ಜಾರ್ಖಂಡ್‌: ಕಡುಬಡತನದಿಂದ ಐದು ತಿಂಗಳ ಮಗುವನ್ನು ಮಾರಿದ ದಂಪತಿ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಬಂದ ನಂತರ ಹೆತ್ತವರು ಹೆಣ್ಣುಮಕ್ಕಳನ್ನು ಮಾರಾಟ ಮಾಡಿ ಉಳಿದ ಮಕ್ಕಳ ಹಸಿವೆ ನೀಗಿಸುವ ಹಲವು ಸುದ್ದಿಗಳನ್ನು ಇತ್ತೀಚೆಗಿನ ದಿನಗಳಲ್ಲಿ ಓದಿದ್ದೇವೆ. ಆದರೆ, ಇದೀಗ ಅಂತಹುದೇ ಸುದ್ದಿಯೊಂದು ಭಾರತದ ಜಾರ್ಖಂಡ್ ರಾಜ್ಯದಿಂದ ವರದಿಯಾಗಿದೆ. ದಂಪತಿ ತಮ್ಮ ಐದು ತಿಂಗಳ ಮಗುವನ್ನು ರೂ. 5,000 ಕ್ಕೆ ಮಾರಾಟ ಮಾಡಿರುವ ಹೃದಯ ವಿದ್ರಾವಕ ಘಟನೆ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ವರದಿಯಾಗಿದೆ.

ಒಂದು ವರದಿಯ ಪ್ರಕಾರ ಭಾರತವು ವಿಶ್ವ ಹಸಿವು ಸೂಚ್ಯಂಕದಲ್ಲಿ 101ನೇ ಸ್ಥಾನಕ್ಕೆ ಕುಸಿದಿದೆ. ಇದರ ನಡುವೆ ಕಡು ಬಡತನದಿಂದಾಗಿ ಬಜರಂಗ ನಾಯಕ್ ಮತ್ತು ಅವರ ಪತ್ನಿ ಗುಡಿಯಾ ದೇವಿ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಗುಡಿಯಾ ಅವರು ಕ್ಷಯ ರೋಗದಿಂದ ಬಳಲುತ್ತಿದ್ದರು. ಹೀಗಾಗಿ, ಆಕೆಯ ಚಿಕಿತ್ಸೆ ಹಣವಿಲ್ಲದೆ, ದಂಪತಿ ತಮ್ಮ ಮಗುವನ್ನೇ ಮಾರಾಟ ಮಾಡಿದ್ದಾರೆ.

ತಮ್ಮ ಮೂರು ವರ್ಷದ ಮಗಳು ದೀಪಾಲಿ ಕುಮಾರಿಯನ್ನೂ ಮಾರಾಟ ಮಾಡಲು ದಂಪತಿ ಪ್ರಯತ್ನಿಸುತ್ತಿದ್ದಾಗ ಸ್ಥಳೀಯರು ಅವರನ್ನು ತಡೆದು ಸ್ಥಳೀಯ ಆಡಳಿತಕ್ಕೆ ಒಪ್ಪಿಸಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. “ನಮಗೆ ನಾಲ್ವರು ಮಕ್ಕಳಿದ್ದಾರೆ. ಇಬ್ಬರು ಮಕ್ಕಳು (9 ವರ್ಷದ ಆಕಾಶ್ ಕುಮಾರ್ ಮತ್ತು ಖುಷಿ ಕುಮಾರಿ) ಪಾಟ್ನಾ ಬಳಿಯ ಬಿಹ್ತಾ ಎಂಬಲ್ಲಿ ಇಟ್ಟಿಗೆ ಭಟ್ಟಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ನನ್ನ ಹೆಂಡತಿಯ ಚಿಕಿತ್ಸೆಗಾಗಿ, ನಾವು ನಮ್ಮ ಚಿಕ್ಕ ಮಗುವನ್ನು ಮಾರಾಟ ಮಾಡಬೇಕಾಯಿತು” ಎಂದು ಭಜರಂಗ್ ನಂತರ ಪ್ರಶ್ನಿಸಿದ ಮಾಧ್ಯಮ ವಕ್ತಾರರಿಗೆ ಹೇಳಿದ್ದಾರೆ.

ದಂಪತಿ ಮೂಲತಃ ಸಿಮ್ಡೆಗಾದಲ್ಲಿರುವ ಬಂಗ್ರು ಪ್ರದೇಶದವರು. ಅವರು ಪ್ರಸ್ತುತ ಗುಮ್ಲಾದಲ್ಲಿ ನೆಲೆಸಿದ್ದಾರೆ. ಗುಡಿಯಾ ಮತ್ತು ಅವರ ಮೂರು ವರ್ಷದ ಮಗಳು ಸ್ಕ್ರ್ಯಾಪ್ ಅಂಗಡಿಯ ಆಶ್ರಯದಲ್ಲಿ ವಾಸಿಸುತ್ತಿದ್ದಾರೆ. ಭಜರಂಗ್ ಫುಟ್‌ಪಾತ್‌ನಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದಾರೆ. “ಬಡತನದಿಂದಾಗಿ ನಮ್ಮ ನವಜಾತ ಶಿಶುವನ್ನು ನೋಡಿಕೊಳ್ಳಲು ನಮಗೆ ಸಾಧ್ಯವಾಗಲಿಲ್ಲ” ಎಂದು ಗುಡಿಯಾ ಹೇಳಿದ್ದಾರೆ.

ಸ್ಥಳೀಯರು ಮಾಹಿತಿ ನೀಡಿದ ನಂತರ, ಆಡಳಿತವು ಶಿಶುವನ್ನು ಮರಳಿ ತರಲು ಸಾಮಾಜಿಕ ಕಾರ್ಯಕರ್ತರಿಗೆ ಸೂಚಿಸಿದೆ. ಅಧಿಕಾರಿಗಳು ದಂಪತಿಗೆ ಪಡಿತರ ಮತ್ತು ಬಟ್ಟೆಗಳು ಲಭ್ಯವಾಗುವಂತೆ ನೆರವು ನೀಡಿದ್ದಾರೆ. ಗುಡಿಯಾರ ಚಿಕಿತ್ಸೆಗೂ ವ್ಯವಸ್ಥೆ ಮಾಡಿದ್ದಾರೆ ಎಂದು ಸ್ಥಳೀಯ ಸುದ್ದಿಸಂಸ್ಥೆಗಳು ವರದಿ ಮಾಡಿವೆ.

“ಮಗುವನ್ನು ಮಾರಾಟ ಮಾಡಿದ ದಂಪತಿಯನ್ನು ಭೇಟಿ ಮಾಡಿ, ಮಗುವನ್ನು ಮರಳಿ ತರುವಂತೆ ನಾನು ನಗರ ವ್ಯವಸ್ಥಾಪಕ ಮತ್ತು ವಾರ್ಡ್ ಆಯುಕ್ತರಿಗೆ ಸೂಚಿಸಿದ್ದೇನೆ. ಅವರಿಗೆ ಸಮಸ್ಯೆಗಳು ಎದುರಾದರೆ, ಸ್ಥಳೀಯ ಪೊಲೀಸ್ ಠಾಣೆಯು ಮಗುವನ್ನು ಪೋಷಿಸಲು ಸಹಾಯ ಮಾಡುತ್ತದೆ” ಎಂದು ಜಿಲ್ಲಾ ಸರಬರಾಜು ಅಧಿಕಾರಿ ಗುಲಾಮ್ ಸಮ್ದಾನಿ ಹೇಳಿದ್ದಾರೆ.

ಇಟ್ಟಿಗೆ ಭಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಪತ್ತೆ ಮಾಡಲಾಗುತ್ತಿದ್ದು, ಅವರನ್ನು ಅಲ್ಲಿಗೆ ಕೆಲಸಕ್ಕೆ ಕಳುಹಿಸಲು ಸೂಚಿಸಿದ್ದ ದಳ್ಳಾಳಿ ವ್ಯಕ್ತಿಯನ್ನೂ ಪತ್ತೆ ಹಚ್ಚಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರವಿ ಆನಂದ್ ತಿಳಿಸಿದ್ದಾರೆ.

Related Posts

Leave a Reply

Your email address will not be published.

How Can We Help You?