದರು. ಅಲ್ಲದೇ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರಟ್ಟಿ ಅನುಯಾಯಿಗಳು ಜಾತಿನಿಂದನೆ ಮಾಡಿ, ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಘಟನೆ ಬಗ್ಗೆ ವಿವರಿಸಿದ್ದಾರೆ.
ಇದಕ್ಕೂ ಮುನ್ನ ಜನವರಿ 22 ರಂದು ಮಹಾಸಭಾ ಸದಸ್ಯರು, ಪತ್ರಿಕಾಗೋಷ್ಠಿ ನಡೆಸಿ ಟ್ರಸ್ಟ್ ವ್ಯವಹಾರಗಳಲ್ಲಿ ಹೊರಟ್ಟಿಯವರ ಕೈವಾಡವಿದೆ. ಅವರ ನಿರ್ದೇಶನದಂತೆ ಸರ್ವೋದಯ ಶಿಕ್ಷಣ ಟ್ರಸ್ಟ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಜಾಹೀರಾತು ನೀಡಲಾಗಿದೆ ಎಂದು ಆರೋಪಿಸಿ ಟ್ರಸ್ಟ್ನ ಮೇಲಿನ ಅಧಿಕಾರದ ದಾಖಲೆಗಳನ್ನು ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದರು.