ಮಲ್ಟಿಪ್ಲೆಕ್ಸ್ ಮಲತಾಯಿ ಧೋರಣೆ ವಿರುದ್ಧ ನಿರ್ದೇಶಕ ಪ್ರೇಮ್ ಆಕ್ರೋಶ

ನಟ, ನಿರ್ದೇಶಕ ಜೋಗಿ ಪ್ರೇಮ್ ಕನ್ನಡ ಚಿತ್ರಗಳ ಮೇಲೆ ಮಲ್ಟಿಪ್ಲೆಕ್ಸ್ ನಡೆಸುತ್ತಿರುವ ಮಲತಾಯಿ ಧೋರಣೆಯನ್ನು ಖಂಡಿಸಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಸಮಸ್ಯೆ ಬಗೆಹರಿಸುವಂತೆ ಮನವಿ ಸಲ್ಲಿಸಿದ್ದಾರೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಹೋಲಿಸಿದರೆ ಕನ್ನಡ ಚಿತ್ರಗಳ ಸೌಂಡಿಂಗ್ ಪಾಯಿಂಟ್ ಅನ್ನು ಕಡಿಮೆ ಮಟ್ಟದಲ್ಲಿ ಇರಿಸಲಾಗುತ್ತಿದೆ. ಅದೇ ಬೇರೆ ಭಾಷೆಯ ಸಿನಿಮಾಗಳಿಗೆ ಹೆಚ್ಚು ಸೌಂಡಿಂಗ್ ಪಾಯಿಂಟ್ ನೀಡುತ್ತಿದ್ದಾರೆ. ಇದರಿಂದ ಕನ್ನಡ ಸಿನಿಮಾಗಳು ಪ್ರೇಕ್ಷಕನ ನಿರೀಕ್ಷೆಯಂತೆ ಪ್ರದರ್ಶನವಾಗುತ್ತಿಲ್ಲ, ಚಿತ್ರದ ಗುಣಮಟ್ಟ ಕುಸಿಯುತ್ತಿದೆ. ಕನ್ನಡ ಚಿತ್ರಗಳ ಮೇಲೆ ಇಂತಹ ಪಕ್ಷಪಾತದ ನೀತಿ ಸರಿಯಿಲ್ಲ ಎಂದು ಪ್ರೇಮ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈಗಾಗಲೇ ಪ್ರೇಮ್ರ ‘ಏಕ್ ಲವ್ ಯಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರದ ಹಾಡುಗಳಿಗೆ ಬ್ಯಾಕ್ಗ್ರೌಂಡ್ ಮೂಸ್ಯಿಕ್ಗೆ ಕೋಟಿಗಟ್ಟಲೆ ಹಣ ಖರ್ಚು ಮಾಡಿದ್ದು, ಈ ಸಮಸ್ಯೆ ಅವರ ‘ವಿಲನ್’ ಚಿತ್ರಕ್ಕೂ ಕಾಡಿತ್ತು.ಇಂತಹ ಸಮಸ್ಯೆಗಳು ಕನ್ನಡ ಚಿತ್ರಗಳನ್ನು ಕೊಲ್ಲುತ್ತಿದೆ. ಹೀಗಾಗಿ ಕನ್ನಡ ಚಿತ್ರರಂಗದ ಪರವಾಗಿ ಮನವಿ ಸಲ್ಲಿಸುತ್ತಿರುವುದಾಗಿ ಹೇಳಿದ್ದಾರೆ.
ಅಲ್ಲದೆ, ಯುಎಫ್ ಮತ್ತು ಕ್ಯೂಬ್ ಮಾಡಿಸಲು ದಿನಗಟ್ಟಲೇ ಕಾಯಬೇಕಾಗುತ್ತದೆ. ಯುಎಫ್ ಮತ್ತು ಕ್ಯೂಬ್ಗೆ ಚಿತ್ರ ಅಪ್ ಲೋಡ್ ಮಾಡಿಸಲು ಚೆನ್ನೈಗೆ ಹೋಗಬೇಕಾಗುತ್ತದೆ. ಕರ್ನಾಟಕದಲ್ಲಿ ಯಾಕೆ ಯುಎಫ್ ಮತ್ತು ಕ್ಯೂಬ್ ಕಚೇರಿ ಇಲ್ಲ ಎಂದು ಪ್ರಶ್ನಿಸಿದ್ದಾರೆ.
ನಿರ್ದೇಶಕ ಪ್ರೇಮ್ರ ‘ಏಕ್ ಲವ್ ಯಾ’ ಚಿತ್ರ ಫೆಬ್ರವರಿ 24ಕ್ಕೆ ತೆರೆಗೆ ಬರುತ್ತಿದೆ. ನಟ ರಾಣಾ, ನಟಿಯರಾದ ರಚಿತಾ ರಾಮ್, ಗ್ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗೆ ಅರ್ಜುನ್ ಜನ್ಯರ ಸಂಗೀತವಿದೆ. ಚಿತ್ರದ ನಿರ್ಮಾಣವನ್ನು ರಕ್ಷಿತಾ ಪ್ರೇಮ್ ನಿರ್ವಹಿಸಿದ್ದಾರೆ.