ವಿಂಡೀಸ್ ಸೋತರೂ ಗೆದ್ದ ಕ್ರೀಡಾಸ್ಪೂರ್ತಿ; ವೈರಲ್ ಫೋಟೊಗಳಿಗೆ ಅಭಿಮಾನಿಗಳ ಮೆಚ್ಚುಗೆ

ಭಾರತ-ವೆಸ್ಟ್ ಇಂಡೀಸ್ ತಂಡದ ನಡುವಿನ ಬಾಂಧವ್ಯ ಸೋಲು-ಗೆಲುವು ಎಂಬ ಫಲಿತಾಂಶಕ್ಕಿಂತಲೂ ದೊಡ್ಡದು ಎಂಬ ವಿಚಾರವನ್ನು ಎರಡೂ ತಂಡಗಳು ಭಾನುವಾರ ತೋರಿಸಿಕೊಟ್ಟಿವೆ. ಪಂದ್ಯ ಮುಗಿದ ಬೆನ್ನಿಗೆ ಸಿರಾಜ್ ಅಹ್ಮದ್, ಕೀರನ್ ಪೊಲಾರ್ಡ್, ಅಲ್ಜಾರಿ ಜೋಸೆಫ್, ಯಜುವೇಂದ್ರ ಚಾಹಲ್, ನಿಕೋಲಸ್ ಪೂರನ್ ಹಾಗೂ ಸೂರ್ಯಕುಮಾರ್ ಯಾದವ್ ಸೇರಿದಂತೆ ಹಲವು ಆಟಗಾರರು ಒಟ್ಟಾಗಿ ನಿಂತು ಪರಸ್ಪರ ಕುಶಲೋಪರಿ ವಿಚಾರಿಸಿದ್ದಾರೆ, ಹರಟಿದ್ದಾರೆ. ಅಲ್ಲದೆ, ತರೇವಾರಿಯಾಗಿ ಪೋಟೋಗಳಿಗೆ ಫೋಸ್ ನೀಡಿದ್ದಾರೆ.
ಈ ಫೋಟೊಗಳನ್ನು ಬಿಸಿಸಿಐ ಟ್ವೀಟ್ ಮಾಡಿದ್ದು, ಇದೀಗ ಸಾಕಷ್ಟು ವೈರಲ್ ಆಗಿದೆ. ಈ ಫೋಟೊಗಳಿಗೆ ಕಮೆಂಟ್ ಮಾಡಿರುವ ಹಲವರು ’ಅಂತಿಮವಾಗಿ ಕ್ರೀಡಾಸ್ಪೂರ್ತಿ ಗೆದ್ದಿದೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಭಾನುವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಭಾರತದ ವಿರುದ್ಧ ಅತ್ಯಂತ ಹೀನಾಯವಾಗಿ ಸೋಲನುಭವಿಸಿತ್ತು. ಎರಡು ಬಾರಿ ಏಕದಿನ ಮತ್ತು ಟಿ20 ವಿಶ್ವಕಪ್ ಜಯಿಸಿದ್ದ ಮಾಜಿ ಚಾಂಪಿಯನ್ಗಳ ಸೋಲು ಸಾಮಾನ್ಯವಾಗಿ ಎಲ್ಲಾ ಆಟಗಾರರಲ್ಲೂ ಬೇಸರ ತರಿಸಿದ್ದು ನಿಜ. ಆದರೆ, ಈ ಬೇಸರ ಕ್ರೀಡಾಸ್ಫೂರ್ತಿಗೆ ತಡೆಯಾಗಿರಲಿಲ್ಲ.
ವಿಂಡೀಸ್ ಬಾಂಧವ್ಯಕ್ಕೆ ಐಪಿಎಲ್ ಕಾರಣ
ಭಾರತದಲ್ಲಿ ನಡೆಯುವ ದುಬಾರಿ ಐಪಿಎಲ್ ಪ್ರೀಮಿಯರ್ ಲೀಗ್ನಲ್ಲಿ ವೆಸ್ಟ್ ಇಂಡೀಸ್ ತಂಡದ ಆಟಗಾರರಿಗೆ ಭಾರೀ ಬೇಡಿಕೆ ಇದೆ. ಐಪಿಎಲ್ನ ವಿವಿಧ ತಂಡಗಳ ಪರ ಕೀರನ್ ಪೊಲಾರ್ಡ್, ನಿಕೋಲಸ್ ಪೂರನ್, ಸುನೀಲ್ ನರೈನ್, ಡ್ವೇನ್ ಬ್ರಾವೋ, ಕ್ರಿಸ್ ಗೇಲ್, ಆಂಡ್ಯೆ ರಸೆಲ್, ಶಿಮ್ರಾನ್ ಹೆಟ್ಮಯರ್ ಹೀಗೆ ಹಲವು ಆಟಗಾರರು ಕಣಕ್ಕಿಳಿಯುತ್ತಾರೆ.
ವಿವಿಧ ತಂಡಗಳಲ್ಲಿ ಭಾರತದ ಎಲ್ಲಾ ಪ್ರಮುಖ ಆಟಗಾರರ ಜೊತೆ ವೆಸ್ಟ್ ಇಂಡೀಸ್ ತಂಡದ ಆಟಗಾರರು ಬೆರೆತು ಆಡುವುದರಿಂದಲೇ ಎರಡೂ ತಂಡದ ಆಟಗಾರರ ನಡುವೆ ಅತ್ಯುತ್ತಮ ಸ್ನೇಹ ಬಾಂಧವ್ಯ ಇದೆ. ಪಂದ್ಯದ ಫಲಿತಾಂಶ ಏನೇ ಆದರೂ ಈ ಎರಡೂ ತಂಡದ ಆಟಗಾರರು ಸದಾ ಉತ್ತಮ ಸ್ನೇಹಿತರಾಗಿಯೇ ಇರುತ್ತಾರೆ ಎನ್ನುವ ಹೇಳಿಕೆಗೆ ಮೇಲಿನ ಪೋಟೋಗಳೂ ಸಾಕ್ಷಿ ನುಡಿದಿವೆ.