ಲತಾ ಮಂಗೇಶ್ಕರ್ ಮೃತದೇಹದ ಮೇಲೆ ನಟ ಶಾರೂಖ್ ಉಗುಳಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ!

ಭಾರತದ ಗಾನಕೋಗಿಲೆ ಲತಾ ಮಂಗೇಶ್ಕರ್ ಅವರ ಅಂತ್ಯಕ್ರಿಯೆ ನಿನ್ನೆ ಮುಂಬೈಯ ಶಿವಾಜಿ ಪಾರ್ಕ್ ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ. ಅವರ ಅಂತಿಮ ದರ್ಶನ ಪಡೆಯಲು ತೆರಳಿದ್ದ ನಟ ಶಾರೂಖ್‌ ಖಾನ್‌ ಅವರು ಲತಾ ಅವರಿಗೆ ಅಂತಿಮ ನಮನ ಸಲ್ಲಿಸಿ, ಎರಡೂ ಕೈಗಳನ್ನು ಮೇಲೆತ್ತಿ ದುವಾ ಮಾಡಿದ್ದರು (ಇಸ್ಲಾಂ ಧರ್ಮದಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ರೀತಿ).

ಈ ವೇಳೆ ಅವರು, ದುವಾ ಆದ ಬಳಿಕ ಶಾರೂಕ್ ಖಾನ್ ಮಾಸ್ಕ್ ತೆಗೆದು ಲತಾ ಮಂಗೇಶ್ಕರ್‌ ಮೃತದೇಹದ ಮೇಲೆ ಬಾಯಿಯಿಂದ ಉಗುಳುವಂತೆ ಕಾಣುವ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ. ಆ ವಿಡಿಯೋವನ್ನು ಹಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಖಾರೂಖ್‌ ಅವರು ಲತಾ ಅವರ ದೇಹದ ಮೇಲೆ ಉಗುಳಿದಿದ್ದಾರೆ ಎಂದು
ಆರೋಪಿಸಿದ್ದಾರೆ. ಕರ್ನಾಟಕದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ, ಬಿಜೆಪಿ ನಾಯಕ ಅಂತರ್‌ಕುಮಾರ್ ಹೆಗ್ಡೆ ಅವರೂ ಕೂಡ ಆ ವಿಡಿಯೋವನ್ನು ಹಂಚಿಕೊಂಡು ಶಾರೂಖ್‌ ವಿರುದ್ದ ಕಿಡಿಕಾರಿದ್ದಾರೆ.

ಇನ್ನೂ ಹಲವಾರು ಬಿಜೆಪಿ ನಾಯಕರು ಶಾರೂಕ್ ಖಾನ್ ವಿರುದ್ದ ಟೀಕೆ ಮಾಡುತ್ತಿದ್ದಾರೆ. ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗಡೆ, ಬಾಲಿವುಡ್ ಖಾನ್ ಗಳ ದರಿದ್ರ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲು. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ. ಇವುಗಳನ್ನು ಬುಡಸಮೇತ ಕಿತ್ತುಹಾಕೋ ತನಕ ಹೀಗೆ…. ಎಂದು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಬರೆದಿದ್ದಾರೆ. ಪೋಸ್ಟ್‌ನ ಸತ್ಯಾಸತ್ಯತೆಯನ್ನು ನೋಡೋಣ…

ಪ್ರತಿಪಾದನೆ: ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಶಾರೂಖ್‌ ಉಗುಳಿದ್ದಾರೆ.
ಸತ್ಯ: ಲತಾ ಮಂಗೇಶ್ಕರ್ ಅಂತಿಮ ದರ್ಶನಕ್ಕೆ ತೆರಳಿದ್ದ ಶಾರೂಖ್‌, ಮುಸ್ಲಿಂ ಸಂಪ್ರದಾಯದಂತೆ ಅವರಿಗೆ ವಿದಾಯ ಹೇಳಿದ್ದಾರೆ. ವಿಡಿಯೋದಲ್ಲಿ ಸೆರೆಯಾಗಿರುವುದು ಉಗುಳುತ್ತಿರುವುಲ್ಲ. ಅದು ಇಸ್ಲಾಂನಲ್ಲಿ, ದುಷ್ಟ ಶಕ್ತಿಗಳು ಅಥವಾ ‘ಸೈತಾನ’ನನ್ನು ದೂರವಿಡಲು ಊದುವ ಬಗೆಯಾಗಿದೆ.

ಇಸ್ಲಾಂ ಧರ್ಮದ ಪ್ರಕಾರ, ನಿಧನರಾದವರ ಆತ್ಮಕ್ಕೆ ಶಾಂತಿಯನ್ನು ಕೋರುತ್ತಾ, ಯಾವುದೇ ಕೆಟ್ಟದ್ದು ಆಗದಿರಲಿ ಎಂದು ಆ ರೀತಿ ಮಾಡಲಾಗುತ್ತದೆ. ಮೃತದೇಹದ ಮುಂದೆ ದುಆ ಓದಿದ ನಂತರ, ಮುಂದಿನ ಜೀವನದಲ್ಲಿ ರಕ್ಷಣೆ ಸಿಗಲಿ ಎಂದು ಊದಿವುದಾಗಿದೆ. ಇದರಲ್ಲಿ ಯಾವುದೇ ಅಪಾರ್ಥ, ಕೆಟ್ಟ ನಡತೆಯಿಲ್ಲ.

ಲತಾ ಅವರು ನಿಧನರಾದ ನಂತರ ಶಾರೂಖ್‌ ಮತ್ತು ಅವರ ಪತ್ನಿ ಗೌರಿ ಖಾನ್‌ ಅವರ ಒಂದು ಫೋಟೋ ಭಾರೀ ವೈರಲ್‌ ಆಗಿದೆ. ಆ ಫೋಟೋದಲ್ಲಿ ಶಾರೂಖ್‌ ಇಸ್ಲಾಂ ಧರ್ಮದ ಸಂಪ್ರದಾಯದಂತೆ ಎರಡು ಕೈಗಳನ್ನು ಎದೆ ಬಳಿ ಹಿಡಿದು ದುಆ ಓದುತಿದ್ದರೆ, ಗೌರಿ ಖಾನ್‌ ಅವರು ಹಿಂದೂ ಸಂಪ್ರದಾಯದಂತೆ ಕೈಮುಗಿದು ಪಾರ್ಥನೆ ಸಲ್ಲಿಸಿದರು. ಇದು ಬಹುತ್ವ, ವಿವಿಧತೆಯ ಆಶಯವುಳ್ಳ ಭಾರತದ ಸಂಸ್ಕೃತಿ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮೆಚ್ಚುಗೆಯನ್ನು ಸಹಿಸಲಾಗದ ಬಲಪಂಥೀಯರು, ಶಾರೂಖ್‌ ಅವರು ದುಆ ಸಲ್ಲಿಸಿ, ಊದುತ್ತಿರುವ ವಿಡಿಯೋವನ್ನು ಉಗುಳಿದ್ದಾರೆ ಎಂದು ಜನರನ್ನು ಹಾದಿತಪ್ಪಿಸುವ ಉದ್ದೇಶದಿಂದ ಹಂಚಿಕೊಂಡಿದ್ದಾರೆ.

Related Posts

Leave a Reply

Your email address will not be published.

How Can We Help You?