ನದಿ ಜೋಡಣೆ ಯೋಜನೆಗೆ ಗುಜರಾತ್ ಆದಿವಾಸಿಗಳ ವಿರೋಧ

ಕೇಂದ್ರ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಅಧಿವೇಶನದಲ್ಲಿ ಘೋಷಿಸಿದ ಗುಜರಾತ್ನ ಪರ್ ನದಿ, ತಪತಿ ನದಿ ಮತ್ತು ನರ್ಮದಾ ನದಿ ಜೋಡಣೆ ಯೋಜನೆಯನ್ನು ವಿರೋಧಿಸಿ, ಗುಜರಾತ್ನ ದಂಗ್, ವಲ್ಸಾದ್, ಸೂರತ್ ಮತ್ತು ನವಸಾರಿ ಜಿಲ್ಲೆಗಳ ಬುಡಕಟ್ಟು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯದ ರಾಜಧಾನಿ ಗಾಂಧಿನಗರದಲ್ಲಿ ಪ್ರತಿಭಟನಾಕಾರರು ಮೊಕ್ಕಾಂ ಹೂಡಿದ್ದಾರೆ. ತಮ್ಮ ಆಂದೋಲನಕ್ಕೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ನ ಶಾಸಕರು ಬೆಂಬಲಿಸಬೇಕು ಎಂದು ಪ್ರತಿಭಟನಾಕಾರರು ಆಶಿಸಿದ್ದಾರೆ. ನೀರಿನ ಕೊರತೆಯಿರುವ ಸೌರಾಷ್ಟ್ರ ಮತ್ತು ಕಛ್ನ ಪ್ರದೇಶಗಳಿಗೆ ನೀರನ್ನು ವರ್ಗಾಯಿಸುವ ಉದ್ದೇಶವನ್ನು ನದಿ ಜೋಡಣೆ ಯೋಜನೆ ಪ್ರಸ್ತಾಪಿಸಿದೆ.
ಈ ಯೋಜನೆಯ ಅಡಿಯಲ್ಲಿ ಏಳು ಅಣೆಕಟ್ಟುಗಳನ್ನು ನಿರ್ಮಿಸಲಾಗುತ್ತದೆ. ಇದರಿಂದಾಗಿ ಸುಮಾರು 7,500 ಹೆಕ್ಟೇರ್ ಭೂಮಿ ಮುಳುಗುತ್ತದೆ. ಈ ಯೋಜನೆಯು 75 ಹಳ್ಳಿಗಳ ಮೇಲೆ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ, 35,000ಕ್ಕೂ ಹೆಚ್ಚು ಗ್ರಾಮಸ್ಥರನ್ನು ಸ್ಥಳಾಂತರಿಸುತ್ತದೆ ಎಂದು ಬುಡಕಟ್ಟು ಮುಖಂಡರು ಹೇಳುತ್ತಾರೆ.
2007-2008ರಲ್ಲಿ ಇದೇ ಯೋಜನೆಯನ್ನು ಘೋಷಿಸಿದಾಗ ನಡೆದ ಆದಿವಾಸಿಗಳ ತೀವ್ರ ವಿರೋಧ- ಪ್ರತಿಭಟನೆಯಿಂದಾಗಿ ಯೋಜನೆ ಸ್ಥಗಿತಗೊಂಡಿತ್ತು. ನರ್ಮದಾ ಯೋಜನೆಯ ವೈಫಲ್ಯವನ್ನು ಮರೆಮಾಚಲು ಕೇಂದ್ರವು ಈ ಯೋಜನೆಯನ್ನು ರೂಪಿಸುತ್ತಿದೆ ಎಂದು ಬುಡಕಟ್ಟು ಜನರು ಆರೋಪಿಸಿದ್ದಾರೆ.
ಈ ಯೋಜನೆಯ ಪರಿಣಾಮವಾಗಿ ಡ್ಯಾಂಗ್, ವಲ್ಸಾದ್ ಮತ್ತು ತಾಪಿ ಜಿಲ್ಲೆಗಳಲ್ಲಿ ನೂರಾರು ಆದಿವಾಸಿಗಳು ನಿರಾಶ್ರಿತರಾಗುತ್ತಾರೆ. ಹಾಗೂ ತೇಗ, ಬಿದಿರು ಮತ್ತು ಇತರ ಮರಗಳು ಹೇರಳವಾಗಿರುವ ಡ್ಯಾಂಗ್ನ ಕಾಡುಗಳು ಮುಳುಗಿ ಹೋಗುತ್ತವೆ ಎಂದು ಅವರು ಹೇಳಿದ್ದಾರೆ.
ನರ್ಮದಾ ಯೋಜನೆ, ಸ್ಟ್ಯಾಚ್ಯೂ ಆಫ್ ಯೂನಿಟಿ, ಉಕೈ ಮುಂತಾದ ಅನೇಕ ಯೋಜನೆಗಳನ್ನು ನೋಡಿದ್ದೇವೆ. ಅಲ್ಲಿ ತಮ್ಮ ಭೂಮಿ ಕಳೆದುಕೊಂಡು ನಿರಾಶ್ರಿತರಾದ ಆದಿವಾಸಿಗಳಿಗೆ ಇನ್ನೂ ಪರಿಹಾರ ನೀಡಲಾಗಿಲ್ಲ ಎಂದು ಬುಡಕಟ್ಟು ಮುಖಂಡರು ಹೇಳಿದ್ದಾರೆ.
ದಕ್ಷಿಣ ಗುಜರಾತ್ನ ಹಿರಿಯ ಬುಡಕಟ್ಟು ನಾಯಕರ ನಿಯೋಗವು ಗುಜರಾತ್ ಅಸೆಂಬ್ಲಿಯ ವಿರೋಧ ಪಕ್ಷದ ನಾಯಕ ಸುಖರಾಮ್ ರಥ್ವಾರನ್ನು ಭೇಟಿ ಮಾಡಿದೆ. ಚುನಾಯಿತ ಪ್ರತಿನಿಧಿಗಳು ಈ ಯೋಜನೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚಿಸಬೇಕೆಂದು ನಿಯೋಗವು ಒತ್ತಾಯಿಸಿದೆ.
ನದಿ ಜೋಡಣೆ ಯೋಜನೆಯ ಹೆಸರಿನಲ್ಲಿ ನಮ್ಮ ಆದಿವಾಸಿಗಳನ್ನು ಅರಣ್ಯ ಭೂಮಿಯಿಂದ ಸ್ಥಳಾಂತರಿಸಲು ನಾವು ಬಿಡುವುದಿಲ್ಲ. ನಮ್ಮ ಘೋಷವಾಕ್ಯವೆಂದರೆ ‘ಡ್ಯಾಮ್ ಹಟಾವೋ, ದಂಗ್ ಬಚಾವೋ’ ಎಂದು ಬುಡಕಟ್ಟು ಜನರಿಗಾಗಿ ಕೆಲಸ ಮಾಡುತ್ತಿರುವ ಸಾಮಾಜಿಕ ಕಾರ್ಯಕರ್ತ ಮುಖೇಶ್ ಪಟೇಲ್ ಹೇಳಿದ್ದಾರೆ.