ಜಗದೇಶ್ ಯುಜಿಸಿ ನೇಮಕಕ್ಕೆ ಜೆಎನ್‌ಯು ವಿದ್ಯಾರ್ಥಿ- ಬೋಧಕರ ವಿರೋಧ

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಉಪಕುಲಪತಿ ಎಂ ಜಗದೇಶ್ ಕುಮಾರ್ ಅವರನ್ನು ಯುಜಿಸಿ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ ಮತ್ತು ಶಿಕ್ಷಕರ ಸಂಘವು ಖಂಡಿಸಿದೆ.

2016ರಿಂದ ಸರ್ಕಾರದ ಕಾರ್ಯಸೂಚಿಯನ್ನು ಜಾರಿಗೊಳಿಸಿದ್ದಕ್ಕಾಗಿ ಜಗದೇಶ್ ಅವರಿಗೆ ಈ ಪುರಸ್ಕಾರ ನೀಡಲಾಗುತ್ತಿದೆ ಎಂದು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ಬೋಧಕರು ಆರೋಪಿಸಿದ್ದಾರೆ.

“ಉನ್ನತ ಹುದ್ದೆಗಳ ನೇಮಕಕ್ಕೆ ಪ್ರತಿಭಾವಂತರ ಕೊರತೆಯಿದೆಯೇ? ಯುಜಿಸಿ ಅಧ್ಯಕ್ಷರಾಗಿ ನೇಮಕಗೊಳ್ಳಲು ಅರ್ಹವಾದ ಯಾವುದೇ ಶಿಕ್ಷಣ ತಜ್ಞರು ಇರಲಿಲ್ಲವೇ? ಉನ್ನತ ಹುದ್ದೆಗಳಿಗೆ ನೇಮಕ ಮಾಡಲು ಒಂದೇ ಗುಂಪು ಅರ್ಹವಾಗಿರುತ್ತದೆಯೇ?” ಎಂದು ಜೆಎನ್‌ಯು ಶಿಕ್ಷಕರ ಸಂಘದ (ಜೆಎನ್‌ಯುಟಿಎ) ಕಾರ್ಯದರ್ಶಿ ಮೌಶುಮಿ ಬಸು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಗದೇಶ್ ಅವರು ಜೆಎನ್‌ಯುನಲ್ಲಿನ ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನದ ಅಳವಡಿಕೆಯಂತಹ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರು ತಮ್ಮ ಸ್ವಂತ ಹಣವನ್ನು ಖರ್ಚು ಮಾಡುವಂತೆ ಹೇಳಿದ್ದರು. ಅಂತಹ ವ್ಯಕ್ತಿಯನ್ನು ಯುಜಿಸಿ ಅಧ್ಯಕ್ಷರನ್ನಾಗಿ ಮಾಡಿರುವುದು ನಮಗೆ ಆಘಾತ ಉಂಟುಮಾಡಿದೆ ಎಂದು ಮೌಶುಮಿ ಹೇಳಿದ್ದಾರೆ.

“ಬಜೆಟ್‌ನಲ್ಲಿ ಪ್ರಸ್ತಾಪಿಸಲಾದ ಡಿಜಿಟಲ್ ವಿಶ್ವವಿದ್ಯಾಲಯವನ್ನು ಅವರು ಹೇಗೆ ನಿರ್ಮಿಸುತ್ತಾರೆ ಎಂದು ಯಾರಾದರೂ ಊಹಿಸಲು ಸಾಧ್ಯವೇ?” ಎಂದು ಮೌಶುಮಿ ಪ್ರಶ್ನಿಸಿದ್ದಾರೆ.

ಜೆಎನ್‌ಯು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷೆ (ಜೆಎನ್‌ಯುಎಸ್‌ಯು) ಐಶೆ ಘೋಷ್ ಅವರು ಕೂಡ ಟ್ವಿಟರ್‌ನಲ್ಲಿ ತಮ್ಮ ವಿರೋಧ ವ್ಯಕ್ತಪಡಿಸಿದ್ದು, “ಕಳೆದ 6 ವರ್ಷಗಳಿಂದ ಜಗದೇಶ್ ಅವರು ಜೆಎನ್‌ಯುವನ್ನು ನಾಶ ಮಾಡಿದ್ದಾರೆ. ಈಗ ಅವರು ಯುಜಿಸಿಯ ಅಧ್ಯಕ್ಷರಾಗಲು ಹೊರಟಿದ್ದಾರೆ. ಜಗದೇಶ್ ಅವರು ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡುವಲ್ಲಿ ಪರಿಣತಿ ಹೊಂದಿದ್ದಾರೆ. ಅವರನ್ನು ಯುಜಿಸಿ ಅಧ್ಯಕ್ಷರಾಗಿ ಮಾಡಲು ಬಿಜೆಪಿ ಸರ್ಕಾರ ಏಕೆ ಆಯ್ಕೆ ಮಾಡಿದೆ” ಎಂದು ಬರೆದಿದ್ದಾರೆ.

ಜೆಎನ್‌ಯುಎಸ್‌ಯು ಉಪಾಧ್ಯಕ್ಷ ಸಾಕೇತ್ ಮೂನ್, ”ಸರ್ಕಾರದ ಕಾರ್ಯಸೂಚಿಯನ್ನು ನಿರಂಕುಶವಾದಿಯ ರೀತಿಯಲ್ಲಿ ಜಾರಿಗೊಳಿಸಿದ್ದಕ್ಕಾಗಿ’ ಜಗದೇಶ್ ಅವರಿಗೆ ಬಿಜೆಪಿ ಸರ್ಕಾರ ನೀಡಿರುವ ಬಹುಮಾನ ಇದು” ಎಂದು ಹೇಳಿದ್ದಾರೆ.

2016ರ ಜನವರಿಯಲ್ಲಿ ಜಗದೇಶ್ ಕುಮಾರ್ ಅವರು ಉಪ ಕುಲಪತಿಯಾಗಿ ಅಧಿಕಾರ ಪಡೆದ ನಂತರ ಜೆಎನ್‌ಯು ವಿವಾದದ ಸುಳಿಯಲ್ಲಿ ಸಿಲುಕಿದೆ. 2016ರ ದೇಶದ್ರೋಹದ ಪ್ರಕರಣಗಳು ಮತ್ತು ವಿಸಿ ಕಚೇರಿಯನ್ನು ಹಲವು ಬಾರಿ ಲಾಕ್‌ ಮಾಡಿದ್ದರಿಂದ ಹಿಡಿದು, 2019ರಲ್ಲಿ ನಡೆದ ಜೆಎನ್‌ಯು ಘಟಿಕೋತ್ಸವದ ವೇಳೆ, ಆಗಿನ ಮಾನವ ಸಂಪನ್ಮೂಲ ಸಚಿವರು ಆರು ಗಂಟೆಗಳಿಗೂ ಹೆಚ್ಚು ಕಾಲ ಕಾರ್ಯಕ್ರಮ ನಡೆದ ಸ್ಥಳದಲ್ಲಿ ಸಿಲುಕಿದ್ದು ಸುದ್ದಿಯಾಗಿದ್ದವು.

ಸಂಸತ್ತಿನ ಮೇಲೆ ನಡೆದಿದ್ದ ದಾಳಿಯ ಅಪರಾಧಿ ಅಫ್ಜಲ್ ಗುರುವನ್ನು 2016ರಲ್ಲಿ ಗಲ್ಲಿಗೇರಿಸಿದರ ವಿರುದ್ದ ಪ್ರತಿಭಟನಾ ಕಾರ್ಯಕ್ರಮ ನಡೆಸಿದ್ದರು. ಆ ಕಾರ್ಯಕ್ರಮವನ್ನು ನಡೆಸುವ ವಿಚಾರದಲ್ಲಿ ವಿದ್ಯಾರ್ಥಿಗಳು ಮತ್ತು ಜಗದೇಶ್ ನಡುವೆ ವಾಗ್ವಾದ ನಡೆದು, ಅವರನ್ನು ವಿದ್ಯಾರ್ಥಿಗಳು ಕಚೇರಿಯಲ್ಲಿ ಲಾಕ್ ಮಾಡಿದ್ದರು. ಈ ಘಟನೆ ಜಗದೇಶ್ ಅವರು ವಿಸಿಯಾಗಿ ನೇಮಕಗೊಂಡ ಕೇವಲ ಒಂದು ವಾರದಲ್ಲಿ ನಡೆದು ದೇಶಾದ್ಯಂತ ಮಾಧ್ಯಮಗಳಲ್ಲಿ ವಿಸ್ತೃತವಾಗಿ ವರದಿಯಾಗಿತ್ತು.

“ಯುಜಿಸಿ ಅಧ್ಯಕ್ಷರಾಗಿ, ನಮ್ಮ ದೇಶದ ಯುವ ಮನಸ್ಸುಗಳಿಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಲು ನನಗೆ ಉತ್ತಮ ಅವಕಾಶ ಲಭಿಸಿದೆ. ನಾನು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತ್ವರಿತವಾಗಿ ಅನುಷ್ಠಾನಗೊಳಿಸುವತ್ತ ಗಮನ ಹರಿಸುತ್ತೇನೆ. ದೇಶಾದ್ಯಂತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಜಗದೇಶ್ ಹೇಳಿದ್ದಾರೆ.

Related Posts

Leave a Reply

Your email address will not be published.

How Can We Help You?