ತೀವ್ರಗೊಳ್ಳುತ್ತಿರುವ ಹಿಜಾಬ್ ವಿವಾದ: ಕಠಿಣ ನಿಲುವು ತಳೆಯದ ಬೊಮ್ಮಾಯಿ ಸರ್ಕಾರ

ಬಹುಸಂಸ್ಕೃತಿಯ ನೆಲೆವೀಡು ಕರ್ನಾಟಕದ ಕರಾವಳಿಯ ಕಾಲೇಜುಗಳಲ್ಲಿ ಕಾಣಿಸಿಕೊಂಡಿರುವ ಹಿಜಾಬ್ ವಿವಾದ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಕೋಮುವಿಭಜನೆಯ ಭಾವನೆ ಸೃಷ್ಟಿಯಾಗುವುದಕ್ಕೆ ಕಾರಣವಾಗುತ್ತಿರುವ ಈ ಬೆಳವಣಿಗೆಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ತಳೆದಿರುವ ನಿಲುವಿಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಉಡುಪಿ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ತೊಡುವ ವಿಷಯದಲ್ಲಿ ಆರಂಭವಾದ ವಿವಾದ ಈಗ ಇನ್ನಷ್ಟು ಹರಡಿ, ಕುಂದಾಪುರದ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದನ್ನು ವಿರೋಧಿಸಿ ಹಿಂದೂ ಯುವಕರು ಕೇಸರಿ ಶಾಲು ಧರಿಸಿ ಪ್ರತಿಭಟಿಸಿದ್ದಾರೆ. ಅದಾದ ನಂತರ ಹಿಜಾಬ್ ಧರಿಸದಂತೆ ಆ ಕಾಲೇಜಿನ ಆಡಳಿತ ಮಂಡಳಿಯೂ ವಿದ್ಯಾರ್ಥಿನಿಯರಿಗೆ ತಿಳಿಸಿದೆ. ಆದರೆ, ತಮ್ಮ ಸಂಪ್ರದಾಯಶೀಲ ವ್ಯವಸ್ಥೆಯಿಂದಾಗಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸದೆ ಕಾಲೇಜಿಗೆ ಬರುವುದು ಸಾಧ್ಯವಿಲ್ಲದ ಸ್ಥಿತಿಯಲ್ಲಿದ್ದಾರೆ.

ಇದೀಗ ಕುಂದಾಪುರದ ಬಂಡಾರ್ಕರ್ ಕಾಲೇಜು, ಶಿವಮೊಗ್ಗದ ಭದ್ರಾವತಿಯ ಸರ್ ಎಂ ವಿಶ್ವೇಶ್ವರಯ್ಯ ಸರ್ಕಾರಿ ಕಾಲೇಜಿಗೂ ಬಿಕ್ಕಟ್ಟು ಹರಡಿದೆ.

ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಸರ್ಕಾರದ ನಿಲುವನ್ನು ಪ್ರಶ್ನಿಸಿದಾಗ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿಸಿ ನಾಗೇಶ್, “ಸರ್ಕಾರ ಸಮವಸ್ತ್ರ ಧರಿಸಿಯೇ ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಎಂದು ಹೇಳಿದೆ. ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳು ಅದನ್ನು ಅನುಸರಿಸಬೇಕಾಗುತ್ತದೆ. ಪ್ರಜಾಸತ್ತಾತ್ಮಕ ದೇಶದಲ್ಲಿ ಎಲ್ಲರೂ ನಿಯಮಗಳನ್ನು ಅನುಸರಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.

ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜಿನಲ್ಲಿ ಹಿಜಾಬ್ ಒಂದು ವಿವಾದವಾದಾಗ ಆಡಳಿತ ಮಂಡಳಿ ತಕ್ಷಣವೇ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ರಘುಪತಿ ಭಟ್‌ರನ್ನು ಕರೆಸಿ ಸಭೆ ನಡೆಸಿತು. ಶಿಕ್ಷಣ ಅಧಿಕಾರಿಗಳು, ಶಾಲಾ ಆಡಳಿತ ಮಂಡಳಿ ಮತ್ತು ಸರ್ಕಾರದ ಪ್ರತಿನಿಧಿಗಳು ಸಮಸ್ಯೆಗೆ ಸಂಬಂಧಿಸಿದವರ ಜೊತೆಗೆ ಹಲವು ಸುತ್ತಿನ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ವಿವಾದ ತೀವ್ರಸ್ವರೂಪ ಪಡೆಯುತ್ತಾ ಹೋದಂತೆ ನಾಡಿನ ರಾಜಕೀಯ ನಾಯಕರು ಸ್ಪಂದಿಸಲು ಆರಂಭಿಸಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಕರ್ನಾಟಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,” ಶಾಲೆ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರದ ವಿಷಯದಲ್ಲಿ ಗೊಂದಲಗಳು ಉಂಟಾಗಬಾರದು. ಉಡುಪಿಯ ಕಾಲೇಜುಗಳಲ್ಲಿ ಆಗಿರುವುದು ರಾಜ್ಯಾದ್ಯಂತ ವಿಸ್ತರಿಸಿದರೆ ಬಹಳಷ್ಟು ದೊಡ್ಡ ಸಮಸ್ಯೆಗಳಾಗುತ್ತವೆ” ಎಂದು ಕಳವಳ ವ್ಯಕ್ತಪಡಿಸಿದರು.

ಆದರೆ ನಮ್ಮ ತಂಡದೊಂದಿಗೆ ಪ್ರತಿಕ್ರಿಯಿಸಿದ ಸಚಿವ ಬಿಸಿ ನಾಗೇಶ, “ಎಲ್ಲಾ ಕಾಲೇಜುಗಳಿಗೂ ಸಮಸ್ಯೆ ವಿಸ್ತರಿಸಿ ಸರ್ಕಾರದ ವೈಫಲ್ಯದ ಬಗ್ಗೆ ಪ್ರಶ್ನೆ ಬಂದರೆ, ಆಗ ನಾವು ನೋಡಿಕೊಳ್ಳುತ್ತೇವೆ, ಪರಿಸ್ಥಿತಿಯನ್ನು ಎದುರಿಸುತ್ತೇವೆ” ಎಂದು ಹೇಳಿದ್ದಾರೆ.

ಕರಾವಳಿಯ ಇತರ ಕಾಲೇಜುಗಳಲ್ಲೂ ವಿದ್ಯಾರ್ಥಿಗಳು ಕೋಮುವಾದಿ ನೆಲೆಯಲ್ಲಿ ವಿಭಜನೆಯಾಗುವ ಸಾಧ್ಯತೆಯ ಆತಂಕ ಸೃಷ್ಟಿಯಾಗಿದೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಗೃಹಸಚಿವ ಅರಗ ಜ್ಞಾನೇಂದ್ರ, “ಶೈಕ್ಷಣಿಕ ಸಂಸ್ಥೆಗಳು ರಾಜಕೀಯೇತರವಾಗಿ ಧಾರ್ಮಿಕವಾಗಿ ತಟಸ್ಥವಾಗಿರಬೇಕು. ಶಾಲೆಗಳ ನಿಯಮಗಳನ್ನು ಪಾಲಿಸುವಂತೆ ಹೆತ್ತವರನ್ನು ಕೋರಿಕೊಳ್ಳುತ್ತೇನೆ” ಎಂದು ಹೇಳಿದ್ದಾರೆ.

ಹಿಜಾಬ್ ವಿವಾದದ ಹಿಂದಿನ ಕೋಮುವಾದಿ ಶಕ್ತಿಗಳ ಪತ್ತೆಗೆ ಸೂಚಿಸಲಾಗಿದೆ ಎಂದು ಗೃಹಸಚಿವರು ಹೇಳಿದ್ದಾರೆ. ಆದರೆ ಅಂತಹ ತನಿಖೆಗೆ ತಂಡ ರಚನೆಯಾಗಿರುವ ಬಗ್ಗೆ ಮಾಹಿತಿಯಿಲ್ಲ. ಪ್ರಸ್ತುತ ಶಿಕ್ಷಣ ಅಧಿಕಾರಿಗಳನ್ನೊಳಗೊಂಡ ಸಮಿತಿಯೊಂದನ್ನು ರಚಿಸಲಾಗಿದ್ದು, ಅದು ತನ್ನ ವರದಿಯನ್ನು ಈ ಶೈಕ್ಷಣಿಕ ಅವಧಿಯ ಅಂತ್ಯದೊಳಗೆ ಸಲ್ಲಿಸಲಿದೆ ಮತ್ತು ಅದಕ್ಕೆ ತಕ್ಕಂತೆ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಬಿಸಿ ನಾಗೇಶ್ ತಿಳಿಸಿದ್ದಾರೆ.

ಹೀಗಾಗಿ ಈ ಶೈಕ್ಷಣಿಕ ಸಾಲಿನಲ್ಲಿ ಹಿಜಾಬ್ ಧರಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳ ಭವಿಷ್ಯವೇನು ಎನ್ನುವುದು ಅಸ್ಪಷ್ಟವಾಗಿದೆ. ಪ್ರೌಢಶಿಕ್ಷಣ ಸಚಿವರೇ ತಿಳಿಸಿರುವಂತೆ, ಪ್ರೌಢ ಶಿಕ್ಷಣ ಮಂಡಳಿ ಅಥವಾ ಸರ್ಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೂಚಿಸುವುದಿಲ್ಲ. ಬದಲಾಗಿ ಶಿಕ್ಷಣ ಕಾಯ್ದೆಯ 11ನೇ ನಿಯಮದ ಪ್ರಕಾರ ಆಯಾ ಶಿಕ್ಷಣ ಸಂಸ್ಥೆಗಳಿಗೆ ಸಮವಸ್ತ್ರ ಸೂಚಿಸುವ ಅಧಿಕಾರ ನೀಡಿದೆ.

ಆದರೆ, ವಿದ್ಯಾರ್ಥಿಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ವಿವರಗಳ ಪ್ರಕಾರ ಬಂಡಾರ್ಕರ್ಸ್ ಕಾಲೇಜಿನ ನಿಯಮ ಪುಸ್ತಕದಲ್ಲಿ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸುವ ಅವಕಾಶವಿದೆ. ಆದರೆ ಇದೀಗ ಸರ್ಕಾರದ ಸೂಚನೆ ಮೇರೆಗೆ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸದಂತೆ ಹೇಳಲಾಗಿದೆ.

ಕರಾವಳಿ ಕೋಮು ವಿಷಯಗಳಲ್ಲಿ ಸೂಕ್ಷ್ಮ ವಲಯವಾಗಿಯೇ ಸುದ್ದಿಯಲ್ಲಿರುತ್ತದೆ. ಭಯೋತ್ಪಾದಕ ಯಾಸೀನ್ ಭಟ್ಕಳ್, ಸಿರಿಯಾದಲ್ಲಿ ಐಎಸ್‌ಐಎಸ್ ಕಮಾಂಡರ್ ಆಗಿರುವ ಶಾಫಿ ಆರ್ಮರ್ ಇದೇ ಪ್ರಾಂತದವರು. ದಕ್ಷಿಣಕನ್ನಡದ ದಿವಂಗತ ಕಾಂಗ್ರೆಸ್ ಮುಖಂಡ ಇದಿನಬ್ಬರ ಮೊಮ್ಮಗಳು ದೀಪ್ತಿ ಮಾರ್ಲ ಅಥವಾ ಮರಿಯಂ ಉಗ್ರರ ಜಾಲವನ್ನು ನಡೆಸುತ್ತಿದ್ದು, ಮುಸ್ಲಿಂ ಯುವಕರನ್ನು ಐಎಸ್‌ಐಎಸ್‌ಗೆ ನೇಮಿಸುತ್ತಿದ್ದಾರೆ ಎಂದು ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಸಿತ್ತು. ಜೊತೆಗೆ, ಜಾಗತಿಕ ಮಟ್ಟದಲ್ಲಿ ನೈತಿಕ ಪೊಲೀಸಗಿರಿಗಾಗಿ ಸುದ್ದಿಯಾದ ಪ್ರದೇಶವಿದು. ಚರ್ಚ್ ಮೇಲಿನ ದಾಳಿಗಳು, ಕೋಮುವಾದಿ ಸಂಘರ್ಷಗಳು ಮತ್ತು ಲವ್ ಜಿಹಾದ್ ಪ್ರಕರಣಗಳಿಗೆ ಪ್ರದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ.

ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವಿದ್ದಾಗ ಕೊವಿಡ್ ಸಾಂಕ್ರಾಮಿಕ ರೋಗಕ್ಕೆ ಸಮುದಾಯವೊಂದನ್ನು ಗುರಿಯಾಗಿಸಲು ಪ್ರಯತ್ನಿಸಿದಾಗ ಅವರು, ಯಾರೇ ಆದರೂ ಕೆಲವು ಪ್ರತ್ಯೇಕ ಪ್ರಕರಣಕ್ಕೆ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ದೂಷಿಸಿದಲ್ಲಿ ಎರಡನೇ ಆಲೋಚನೆಯಿಲ್ಲದೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಹೇಳಿದ್ದರು. ಆದರೆ ಹಿಜಾಬ್ ಪ್ರಕರಣದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಯಾವುದೇ ಸ್ಪಷ್ಟ ನಿಲುವು ತಳೆಯದೆ ಸಮಾಜದ ಸಾಮರಸ್ಯ ಕದಡುವ ಘಟನೆಗೆ ಪರೋಕ್ಷವಾಗಿ ಅವಕಾಶ ನೀಡಿದರೇ ಎಂಬ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂಬ ಟೀಕೆ ವ್ಯಕ್ತವಾಗಿದೆ.

Related Posts

Leave a Reply

Your email address will not be published.

How Can We Help You?