ಟರ್ಬನ್ ಆಯ್ಕೆಯಾದರೆ, ಹಿಜಾಬ್ ಏಕೆ ಆಗಬಾರದು: ನಟಿ ಸೋನಂ ಕಪೂರ್ ಪ್ರಶ್ನೆ

ರಾಜ್ಯದಲ್ಲಿ ಆರಂಭವಾಗಿ ದೇಶಾದ್ಯಂತ ಹಬ್ಬುತ್ತಿರುವ ಹಿಜಾಬ್ ವಿವಾದದ ಬಗ್ಗೆ ಬಾಲಿವುಡ್ ನಟಿ ಸೋನಂ ಕಪೂರ್ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಇನ್‍ಸ್ಟಾಗ್ರಾಂ ಸಾಮಾಜಿಕ ಜಾಲತಾಣದ ಖಾತೆಯಲ್ಲಿಎರಡು ಚಿತ್ರಗಳನ್ನು ಕೊಲಾಜ್ ಮಾಡಿರುವ ಫೋಟೋವನ್ನು ಹಂಚಿಕೊಂಡು, “ಟರ್ಬನ್ ಒಂದು ಆಯ್ಕೆಯಾಗಿಬಹುದಾದರೆ, ಹಿಜಾಬ್ ಏಕೆ ಆಗಬಾರದು” ಎಂದು ಪ್ರಶ್ನಿಸಿದ್ದಾರೆ.

ಹಿಜಾಬ್ ವಿರೋಧಿಸುತ್ತಿರುವುದನ್ನು ಖಂಡಿಸಿರುವ ನಟಿ ಸೋನಂ ಕಪೂರ್ ಹಂಚಿಕೊಂಡಿರುವ ಚಿತ್ರದ ಎಡಭಾಗದಲ್ಲಿ ಟರ್ಬನ್ ಧರಿಸಿರುವ ವ್ಯಕ್ತಿಯ ಚಿತ್ರವಿದ್ದು, ಅದರ ಮೇಲೆ “ಇದು ಆಯ್ಕೆಯಾಗಬಹುದು” ಎಂಬ ಸಾಲಿದೆ. ಅದರ ಪಕ್ಕದಲ್ಲಿ ಹಿಜಾಬ್ ಧರಿಸಿರುವ ಮಹಿಳೆಯ ಫೋಟೋವಿದ್ದು, ಅವರ ಮೇಲೆ “ಆದರೆ ಇದು ಸಾಧ್ಯವಿಲ್ಲವೇ?” ಎಂಬ ಸಾಲಿದೆ.

ನಟಿ ರಮ್ಯಾ ಕೂಡ ಹಿಜಾಬ್- ಕೇಸರಿ ಶಾಲು ವಿವಾದದಕ್ಕೆ ಪ್ರತಿಕ್ರಿಯಿಸಿದ್ದರು. ವಿದ್ಯಾರ್ಥಿಗಳ ವಿಡಿಯೊವೊಂದನ್ನು ಹಂಚಿಕೊಂಡಿದ್ದ ಅವರು “ಭಾರತದ ಯುವಜನತೆ ಈ ರೀತಿ ಛಿದ್ರವಾಗಿರುವುದನ್ನು ನೋಡಲು ನನಗೆ ಬೇಸರವಾಗುತ್ತದೆ”ಎಂದಿದ್ದರು.

ಕಳೆದ ಡಿಸೆಂಬರ್‍ನಲ್ಲಿ ಉಡುಪಿಯ ಆರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ನಿರ್ಬಂಧ ಹೇರಿದ ಬಳಿಕ ಇದು ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬಳಿಕ ಕುಂದಾಪುರದ ಕಾಲೇಜಿನಲ್ಲೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಮೇಲೆ ನಿರ್ಬಂಧ ಹೇರಲಾಯಿತು. ಅಲ್ಲಿಂದ ಕೇಸರಿ ಶಾಲು ವಿವಾದ ಆರಂಭವಾಗಿ ಉಳಿದ ಜಿಲ್ಲೆಗಳಿಗೂ ಹಬ್ಬಿ ಅಂತರರಾಷ್ಟ್ರೀಯ ಸುದ್ದಿಯಾಗಿದೆ.

ಘರ್ಷಣೆ ಹೆಚ್ಚಾಗುತ್ತಿದ್ದಂತೆ ಫೆಬ್ರವರಿ 5ರಂದು ಕರ್ನಾಟಕ ಸರ್ಕಾರವು, “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವ” ಉಡುಪುಗಳನ್ನು ನಿಷೇಧಿಸುವುದರೊಂದಿಗೆ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ತಡೆ ಆದೇಶವನ್ನು ಪ್ರಶ್ನಿಸಿ ಹಿಜಾಬ್ ಧರಿಸುವ ಧಾರ್ಮಿಕ ಹಕ್ಕಿಗಾಗಿ ಹೋರಾಡುತ್ತಿರುವ ವಿದ್ಯಾರ್ಥಿನಿಯೊಬ್ಬರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. “ಶಾಲಾ-ಕಾಲೇಜುಗಳನ್ನು ಮತ್ತೆ ತೆರೆಯಬಹುದು. ಆದರೆ ವಿದ್ಯಾರ್ಥಿಗಳು ಧಾರ್ಮಿಕ ಉಡುಪುಗಳನ್ನು ವಿಚಾರಣೆ ಮುಗಿಯುವವರೆಗೂ ಧರಿಸುವಂತಿಲ್ಲ” ಎಂಬ ಕರ್ನಾಟಕ ಹೈಕೋರ್ಟ್ ಸೂಚನೆಯು ಭಾರತೀಯ ಸಂವಿಧಾನದ 14, 15, 19, 21 ಮತ್ತು 25ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‍ಗೆ ಸಲ್ಲಿಸಲಾದ ವಿಶೇಷ ಅರ್ಜಿಯಲ್ಲಿ ತಿಳಿಸಲಾಗಿದೆ.

Related Posts

Leave a Reply

Your email address will not be published.

How Can We Help You?